ಬದುಕು ಪುರಾಣ | ನಾವ್ಯಾಕೆ ‘ಶಕುನಿ’ಗಳಾಗುತ್ತಿದ್ದೇವೆ?

June 22, 2025
7:00 AM
ಎಲ್ಲಾದರೂ ನೋಡಿದ್ದೀರಾ.. ಧರ್ಮರಾಯ, ಕೃಷ್ಣ, ಕರ್ಣ, ಭೀಷ್ಮ.. ಮೊದಲಾದ ಹೆಸರುಗಳನ್ನು ನಂನಮ್ಮ ಸಾಧನೆಗಳಿಗೆ ಟಂಕಿಸಿ ಹೊಗಳಿದಾಗ ಉಬ್ಬಿ ಉದ್ದಾಗುತ್ತೇವೆ. ಸಹಜ ಕೂಡಾ. ಆದರೆ ‘ಶಕುನಿ’ ಹೆಸರನ್ನು ಎಲ್ಲಾದರೂ, ಯಾರ ಹೆಸರಿಗಾದರೂ ಟಂಕಿಸಿ ಮಾನಿಸಿದ್ದು ಇದೆಯೇ? ಯಾಕೆ ಹೇಳಿ, ‘ಶಕುನಿ’ಗೆ ಸಾಧಕನ ಸ್ನೇಹ ಬೇಕಾಗಿಲ್ಲ. 
ಶಕುನಿ – ಮೂರಕ್ಷರದ ಪದದಲ್ಲಿ ಹತ್ತಾರು ವ್ಯಕ್ತಿತ್ವಗಳು, ನೂರಾರು ದುರ್ಗುಣಗಳು, ಸಾವಿರಾರು ಕುಟಿಲೋಕ್ತಿಗಳು..  ಶಕುನಿ ಮಹಾಭಾರತದಲ್ಲಿ ಮಾತ್ರವಲ್ಲ, ನಮ್ಮ ಎಡಬಲಗಳಲ್ಲಿ ನುಸುಳಿಕೊಂಡು ಓಡಾಡಿಕೊಂಡಿರುತ್ತಾನೆ. ಪ್ರಾಮಾಣಿಕತೆಯ ಸೋಗಿನಲ್ಲಿ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿರುತ್ತಾನೆ. ಬಹುಶಃ ವರ್ತಮಾನದ ಬದುಕಿನೊಂದಿಗೆ ತಿರುಗುವ ಜನಪ್ರಿಯ ವ್ಯಕ್ತಿ! ಆತ ಅಜ್ಞಾತ. ಎಲ್ಲರೊಂದಿಗೂ, ಎಲ್ಲರೊಳಗೂ ಒಪ್ಪಿಗೆ ಇಲ್ಲದೆ ನುಸುಳುವ ಧೀರ. ದಿಢೀರ್ ಜನಪ್ರಿಯತೆ ಪಡೆಯಬೇಕಾದರೆ ಶಕುನಿಯು ನೇಪಥ್ಯದಲ್ಲಿ ಕುಣಿಯುತ್ತಿರಬೇಕು.
ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ.. ಇಲ್ಲೆಲ್ಲಾ ಶಕುನಿಗಳದ್ದೇ ಪ್ರಭಾವ. ಕೆಲವೊಂದು ಖಾಸಗಿ, ಸರಕಾರಿ ಸಂಸ್ಥೆಗಳಲ್ಲಿ ಒಬ್ಬರಿಗಾದರೂ ಶಕುನಿಯು ಬಂಧುವಾಗುತ್ತಾನೆ. ಆರಂಭದಲ್ಲಿ ಒಗ್ಗಟ್ಟು ಮೇಲ್ಮೆ ಸಾಧಿಸುತ್ತದೆ. ಆಡಳಿತ ನಿರ್ವಹಣೆಯಲ್ಲಿ ಮುಖ್ಯಸ್ಥನಿಗೆ ಗೌರವ, ಕೀರ್ತಿ ಬಂದಾಗ ಶಕುನಿಯ ತಂತ್ರ ಸುದ್ದಿ ಆರಂಭವಾಗುತ್ತದೆ. ಆಡಳಿತ ವ್ಯವಸ್ಥೆಗಳಲ್ಲಿ ಅಪಸ್ವರಗಳನ್ನು ಮೂಡಿಸುತ್ತಾನೆ. ಅಪಪ್ರಚಾರಗಳು ಗರಿಗೆದರುವಂತೆ ಮಾಡುತ್ತಾನೆ. ಇಲ್ಲಸಲ್ಲದ ಆರೋಪಗಳನ್ನು ಪಟ್ಟಿ ಮಾಡುತ್ತಾನೆ. ಸಂಸ್ಥೆಯ ಹಿತಕ್ಕಿಂತಲೂ ಸ್ವಹಿತವೇ ಎದ್ದುಬಿದ್ದು ಮಿಣುಕುತ್ತದೆ. ಕ್ರಮೇಣ ಸಂಸ್ಥೆಯ ವ್ಯವಹಾರಗಳು ಇಳಿಲೆಕ್ಕಕ್ಕೆ ಜಾರುತ್ತಿರುವಾಗ ಅವನೂ ಜಾರಿಕೊಳ್ಳುತ್ತಾನೆ. ಹತ್ತಾರು ಹೆಗಲುಗಳು ಕಟ್ಟಿದ ಸಂಸ್ಥೆಯ ಏಳ್ಗೆ ಅವನಿಗೆ ಬೇಕಾಗಿಲ್ಲ. ಮತ್ತೆ ಇನ್ನೊಂದು ಸಂಸ್ಥೆಯಲ್ಲಿ ಮೀಸೆ ತೂರಿಸಲು ಯತ್ನಿಸುತ್ತಿರುತ್ತಾನೆ.
ಕಲಾ ಕ್ಷೇತ್ರದಲ್ಲೂ  ‘ಶಕುನಿಯದ್ದೇ’ ಕಾರುಬಾರು! ಕಾಲೆಳೆಯುವಿಕೆ, ಕಪಟ, ಪರದೂಷಣೆಗಳಿಂದ ‘ಸುಭಗ’ನೆಂದು ಬಿಂಬಿಸುವ ಕ್ಷಣಗಳು ಹೆಜ್ಜೆಹೆಜ್ಜೆಯಲ್ಲಿ ಗೋಚರಿಸುತ್ತದೆ.  ಅದು ‘ಸಹಜ ಗುಣ’ವಾಗಿ ಸ್ಥಾಪಿತವಾಗಿದೆ! ನಿರಂತರ ಅವಕಾಶಗಳು ಬರಬೇಕೆನ್ನುವ ಧಾವಂತದಲ್ಲಿ ‘ಶಕುನಿ’ ಬುದ್ಧಿಗಳು ಪಠ್ಯವಾಗುತ್ತದೆ. ನೈಜ ಪ್ರತಿಭೆಗಳಿಗೆ ಅನ್ಯಾಯವಾಗುತ್ತದೆ. ರಂಗದಲ್ಲಿ ಕಲಾವಿದ/ಕಲಾವಿದೆ ಅಭಿವ್ಯಕ್ತಿ ಮಾಡುತ್ತಿದ್ದಾಗ ಇಂತಹವರು ‘ಕಟು ವಿಮರ್ಶಕ’ರಾಗುತ್ತಾರೆ! ಹಿರಿಯ ಕಲಾವಿದ ದಿ.ಮಲ್ಪೆ ವಾಸುದೇವ ಸಾಮಗರು ಹೇಳಿದ್ದರು : “ಒಂದು ಪ್ರದರ್ಶನವನ್ನು ವೀಕ್ಷಿಸಿ ಕಲಾವಿದನನ್ನು ಮತ್ತು ಆ ಕಲೆಯನ್ನು ವಿಮರ್ಶಿಸುವುದು ಶಕುನಿ ಬುದ್ಧಿ.”
ಸಾಹಿತ್ಯ ಕ್ಷೇತ್ರವನ್ನು ಗಮನಿಸಿ. ಸ್ಥಾಪಿತವಾದ ಸಾಹಿತ್ಯ, ಸಾಹಿತಿಗೆ ಗೌರವಗಳು ನಿರಂತರ. ಸಾಹಿತಿಯ ಕೃತಿಯು ಎಷ್ಟು ಬೇಗ ಮರುಮುದ್ರಣವಾಗಿದೆ ಎನ್ನುವ ಮಾನದಂಡದಲ್ಲಿ ಕೃತಿಯ ಮೌಲ್ಯ ನಿರ್ಧಾರವಾಗುತ್ತದೆ. ಅಲ್ಲ, ನಿರ್ಧಾರ ಮಾಡುವ ವ್ಯವಸ್ಥೆಗಳಿವೆ. ಜಿಲ್ಲಾ ಮಟ್ಟದಲ್ಲಿ ಹೊರ ಬರುವ ಸಾಹಿತ್ಯಗಳು ರಾಜಧಾನಿಯನ್ನು ತಲಪುವುದಿಲ್ಲ. ಅದರ ಸಾಹಿತಿಗೆ ವಶೀಲಿಗಳು ಅರ್ಥವಾದರೂ ಹಿಂದೆ ಈಜುವುದಿಲ್ಲ. ಹಾಗಾಗಿ ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯಗಳು ಎಷ್ಟೇ ಮೌಲ್ಯಯುತವಾಗಿರಲಿ ಅದು ಗೌರವಕ್ಕೋ, ಪ್ರಶಸ್ತಿಗೆ ಪಾತ್ರವಾಗುವುದಿಲ್ಲ.ಹೀಗೆನ್ನುವಾಗ ಒಂದು ಪ್ರಶಸ್ತಿಯ ಪ್ರಹಸನ ನೆನಪಾಯಿತು. ದೆಹಲಿ ಮೂಲದ ಸಂಸ್ಥೆಯೊಂದು ಗ್ರಾಮೀಣ ಸಾಧನೆಗಳ ಲೇಖನಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಿತ್ತು. ಪ್ರಶಸ್ತಿ ಮೊತ್ತ ಒಂದು ಲಕ್ಷ ರೂಪಾಯಿ. ನನ್ನ ಲೇಖನವೊಂದನ್ನು ಆಯ್ಕೆಗಾಗಿ ಕಳುಹಿಸಿದ್ದೆ. ಒಂದಿವಸ ಫೋನ್ :  “ನಿಮ್ಮ ಲೇಖನವು ಆಯ್ಕೆ ಸಮಿತಿಯ ಮುಂದಿದೆ. ಇಂದು ಪ್ರಶಸ್ತಿ ಘೋಷಣೆಯಾಗುತ್ತದೆ. ಹಾಗಾಗಿ ನಿಮ್ಮ ಫೋಟೋ, ಬಯೋಡಾಟ ತಕ್ಷಣ ಕಳುಹಿಸಿ.” ಖುಷಿಯೋ ಖುಷಿ. ದೆಹಲಿಗೆ ಹೋಗಲು ವಿಮಾನ ಯಾನದ ಕನಸು. ಪ್ರಶಸ್ತಿ ಮೊತ್ತವಾಗಿ ಕೈಗೆ ಬರಲಿರುವ ಒಂದು ಲಕ್ಷದಲ್ಲಿ ಮೂರೋ ನಾಲ್ಕು ಪುಸ್ತಕವನ್ನು ಮುದ್ರಿಸುವ ಯೋಚನೆಗಳ ರಿಂಗಣದಲ್ಲಿ ಸಂಜೆಯಾಗಿತ್ತು. ಪ್ರಶಸ್ತಿ ಘೋಷಣೆಯ ಸುದ್ದಿಯೇ ಇಲ್ಲ. ಅವರ ಜಾಲತಾಣ ನೋಡಿದರೆ ಪ್ರಶಸ್ತಿ ಇನ್ನೊಬ್ಬರ ಪಾಲಾಗಿತ್ತು! ಕಾಣದ ಕೈ ಕೆಲಸ ಮಾಡಿತ್ತು. ಜಾತಿ, ಅಂತಸ್ತುಗಳು ರಿಂಗಣ ಹಾಕಿದ್ದುವು.
“ಜಾಲತಾಣದಲ್ಲಿ ಹರಿದಾಡುವ ಶೇ.80ರಷ್ಟು ಮಾಹಿತಿಗಳ ಸಾಚಾತನ ಸಂಶಯಾಸ್ಪದ,” ಹಿರಿಯರೊಬ್ಬರ ಮಾತನ್ನು ಅಲ್ಲಗೆಳೆಯುವಂತಿಲ್ಲ. ಸತ್ಯದ ನೆತ್ತಿಗೆ ಅಪ್ಪಳಿಸುವ ಸುದ್ದಿಗಳು. ಕೋಮುಭಾವನೆಯನ್ನು ಕೆರಳಿಸುವ ಚಿತ್ರಗಳು. ಸತ್ಯವನ್ನು ಸುಳ್ಳಾಗಿಸುವ ಸಮರ್ಥನೆಗಳನ್ನು ಕಾಣುತ್ತೇವೆ. ಕನ್ನಾಡಿನ ಕಣ್ಮಣಿ ಡಾ.ರಾಜಕುಮಾರ್ ಅವರ ಸಿನಿಮಾಗಳಲ್ಲಿ ಬೈಯುವ ಅಥವಾ ನಿಂದಿಸುವಾಗ ಬಳಸುವ ಪದವೆಂದರೆ ಗರಿಷ್ಟತಮ ‘ಮೂರ್ಖ, ಅಯೋಗ್ಯ..’ ಅಷ್ಟೇ. ಅದರಾಚೆಗೆ ಕೆಟ್ಟ, ಹಗುರ ಶಬ್ದಗಳನ್ನು ಬಳಸಿದ್ದಿಲ್ಲ. ಈಗಿನ ಸಿನೆಮಾ? ಜಾಲತಾಣಗಳಂತೂ ಮುಂದೆ ಹೋಗಿದೆ. ಅಲ್ಲಿ ಬಳಸುವ ಶಬ್ದಗಳು ಬಳಸುವವರ ನಿಜ ಮನಸ್ಸಿನ ಕನ್ನಡಿಯಾಗಿದೆ.
ತಮ್ಮೊಳಗಿರುವ ‘ಶಕುನಿ’ಯನ್ನು ತೆಗೆದುಹಾಕಿದರೆ… ಜಾಲತಾಣಗಳು ಬದುಕಿಗೆ ಸಂವಹನಕ್ಕೆ ಪೂರಕವಾಗುತ್ತದೆ. ಪ್ರತಿ ವ್ಯಕ್ತಿಯಲ್ಲಿ ಸಿದ್ಧಾಂತಗಳು, ತತ್ವಗಳು ಇರುತ್ತವೆ, ಇರಬೇಕು. ಅದು ಆಚರಣೆಯಲ್ಲಿದ್ದು ಚರ್ಚಿತವಾದರೆ ಗೌರವ. ಸಾರ್ವಜನಿಕವಾಗಿ ತಮಗೆ ಬೇಕಾದಂತೆ ಅಡ್ಡಾಡಿ ಅಡುವುದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಂಟಿಸಿದರೆ ಹೇಗಾದೀತು? ಕೇವಲ ವಿರೋಧಕ್ಕಾಗಿ ವಿರೋಧದಿಂದ ವಿಶ್ವಾಸ ವೃದ್ಧಿಯಾಗದು.  ಸಾಮಾಜಿಕವಾಗಿ ಮನಸ್ಸನ್ನು ನೋಯಿಸುವ, ಧರ್ಮವನ್ನು ಹಿಯಾಳಿಸುವ, ಆಚರಣೆಗಳನ್ನು ಪ್ರಶ್ನಿಸುವ, ಜಾತಿ ನಿಂದನೆಯನ್ನು ಮಾಡುವ ವಿದ್ಯಮಾನಗಳು ಕ್ಷಣಿಕ ಸುಖವನ್ನು ನೀಡಬಲ್ಲವು.
‘ಗಡಿಯಲ್ಲಿ ಮತ್ತೆ ಚೀನಾ ಸೇನೆಯ ಕುತಂತ್ರ’, ‘ಚೀನಾ ಮತ್ತೆ ಕುತಂತ್ರ – ಶಾಂತಿಮಂತ್ರ ಪಠಿಸುತ್ತಲೇ ಹೆಲಿಪ್ಯಾಡ್ ನಿರ್ಮಾಣ,’… ಸುದ್ದಿಗಳನ್ನು ಕೇಳಿದ್ದೇವೆ. ಭಾರತ-ಚೀನಾ ಗಡಿರೇಖೆಯ ಪ್ರಕ್ಷುಬ್ಧತೆಯು ‘ಇನ್ನೇನು ಯುದ್ಧವೇ ನಡೆಯಲಿದೆ’ ಎನ್ನುವಷ್ಟು ತೀವ್ರತೆ ಪಡೆಯುತ್ತದೆ. ಎದುರಿಗೆ ಮುಗುಳ್ನಕ್ಕು ಹಿಂದಿನಿಂದ ಚೂರಿ ತೋರಿಸುವ ನಡೆ. ಮತ್ತೆ ಶಾಂತಿ, ಸಮಾಧಾನ, ಸಂಧಾನ ಪ್ರಕ್ರಿಯೆಗಳು! ಪ್ರಪಂಚದ ದೇಶಗಳು ಚೀನಾದ ‘ಕುತಂತ್ರ’ಗಳನ್ನು ಬಿಚ್ಚಿಡುತ್ತಿವೆ. ಭಾರತವೂ ಪ್ರತಿತಂತ್ರವನ್ನು ಹೂಡುವಲ್ಲಿ ಸಫಲವಾಗಿದೆ. ಚೀನಾದಲ್ಲಿ ಶಕುನಿಯ ಜೀವಂತವಾಗಿದ್ದಾನೆ! ಚೀನಾ ಒಂದು ಉದಾಹರಣೆಯಷ್ಟೇ.
ರಾಜ್ಯ, ದೇಶದಲ್ಲಿ ಚುನಾವಣೆ ಹತ್ತಿರವಾಗುತ್ತಿರುವಾಗ ‘ಶಕುನಿ’ ಚಲಾವಣೆಗೆ ಬರುತ್ತಾನೆ. ಪಂಚಾಯತ್ ಮಟ್ಟದಿಂದ ಲೋಕಸಭಾ ಚುನಾವಣೆಗಳ ಪ್ರಚಾರಗಳನ್ನು ನೋಡಿದ್ದೇವೆ. ಪ್ರಚಾರಗಳ ಭರಾಟೆಯಲ್ಲಿ ವಾಸ್ತವ ವಿಚಾರಗಳು ಮರೆಯಾಗುತ್ತವೆ. ದೋಷಾರೋಪಣೆ, ವ್ಯಂಗ್ಯಗಳು, ಪರನಿಂದೆಗಳು ರಾಚುತ್ತವೆ. ಯಾರ್ಯಾರಿಗೋ ಶಕುನಿಯನ್ನೋ, ಮಂಥರೆಯನ್ನೋ ಹೋಲಿಸಿ ಜನಮಾನಸದಲ್ಲಿ ಒಮ್ಮೆ ಮಹಾಭಾರತ, ರಾಮಾಯಣವನ್ನು ನೆನಪಿಸುವಂತಹ ಕೆಲಸವನ್ನು ರಾಜಕಾರಣಿಗಳು ಮಾಡುತ್ತಲೇ ಇರುತ್ತಾರೆ.
ನೀತಿಶತಕದಲ್ಲಿ ಒಂದು ಮಾತು ಬರುತ್ತದೆ. “ಸರ್ಪದಲ್ಲಿ ಮಾಣಿಕ್ಯವಿದೆ ಎಂದು ಯಾರೂ ಅದರ ಹತ್ತಿರ ಹೋಗುವುದಿಲ್ಲ. ಅದೇ ರೀತಿ ಸರ್ಪದಂತಿರುವ ದುಷ್ಟನು, ಸಕಲ ವಿದ್ಯಾಪಾರಂಗತನಾಗಿದ್ದರೂ ಅವನೊಡನೆ ಸ್ನೇಹ ಗಳಿಸಲು ಯಾರೂ ಮುಂದಾಗುವುದಿಲ್ಲ.” ಶಕುನಿಯ ದುಷ್ಟ ಚಿಂತನೆಗೆ ಇದೊಂದು ರೂಪಕ.
ಇನ್ನು ನಮ್ಮ ಬೆನ್ನ ಹಿಂದೆ ಅನೇಕರು, ಅನೇಕ ಬಗೆಯಲ್ಲಿ ಮಾತನಾಡುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಅವರು ನಮ್ಮ ಬದುಕಿನ ತಪ್ಪುಗಳನ್ನು ಹುಡುಕಲು ಹೋಗಿ ಅವರ ಬದುಕಿನಲ್ಲೇ ಬಹುದೊಡ್ಡ ತಪ್ಪುಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಅವರ ಬಗ್ಗೆ ಯಾವುದೇ ಚಿಂತೆ ಬೇಡ. ಉಪೇಕ್ಷಿಸುವುದೊಂದೇ ಪರಿಹಾರ. ಅವರೆಂದೂ ನಮಗೆ ಬೆನ್ನಲುಬು ಆಗಲಾರರು. ಬದಲಾಗಿ ಬೆನ್ನು ಹಾಕುವವರಾಗುತ್ತಾರೆ.
ಶಕುನಿಯು ದುಷ್ಟ, ಕುತಂತ್ರಿ, ತಂತ್ರಗಾರಿಕೆಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರೂ ಹೃದಯ ಪರಿಶುದ್ಧವಂತೆ!  ಹಾಗಾಗಿ ಈತನಿಗೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ದೇವಾಲಯವಿದೆ! ಇಲ್ಲಿ ಕುರಾವರ್ (ಕುರುವರ) ಸಮುದಾಯದಿಂದ ಶಕುನಿ ಆರಾಧಿಸಲ್ಪಡುತ್ತಾನೆ. ಇದು ಶಕುನಿಗೆ ಮೋಕ್ಷ ದೊರೆತ ಸ್ಥಳವಂತೆ.  ಹೇಳುವಂತಹ ಪೂಜೆ, ಪುನಸ್ಕಾರಗಳು ನಡೆಯದಿದ್ದರೂ ತೆಂಗಿನಕಾಯಿ, ರೇಷ್ಮೆ ಬಟ್ಟೆಯ ಅರ್ಪಣೆಯಿದೆ. ನಂಬುಗೆಯು ಭಾರತೀಯ ಜನಜೀವನದ ಅಡಿಗಟ್ಟು ಅಲ್ವಾ.
ಕೀರ್ತಿಶೇಷ ಬಿ.ಎಂ.ಇದಿನಬ್ಬನವರು ಒಂದೆಡೆ ಬರೆಯುತ್ತಾರೆ, “ಒಳ್ಳೆಯ ಹೃದಯದವರನ್ನು ಸಹೃದಯದವರು ಎಂದೇ ಸಂಭೋದಿಸುತ್ತಾರೆ. ಸಮಾಜದಲ್ಲಿ ಒಳ್ಳೆಯ ಹೃದಯವಂತರಿರಬೇಕು. ಆಗ ನೆಮ್ಮದಿ, ಸಮಾಧಾನ ನೆಲೆ ನಿಲ್ಲುವುದಕ್ಕೆ ಸಾಧ್ಯ. ಹೃದಯ ಶುದ್ಧತೆಯವರು ಎಷ್ಟೆಷ್ಟು ಜಾಸ್ತಿಯಾಗುತ್ತಾರೋ ಅಷ್ಟಷ್ಟು ಕ್ಷೇಮ, ಒಳಿತು. ಸಹೃದಯರಾಗುವವರು ಒಳ್ಳೆಯ ಸನ್ನಿವೇಶಗಳನ್ನು ಕಲ್ಪಿಸುತ್ತಾರೆ. ಅಂತಹವರ ಆಧ್ಯಾತ್ಮಿಕ ಭಾವನೆಯವರಾಗಿರುತ್ತಾರೆ. ದೇಶದ ಕ್ಷೇಮ, ನೆಮ್ಮದಿಗೆ ಸಹೃದಯರ ಕೊಡುಗೆ ಉಪಕಾರಿ.”
ನಾವು ಸದಾ ಬೇರೆಯವರ ದೌರ್ಬಲ್ಯಗಳ ಬಗ್ಗೆಯೇ ಯೋಚಿಸುತ್ತಿದ್ದರೆ, ಕ್ರಮೇಣ ಆ ದೌರ್ಬಲ್ಯಗಳು ನಮ್ಮನ್ನು ಆವರಿಸಿ ಬಿಡುತ್ತವೆ. ಬೇರೆಯವರ ಉತ್ತಮ ಗುಣಗಳ ಬಗ್ಗೆ ಯೋಚಿಸಿದರೆ ಅವು ನಮ್ಮದಾಗಬಹುದು.
ನಾವ್ಯಾಕೆ ಶಕುನಿಗಳಾಗುತ್ತಿದ್ದೇವೆ? ವಿದ್ಯಾಭ್ಯಾಸವಿದೆ. ಲೋಕದ ಜ್ಞಾನವಿದೆ. ತಪ್ಪು-ಒಪ್ಪುಗಳ ಎಚ್ಚರವಿದೆ. ಆರ್ಥಿಕ ಸಂಪನ್ಮೂಲಗಳಿವೆ. ಅವಕಾಶಗಳ ಬಾಗಿಲು ತೆರೆದಿವೆ. ಸಮಾಜಿಕವಾಗಿ ಸ್ಥಾನಮಾನ ಹೊಂದಿದ್ದೇವೆ. ಎಲ್ಲಾ ಪಕ್ವ ಗುಣ-ವ್ಯಕ್ತಿತ್ವಗಳನ್ನು ಹೊಂದಿದ್ದರೂ ಸಮಯ-ಸಂದರ್ಭ ಬಂದಾಗ ‘ಶಕುನಿ’ಯ ಸ್ನೇಹ ಮಾಡುತ್ತೇವೆ. ಆತನ ನಿಯಂತ್ರಣದಿಂದ ಹೊರ ಬರಲಾಗಷ್ಟು ಅಶಕ್ತರಾಗಿ ಬಿಡುತ್ತೇವೆ. ಹೀಗಾಗಿ ಬದುಕಿನಲ್ಲಿ ತುಂಬಾ ಎಚ್ಚರದಿಂದ ಹೆಜ್ಜೆ ಹಾಕಬೇಕಾದುದು ಕಾಲ ನೀಡಿದ ಅನಿವಾರ್ಯ.
ಶಕುನಿ ಕೆಟ್ಟವನೇ? : ಗಾಂಧಾರ ದೇಶಾಧಿಪತಿ ಸುಬಲ ರಾಜನ ಗಂಡುಮಕ್ಕಳಲ್ಲಿ ಹಿರಿಯವನು. ಗಾಂಧಾರಿಯ ಒಡಹುಟ್ಟಿದವನು. ಧೃತರಾಷ್ಟ್ರನ ಕೈಹಿಡಿದ ಗಾಂಧಾರಿ ಹಸ್ತಿನೆಯ ಸೊಸೆಯಾದ ಬಳಿಕ ರಾಜಮನೆತನಕ್ಕೆ ಹತ್ತಿರದವನಾದ. ದುರ್ಯೋಧನನಿಗೆ ದುರ್ಬೋಧನೆ ಮಾಡುತ್ತಾ ಪಾಂಡವರ ವಿರುದ್ಧವಾದ ಮನಃಸ್ಥಿತಿಯನ್ನು ಸಜ್ಜುಗೊಳಿಸಿದ. ‘ಕಪಟ’ ಪದಕ್ಕೆ ಪರ್ಯಾಯ ಹೆಸರಾಗಿ ಹೊರಹೊಮ್ಮಿದ.
ಪಗಡೆಯಾಟದಲ್ಲಿ ನಿಷ್ಣಾತ. ದಾಳಗಳೇ ಅವನ ಮನಸ್ಸು. ಪಾಂಡವರ ನಾಶವೇ ಜೀವಿತದ ಧ್ಯೇಯ. ಮಹಾ ಸ್ವಾರ್ಥಿ. ಮುಂಗೋಪಿ. ಪರಗುಣದ್ವೇಷಿ. ಮತ್ಸರಿ. ಸಂಶಯದಿಂದ ನೋಡುವ, ನಂಬದ ವಕ್ರಬುದ್ಧಿ. ದ್ರೌಪದಿ ಸ್ವಯಂವರದಲ್ಲಿ ಸುಯೋಧನದ ಬಳಿಯಲ್ಲಿದ್ದ. ರಾಜಸೂಯದಲ್ಲೂ ಇವನದ್ದೇ ‘ಸುಧರಿಕೆ’. ರಾಜಸೂಯದ ವೈಭವ ನೋಡಿ ‘ಹೊಟ್ಟೆಯುರಿ’ಯಲ್ಲಿ ಬೆಂದನು!
ಪಾಂಡವರ ಸಂಪತ್ತು ಕಬಳಿಸಲು ಸುಯೋಧನನ ಪ್ರತಿನಿಧಿಯಾಗಿ ದ್ಯೂತವನ್ನಾಡಿದನು. ಅವರ ಸರ್ವಸ್ವವನ್ನು ಕಳೆದುಕೊಳ್ಳುವಂತೆ ಮಾಡಿದ. ಮರುದ್ಯೂತದ ಮೂಲಕ ಹನ್ನೆರಡು ವರುಷ ವನವಾಸ, ಒಂದು ವರುಷ ಅಜ್ಞಾತವಾಸದ ಶರ್ತದಲ್ಲಿ ಪಾಂಡವರನ್ನು ಕಾಡಿಗೆ ತಳ್ಳುವಲ್ಲಿ ಸಫಲನಾದ. ವನವಾಸದಲ್ಲಿ ಪಾಂಡವರು ದ್ವೈತವನದಲ್ಲಿದ್ದಾಗ ‘ಘೋಷಯಾತ್ರೆ’ಯ ನೆಪದಿಂದ ಕೆಣಕಲು ಸುಯೋಧನನನ್ನು ಪ್ರೇರೇಪಿಸಿದ. ಕುರುಕ್ಷೇತ್ರ ಯುದ್ಧದಲ್ಲಿ ಸಹದೇವನಿಂದ ಹತನಾದ. ಬದುಕಿನಲ್ಲಿ ಒಬ್ಬ ವ್ಯಕ್ತಿ ಹೇಗಿರಬಾರದು ಎನ್ನುವುದಕ್ಕೆ ‘ಶಕುನಿ’ ದೃಷ್ಟಾಂತ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ತೆಂಗು ಉತ್ಪಾದನೆ ಹೆಚ್ಚಿಸಲು‌ ಕೇರಳದಲ್ಲಿ ಪ್ಲಾನ್‌ | ಹೊಸ ಕೋರ್ಸ್‌ ಅಭಿವೃದ್ಧಿಪಡಿಸಲು ಚಿಂತನೆ |
July 10, 2025
8:18 AM
by: ದ ರೂರಲ್ ಮಿರರ್.ಕಾಂ
ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ
July 9, 2025
10:27 PM
by: The Rural Mirror ಸುದ್ದಿಜಾಲ
ಬಾಹ್ಯಾಕಾಶದಲ್ಲಿ ಹೆಸರುಕಾಳು, ಮೆಂತ್ಯ ಮೊಳಕೆಯೊಡೆಯುವ ಪ್ರಯೋಗ ಪ್ರಗತಿಯಲ್ಲಿ – ನಾಸಾ ಸ್ಪಷ್ಟನೆ
July 9, 2025
8:46 PM
by: The Rural Mirror ಸುದ್ದಿಜಾಲ
ನೀವೀಗ ಕಾಳುಮೆಣಸು ಕೃಷಿ ಆಸಕ್ತರೇ….?, ಹಾಗಿದ್ದರೆ ಗಮನಿಸಿ….| ಕಾಳುಮೆಣಸು ಕೃಷಿಯ ಕಾರ್ಯ ಚಟುವಟಿಕೆಗಳು
July 9, 2025
2:25 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror

Join Our Group