ನವದೆಹಲಿ: ಬಿ ಎಸ್ ಎನ್ ಎಲ್ ಹಾಗೂ ಎಂ ಟಿ ಎನ್ ಎಲ್ ನಷ್ಟದಲ್ಲಿ ಮುನ್ನಡೆಯುವುದನ್ನು ತಪ್ಪಿಸಲು ಕೇಂದ್ರ ಸರಕಾರ ಮಹತ್ವದ ನಿರ್ಧಾರಕ್ಕೆ ಬಂದಿದ್ದು ಈ ಎರಡೂ ಸಂಸ್ಥೆಗಳನ್ನು ಮುಚ್ಚುವುದಿಲ್ಲ, ಬದಲಾಗಿ ವಿಲೀನಗೊಳಿಸಿ ಅಭಿವೃದ್ಧಿಗೊಳಿಸುವ ನಿರ್ಧಾರಕ್ಕೆ ಬಂದಿದೆ. ಎರಡೂ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ನಾಲ್ಕು ಹಂತದ ಯೋಜನೆಯನ್ನು ಸರಕಾರ ಪ್ರಕಟಿಸಿದೆ.
ಟೆಲಿಕಾಂ ಸಂಸ್ಥೆಗಳಾದ ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ಅನ್ನು ವಿಲೀನಗೊಳಿಸಲು ಸರಕಾರ ಬುಧವಾರ ನಿರ್ಧರಿಸಿದೆ. ಪೂರ್ಣ ವಿಲೀನದವರೆಗೆ ಎಂಟಿಎನ್ಎಲ್ – ಬಿಎಸ್ಎನ್ಎಲ್ ನ ಒಂದು ಘಟಕವಾಗಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಪುನರುಜ್ಜೀವನಗೊಳಿಸುವ ಪ್ಯಾಕೇಜ್ ಕೂಡಾ ಮಾಡಿದೆ. ಪ್ಯಾಕೇಜ್ ಗಳಲ್ಲಿ ಪ್ರಮುಖವಾಗಿ ಬಾಂಡ್ ಸಂಗ್ರಹಿಸುವುದು, ಹಣಗಳಿಸುವ ಆಸ್ತಿ ಮತ್ತು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ ಸೇರಿವೆ. ಇದರ ಜೊತೆಗೆ ಸಂಸ್ಥೆಗಳ ಅಭಿವೃದ್ಧಿಗೆ ಸರಕಾರವು ಒಟ್ಟು 29,937 ಕೋಟಿ ರೂಪಾಯಿಗಳನ್ನು ತೊಡಗಿಸಲಿದೆ ಎಂದು ಹೇಳಿದರು. 38,000 ಕೋಟಿ ರೂ. ಮೌಲ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಆಸ್ತಿಗಳನ್ನು ನಾಲ್ಕು ವರ್ಷಗಳಲ್ಲಿ ಹಣವಾಗಿ ಮಾರ್ಪಡಿಸಲಾಗುವುದು. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಎರಡಕ್ಕೂ 4 ಜಿ ಸ್ಪೆಕ್ಟ್ರಮ್ ನೀಡಲಾಗುವುದು ಎಂದು ಸಚಿವರು ಘೋಷಿಸಿದರು. ಅಲ್ಲದೆ ಎರಡೂ ಕಂಪನಿಗಳ ಉದ್ಯೋಗಿಗಳಿಗೆ ವಿ ಆರ್ ಎಸ್ ಪ್ಯಾಕೇಜ್ ನೀಡಲು ಸರಕಾರ ಯೋಜಿಸಿದೆ. ಇದರ ಜೊತೆಗೆ ವೆಚ್ಚವನ್ನು ಕಡಿತಗೊಳಿಸಲು ನೌಕರರಿಗೆ ಸ್ವಯಂಪ್ರೇರಿತ ನಿವೃತ್ತಿ ನೀಡಲಾಗುವುದು ಎಂದರು.