ಬಿಜೆಪಿ ಯುವಮೋರ್ಚಾ ಕಾರ್ಯಕರ್ತ , ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.ಅವರು ಮಂಗಳವಾರ ರಾತ್ರಿ ಹತ್ಯೆಯಾಗಿದ್ದರು. ಬುಧವಾರ ಪುತ್ತೂರಿನಿಂದ ಮೆರವಣಿಗೆಯ ಮೂಲಕ ಬೆಳ್ಳಾರೆಯ ಮನೆಗೆ ಆಗಮಿಸಿ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ನಡೆಯಿತು. ಈ ಸಂದರ್ಭ ಸಾವಿರಾರು ಮಂದಿ ಭಾಗವಹಿಸಿದರು.
ಮಂಗಳವಾರ ರಾತ್ರಿ ಹತ್ಯೆಯಾಗಿದ್ದ ಪ್ರವೀಣ್ ನೆಟ್ಟಾರು ಅವರ ಮೃತದೇಹವನ್ನು ಯಾತ್ರೆಯ ಮೂಲಕ ಪುತ್ತೂರಿನಿಂದ ತರಲಾಗಿತ್ತು. ಹತ್ಯೆ ಪ್ರಕರಣ ಖಂಡಿಸಿ ಸುಳ್ಯ, ಪುತ್ತೂರು, ಕಡಬದಲ್ಲಿ ಸ್ವಯಂಪ್ರೇರಿತ ಬಂದ್ ನಡೆದಿದೆ. ಸುಳ್ಯದಲ್ಲಿ ಘಟನೆ ಖಂಡಿಸಿ ನಡೆದ ಪ್ರತಿಭಟನೆ ಹಾಗೂ ಟಯರ್ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ವೇಳೆ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಪುತ್ತೂರಿನಿಂದ ಬೆಳಗ್ಗೆ ಶವಯಾತ್ರೆ ಆರಂಭವಾಗಿದ್ದು ಪುತ್ತೂರಿನಲ್ಲಿ ಬೃಹತ್ ಯಾತ್ರೆ ನಡೆದಿದೆ. ಸಾವಿರಾರು ಜನರು ಭಾಗಿಯಾಗಿದ್ದರು. ಸವಣೂರು, ನಿಂತಿಕಲ್ಲು ಮೂಲಕ ಪ್ರವೀಣ್ ಮೃತದೇಹ ಬೆಳ್ಳಾರೆ ತರಲಾಗಿತ್ತು. ಈ ನಡುವೆ ನಿಂತಿಕಲ್ಲಿನಲ್ಲಿ ವಿಡಿಯೋ ಮಾಡುತ್ತಿದ್ದ ಯುವಕನ ಬೈಕ್ ಪುಡಿ ಮಾಡಲಾಗಿತ್ತು. ಬೆಳ್ಳಾರೆಗೆ ಆಗಮಿಸಿದ ಸಂದರ್ಭ ಹಿಂದೂ ಕಾರ್ಯಕರ್ತರ ಆಕ್ರೋಶ ಹೆಚ್ಚಿತ್ತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು. ಸಂಸದ ನಳಿನ್ ಕುಮಾರ್ ಸಹಿತ ಸಚಿವರುಗಳ ಕಾರಿಗೆ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಹಿಂದೂ ಮುಖಂಡರ ಕಾರಿಗೂ ಮುತ್ತಿಗೆ ಹಾಕಿದರು. ಇದೇ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಜಮಾಯಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಚದುರಿಸಿದರು. ಪ್ರವೀಣ್ ಮನೆಗೆ ಮೃತದೇಹ ತಲುಪಿದ ಬಳಿಕ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ನಡೆಯಿತು.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು, ಅಂಬಿಕಾ ಕಾಲೇಜು ಹಾಗೂ ಕಡಬ, ಸುಳ್ಯದ ಗ್ರಾಮೀಣ ಭಾಗದಲ್ಲೂ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಸಂಘಟನೆಗಳು ಕರೆ ನೀಡಿದ ಬೆನ್ನಲ್ಲೇ ಪುತ್ತೂರಿನ ಬೊಳುವಾರು ಬಳಿ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಇಂದು ಬೆಳಗ್ಗೆ ಕಲ್ಲು ತೂರಾಟ ನಡೆದ ಘಟನೆಯೂ ನಡೆದಿತ್ತು.
ಬಿಜೆಪಿ ಕಾರ್ಯಕರ್ತನ ಹತ್ಯೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಜಿಲ್ಲೆಯ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಇಂತಹ ಕೃತ್ಯ ಮಾಡಿದವರನ್ನು ಬಂಧಿಸಿ ಕಾನೂನಿನಡಿಯಲ್ಲಿ ಶಿಕ್ಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವ ಎಸ್ ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಬಿಜೆಪಿ ನಾಯಕರು ಕೂಡಾ ಘಟನೆಯನ್ನು ಖಂಡಿಸಿದ್ದಾರೆ.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಿಂದ ಬೇಸರಗೊಂಡು ಹಾಗೂ ಯಾವುದೇ ಕ್ರಮಗಳು ನಡೆಯದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ಚಿಕ್ಕಮಗಳೂರಿನ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂದೀಪ್ ಹರಿವಿನಂಗಡಿ ಸಹಿತ ಮಾಧ್ಯಮ ಪ್ರಮುಖರಾದ ಪ್ರೀತಮ್ ಹೆಬ್ಬಾರ್ ಸಹಿತ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಇದೀಗ ದ ಕ ಜಿಲ್ಲೆಯಲ್ಲೂ ಹಲವಾರು ಮಂದಿ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.