ನಾಡಿನ ಲಕ್ಷಾಂತರ ಜನರ ಶ್ರದ್ಧೆಯ ಕೇಂದ್ರ ಮಧೂರು ಮಹಾಗಣಪತಿ ಕ್ಷೇತ್ರ. ಈ ಕ್ಷೇತ್ರದ ಬ್ರಹ್ಮಕಲಶೋತ್ಸವ ಕೂಡಾ ಮಾದರಿಯಾಗಿಯೇ ಇರುತ್ತದೆ. ನಾಡಿನಲ್ಲಿ ಗಣಪನನ್ನು ವಿಘ್ನ ನಿವಾರಕ ಎಂದೇ ಪೂಜಿಸುತ್ತಾರೆ. ಏನೇ ಕಾರ್ಯಕ್ರಮ ನಡೆದರೂ ಮೊದಲು ಗಣಪನಿಗೆ ಪೂಜೆ ಸಲ್ಲುತ್ತದೆ. ಹೀಗಾಗಿ ಮೊದಲ ವಂದಿಪನೇ ಗಣಪ. ಅಂತಹದೊಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಮಾದರಿಯೂ ಹೌದು, ಸತ್ಯದ ದರ್ಶನವೂ ಹೌದು. “ಭಕ್ತರು” ಹೇಗಿರಬೇಕು ಎನ್ನುವುದನ್ನೂ ತೋರಿಸಿದ ಗಣಪ. ದೇವಸ್ಥಾನದ ವಿಚಾರದಲ್ಲಿ, ಧಾರ್ಮಿಕ ವಿಚಾರಗಳಲ್ಲಿ, ಜನರ ಶ್ರದ್ಧೆಯ ವಿಚಾರದಲ್ಲಿ ರಾಜಕೀಯ ಬಿಡಬೇಕು. ಅದನ್ನೇ ಗಣಪತಿ ಸಂದೇಶವಾಗಿ ನೀಡಿದ್ದು.……..ಮುಂದೆ ಓದಿ…..
ಮಧೂರು ಕ್ಷೇತ್ರಕ್ಕೆ ಹೋಗದ ಜನರಿಲ್ಲ. ಅತ್ಯಂತ ಐತಿಹಾಸಿಕ, ಪುರಾಣ ಪ್ರಸಿದ್ಧ ಕ್ಷೇತ್ರ ಇದು. ಟಿಪ್ಪು ಕೂಡಾ ಈ ದೇವಸ್ಥಾನಕ್ಕೆ ಧಾಳಿ ಮಾಡಿದ್ದ ಎಂದೂ ಉಲ್ಲೇಖ ಅಲ್ಲಿತ್ತು, ಮಧೂರು ಕ್ಷೇತ್ರದ ಒಂದು ಗುಡಿಯ ಛಾವಣಿಯಲ್ಲಿ ಗುರುತು ಕೂಡಾ ಇರಿಸಲಾಗಿತ್ತು. ಹೀಗಾಗಿ ಅತ್ಯಂತ ಹಳೆಯ ದೇವಸ್ಥಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಮಾರು 500 ವರ್ಷದಿಂದ ದೇವಸ್ಥಾನವು ಮಳೆ, ಬಿಸಿಲು ಸಹಿತ ಹವಾಮಾನ ವೈಪರೀತ್ಯಗಳನ್ನು ಎದುರಿಸಿದೆ. ಇಂತಹ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಕೇರಳದ ದೇವಸ್ವಂ ಮಂಡಳಿಯು 2011 ರಲ್ಲಿ ನವೀಕರಣ ಯೋಜನೆಯನ್ನು ಪ್ರಾರಂಭಿಸಿತು, ಕೆಲಸದ ಮೇಲ್ವಿಚಾರಣೆಗಾಗಿ 40 ಸದಸ್ಯರ ಸಮಿತಿಯನ್ನು ಕೂಡಾ ರಚಿಸಿತು. ಒಟ್ಟು 30 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು ಸಮಿತಿಯು ಹಮ್ಮಿಕೊಂಡಿತ್ತು. ಅಂತೂ 2018 ರ ಎಪ್ರಿಲ್ ತಿಂಗಳಲ್ಲಿ ಕೆಲಸ ವೇಗ ಪಡೆಯಿತು. ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾರ್ಚ್ 27,2025 ರಿಂದ ಏಪ್ರಿಲ್ 07, 2025 ರವರೆಗೆ ನಡೆಯುತ್ತಿದೆ. ಸುಮಾರು 27 ಕೋಟಿ ರೂಪಾಯಿಯಲ್ಲಿ ಜೀರ್ಣೋದ್ಧಾರಗೊಂಡಿದೆ ಎಂದು ಈಗ ಅಂದಾಜಿಸಲಾಗಿದೆ.
ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುತ್ತದೆ ಎನ್ನುವಾಗಲೇ ಗಣಪನ ಭಕ್ತಿಗೆ ಸಂಭ್ರಮ. ಇಂದಿಗೂ ಪ್ರತೀ ಮನೆಯಿಂದ ಒಮ್ಮೆಯಾದರೂ ಈ ಉತ್ಸವದಲ್ಲಿ ಭಾಗವಹಿಸಬೇಕು ಎನ್ನುವ ಭಾವ ಹೊಂದಿದವರೇ ಇದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಕೂಡಾ. ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ನಮ್ಮದೂ ಒಂದು ಸೇವೆ ಬೇಕು, ಒಂದು ಕೊಡುಗೆ ಬೇಕು ಎಂದು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಗಣಪನ ಭಕ್ತರು. ಪ್ರತೀ ಸಮುದಾಯದಿಂದಲೂ ಹೊರೆಕಾಣಿಕೆ, ಭಕ್ತಿಯ ಕಾಣಿಕೆ, ಕಾಲ್ನಡಿಗೆ… ಹೀಗೇ ಒಂದಲ್ಲ ಒಂದು ರೀತಿಯ ಸೇವೆ ನಡೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ನಡೆಯುವ ಹಾಗೆ, ಕಾರ್ಯಕರ್ತರು, ಸ್ವಯಂಸೇವಕರು ಅವರವರ ಕೆಲಸವನ್ನು ಸದ್ದಿಲ್ಲದೆ, ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ. ಅವರವರ ಕೆಲಸದಲ್ಲಿ ತೃಪ್ತರಾಗಿ ಗಣಪನಿಗೆ ನಮಸ್ಕರಿಸಿ ಹೋಗುತ್ತಾರೆ, ಮರುದಿನ ಮತ್ತೆ ಪುನ: ಬಂದು ಸೇವೆ ಮಾಡುತ್ತಿದ್ದಾರೆ. ಅಂತಹ ಸಾವಿರಾರು ಭಕ್ತರ, ಸೇವಕರ ಕಾರಣದಿಂದಲೇ ಬ್ರಹ್ಮಕಲಶೋತ್ಸವ ಅದ್ದೂರಿಯಾಗುತ್ತಿದೆ, ಯಶಸ್ಸಾಗುತ್ತಿದೆ, ಸಂಭ್ರಮ ಇಮ್ಮಡಿಯಾಗುತ್ತಿದೆ.
ಮಧೂರು ಕ್ಷೇತ್ರದ ಪ್ರತೀ ಮನೆಯಿಂದ ಒಂದು ಕಿರುಕಾಣಿಕೆ ಎನ್ನುವ ಭಾವನಾತ್ಮಕ ಸಂಬಂಧವೂ ಇಲ್ಲಿ ಹೆಚ್ಚು ಗಮನ ಸೆಳೆದಿದೆ. ಹೀಗಾಗಿ ಗಣಪನ ಭಕ್ತರುಗಳಿಗೆ ಖುಷಿ ಏನೆಂದರೆ “ಅಬ್ಬಾ ನಮ್ಮ ಪ್ರೀತಿಯ ಗಣಪನನ್ನು ಗುಡಿಯಲ್ಲಿ, ಅದೂ ಹೊಸದಾದ ಗುಡಿಯಲ್ಲಿ ಕಾಣುವಂತಾಯಿತಲ್ಲಾ..” ಎನ್ನುವುದಷ್ಟೇ. ಅವರು ಯಾವ ಚರ್ಚೆಗಳಲ್ಲೂ ಇಲ್ಲ. ಬ್ರಹ್ಮಕಲಶೋತ್ಸವ ಸಾಂಗವಾಗಿ ನಡೆಯುತ್ತದೆ ಕೂಡಾ.
ಇಡೀ ನಾಡಿನ ವಿಘ್ನವನ್ನು ತೊರೆಯುವ ಗಣಪನ ಕಾರ್ಯಕ್ರಮದಲ್ಲಿ ಆರಂಭದಿಂದಲೂ ವಿಘ್ನವೇ ಆಗಿದೆ. ಅದರಾಚೆಗೆ ಬಂದು ಸುಮ್ಮನೆ ಗಮನಿಸಿ, ನಿಜಕ್ಕೂ ಗಣಪ ಮಾಡಿರುವ ಪರೀಕ್ಷೆಇದು. “ಈಗ ಹೇಗೆ ದಾಟುವಿರಿ ವಿಘ್ನವನ್ನು..”, “ಯಾರ್ಯಾರ ಮುಖವಾಡಗಳು ಏನೇನು..?” ಗರ್ಭಗುಡಿಯಲ್ಲಿರುವ ಗಣಪ ಅನಾವರಣ ಮಾಡಿದ.
ಬ್ರಹ್ಮಕಲಶೋತ್ಸವದ ದಿನ ನಿಗದಿಯಾಗಿದೆ, ಬ್ರಹ್ಮಕಲಶದ ತಂತ್ರಸ್ಥಾನ ವಿವಾದವಾಯಿತು, ಕೊನೆಗೆ ಗಣಪ ನ್ಯಾಯಾಲದ ಮೆಟ್ಟಿಲು ಹತ್ತಿಸಿದ..!. ಅಲ್ಲಿಂದಲೇ ಆರಂಭವಾಯಿತು. ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಅನುದಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮತ್ತೆ ಚರ್ಚೆಯಾಯಿತು. ಇಂದಿಗೂ ಚರ್ಚೆ ನಿಂತಿಲ್ಲ.ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ. ವೈಯಕ್ತಿವಾದ ಟೀಕೆಗಳೂ ಇನ್ನು ನಡೆಯುತ್ತದೆ ಅಷ್ಟೇ. ಉಪಯೋಗವೇ ಇಲ್ಲ..!. ಏಕೆಂದರೆ ಆ ಅನುದಾನ, ಆ ಯೋಜನೆ ಇನ್ನು ಮಧೂರು ಕೇತ್ರಕ್ಕೆ ಬ್ರಹ್ಮಕಲಶೋತ್ಸವ ಮುಗಿಯುವವರೆಗೂ ಬಾರದು, ನಂತರವೂ ಸದ್ಯಕ್ಕೆ ಬಾರದು…!.
ಅನೇಕ ದೇವಸ್ಥಾನಗಳಲ್ಲಿ ಈ ಸಮಸ್ಯೆ ಇದೆ. ಜೀರ್ಣೋದ್ಧಾರದ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ, ಸಮಿತಿಯಲ್ಲಿದ್ದವರಿಗೆ ಇದೆಲ್ಲಾ ತಿಳಿದಿರುತ್ತದೆ. ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮಾಡುವಾಗಲೇ ಆರಂಭವಾಗುತ್ತದೆ. ಸಮಿತಿಗೆ ಯಾರಾದೀತು..? , ಯಾರನ್ನೆಲ್ಲಾ ಸೇರಿಸಬೇಕು, ಗೌರವಾಧ್ಯಕ್ಷರು ಯಾರು…? ಅದರಲ್ಲಿ ಎಲ್ಲಾ ಪಕ್ಷದವರೂ ಬೇಕು, ಹಣ ಇದ್ದವರು ಬೇಕು. ಇದೆರಡು ಪಟ್ಟಿ ಮೊದಲಾಗಿರುತ್ತದೆ. ರಾಜಕಾರಣಿಗಳು ಏಕೆ ಬೇಕೆಂದರೆ ಸರ್ಕಾರದಿಂದ ಅನುದಾನ ತರಿಸಲು, ಹಣ ಇದ್ದವರು ಏಕೆ ಬೇಕೆಂದರೆ ಅನುದಾನ ಬರುವರರೆಗೂ ಕೆಲಸ ಮಾಡಿಸಲು..!. ಭಕ್ತಾದಿಗಳಿಂದ ಸಂಗ್ರಹ ಮಾಡಿಸಲು. ಅನೇಕ ಸಲ ಸರ್ಕಾರದಿಂದ ಕೋಟಿ ತರಿಸುತ್ತೇವೆ ಎಂದು ಭರವಸೆಯನ್ನು ಮೊದಲ ಸಭೆಯಲ್ಲಿ ನೀಡಿರುತ್ತಾರೆ, ಅದಾದ ಬಳಿಕ ಸಮಿತಿಯ ಯಾರೋ ಕೆಲವರು ಹಣ ಹಾಕುತ್ತಾರೆ, ಕೆಲಸ ಮಾಡಿಸುತ್ತಾರೆ. ಕೋಟಿ ಕೋಟಿ ಹಣ ಬೇಕಾದಾಗ ಅದೇ ಸಮಿತಿಯಲ್ಲಿ ಹಣ ಇದ್ದವರು ವಿನಿಯೋಗಿಸುತ್ತಾರೆ, ಸರ್ಕಾರದಿಂದ ಬಂದ ಬಳಿಕ ವಾಪಾಸ್ ಪಡೆಯುವ ಶರ್ತ ಹಾಕುತ್ತಾರೆ. ನಂತರ ರಾಜಕಾರಣಿಗಳು ಬರ್ತದೆ ಬರ್ತದೆ ಎನ್ನುತ್ತಾರೆ. ಕೆಲಸ ಮುಗಿಯುತ್ತದೆ, ಸರ್ಕಾರದ ಹಣ ಬರುವುದೇ ಇಲ್ಲ..!. ಅಲ್ಲಿಂದ ಅಸಮಾಧಾನ ಆರಂಭವಾಗುತ್ತದೆ..!. ಈ ಕೆಲಸದ ಹೆಸರಿನಲ್ಲಿ ಇನ್ಯಾರೋ ಹಣ ನುಂಗಿರುತ್ತಾನೆ, ಇದು ತಿಳಿದಾಗ ಹಣ ಹಾಕಿದ ಸಮಿತಿಯ ಪ್ರಮುಖರಿಗೆ ಇನ್ನಷ್ಟು ಅಸಮಾಧಾನವಾಗುತ್ತದೆ..!. ಅಲ್ಲಿಗೆ ಬ್ರಹ್ಮಕಲಶೋತ್ಸವ ಮುಗಿಯುತ್ತದೆ. ಬ್ರಹ್ಮಕಲಶೋತ್ಸವದಲ್ಲಿ ಭಾಷಣ ಮಾಡಲು ಬರುವವರು ಹಿಂದುತ್ವ-ಬಂಧುತ್ವ ಎನ್ನುವ ಒಂದು ತಂಡ, ಹಣ ಕೋಟಿ ಬಿಡುಗಡೆಯಾಗಿದೆ ಎನ್ನುವ ಇನ್ನೊಂದು ತಂಡ, ಶಹಭಾಸ್ ಎನ್ನುವ ಮತ್ತೊಂದು ತಂಡ ಬಂದು ಹೋಗಿರುತ್ತದೆ…! ಇಷ್ಟೇ. ಹಾಗಂತ ಭಕ್ತರು ದೇಣಿಗೆ ನೀಡುವುದಿಲ್ಲ ಅಂತಲ್ಲ. ಕೋಟಿ ಕೋಟಿ ಯೋಜನೆಯಲ್ಲಿ ಭಕ್ತರು ನೀಡುವ ದೇಣಿಗೆ ಸಾಕಾಗುವುದಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವಗಳಲ್ಲಿ ಸಕ್ರಿಯವಾಗಿದ್ದವರಿಗೆ ಇದರ ಬಗ್ಗೆ ಅರಿವಿದೆ. ಇದು ಬಹುತೇಕ ಕಡೆಗಳಲ್ಲಿ ನಡೆಯುವ ಘಟನೆ. ಆದರೆ ಎಲ್ಲೂ ಬಹಿರಂಗವಾಗುವುದಿಲ್ಲ. ಒಂಥರಾ ಮುಜುಗರವಾಗಿ ಹಣ ಹಾಕಿದವರು ಸುಮ್ಮನೆ ಇರುತ್ತಾರೆ.
ಆದರೆ ಮಧೂರಿನಲ್ಲಿ ಏನಾಯ್ತು..? ನಿಜಕ್ಕೂ ಗಣಪನ ಭಕ್ತರಿಗೆ ಏನೂ ಆಗಿಲ್ಲ. ವಾಸ್ತವ ಅಂಶ ಬೆಳಕಿಗೆ ಬಂತು. ಯಾವುದೇ ಸಮಿತಿಯ ಅಧ್ಯಕ್ಷ, ಗೌರವಾಧ್ಯಕ್ಷ ಅಧಿಕಾರಯುತವಾಗಿ ಮಾತನಾಡಬೇಕಾದರೆಒಂದೋ ಆತ ಪ್ರಾಮಾಣಿಕನಾಗಿರಬೇಕು ಅಥವಾ ಆತ ಹಣ ಹಾಕಿರಬೇಕು. ಹೀಗಿದ್ದರೆ ಯಾವುದೇ ವಿಷಯವನ್ನು ಧೈರ್ಯವಾಗಿ ಮಾತನಾಡಬಹುದು. ಹಾಗಾಗಿ ಜೀರ್ಣೋದ್ಧಾರ ಕಾರ್ಯಕ್ಕೆ ಭರವಸೆ ನೀಡಿದ ಅನುದಾನ ಬಂದಿಲ್ಲ ಎನ್ನುವ ಸತ್ಯವನ್ನು ಸಮಿತಿಯ ಗೌರವಾಧ್ಯಕ್ಷರು ಬಹಿರಂರವಾಗಿ “ಭಕ್ತರು” ಎಂದು ಹೇಳಿದರು. ಬಹುಶ: ಇಂದು ಅನೇಕರಿಗೆ ಕಿರಿಕಿರಿಯಾಗುತ್ತಿರುವ ವಿಷಯವೂ ಇದೇ “ಭಕ್ತರ”ದ್ದು. ಎಲ್ಲೂ ಕೂಡಾ ಗಣಪನ ಭಕ್ತರನ್ನು, ಪಕ್ಷವನ್ನು ಹೇಳಲಿಲ್ಲ. ಆ ಭಕ್ತರು ಇಂದು ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ವಿಪರೀತವಾದ ಬೊಬ್ಬೆಯ ಕಾರಣದಿಂದ ಅನೇಕ ಸಜ್ಜನರಿಗೆ ಕಿರಿಕಿರಿಯಾಗಿದೆ, ಅನೇಕ ಇಂತಹ ಕಾರಣದಿಂದಲೇ ಮೌನವಾಗಿದ್ದಾರೆ, ಸಾಮಾಜಿಕ ಕಾರ್ಯಗಳಿಂದ ಹಿಂದೆ ಸರಿದಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ತಯಾರು ಮಾಡುವುದೇ ದೇಶಸೇವೆ ಎನ್ನುವ ಹಾಗೆ ಆಗಿದೆ.
ಇಲ್ಲಿ ದೇವಸ್ಥಾನಕ್ಕೆ ಕೇಂದ್ರ ಸರ್ಕಾರದ “ಸ್ವದೇಶಿ ದರ್ಶನ್” ಎನ್ನುವ ಯೋಜನೆಯ ಮೂಲಕ ಒಂದು ಕೋಟಿ ಅನುದಾನ ಘೋಷಣೆ ಮಾಡಿದೆ ಎನ್ನುವುದೇ ಸುದ್ದಿಯಾಯ್ತು ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದಾಯ್ತು. ಇಂತಹದ್ದೆಲ್ಲಾ ಚುನಾವಣೆ ಹತ್ತಿರ ಬಂದಾಗ ಸಹಜವಾಗಿಯೇ ದೊಡ್ಡ ಸುದ್ದಿಯೂ ಆಗುತ್ತದೆ.ಏಕೆಂದರೆ ರಾಜಕೀಯ ಹಾಗೆಯೇ. ಇಲ್ಲಿ ಘೋಷಣೆ ಆಗಿದೆಯೋ… ಇಲ್ಲವೋ ಎಲ್ಲುವುದನ್ನು ಯಾರೂ ಕೇಳಿಲ್ಲ, ಬದಲಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಪ್ರಶ್ನಿಸಿದರೆ ಇನ್ನೊಂದು ಪೋಸ್ಟ್ ಮಾಡಿ ಉತ್ತರಿಸುತ್ತಾರೆ ಎಂದು ಮೌನವಾಗುತ್ತಾರೆ ಎಲ್ಲರೂ. ಸಮಸ್ಯೆ ಆದ್ದು, ಫೋಷಣೆಯ ನಂತರದ ಫಾಲೋಅಪ್‌ನಲ್ಲಿ. ಆ ಕೆಲಸದಲ್ಲಿನ ಲೋಪದ ಕಾರಣದಿಂದ ಮಧೂರು ಕ್ಷೇತ್ರಕ್ಕೆ ಸರ್ಕಾರದ ಹಣ ಬರಲಿಲ್ಲ. ಕೇರಳದ ಸಂಸದರು ಯಾವುದೇ ಅನುದಾನವನ್ನು ಸುಮ್ಮನೆ ಲ್ಯಾಪ್ಸ್ ಆಗಲು ಬಿಡುವುದು ತೀರಾ ಕಡಿಮೆ. ಕೇಂದ್ರ ಸರ್ಕಾರದ ಯೋಜನೆಯನ್ನು ತಾವೇ ಮಾಡಿಸಿದ್ದು ಎಂದು ಹೇಳಿದರೇ ವಿನಃ ಅನುದಾನ ಹಿಂದೆ ಹೋಗುವುದಕ್ಕೆ ಕೇರಳದ ಸಂಸದರು ಬಿಡಲಾರರರು.ಸ್ವದೇಶಿ ದರ್ಶನ್” ಎನ್ನುವ ಯೋಜನೆಯ ಬಗ್ಗೆಯೇ ಕೇರಳದ ಸಂಸದರು ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದಾರೆ, ಎಲ್ಲೆಲ್ಲಾ ಕೆಲಸ ಆಗುತ್ತಿದೆ ಎಂದೂ ಫಾಲೋಅಪ್ ಮಾಡಿದ್ದಷ್ಟೇ ಅಲ್ಲ, ಯಾವ ರಾಜ್ಯಕ್ಕೆ ಎಷ್ಟು ಬಂದಿದೆ ಎಂದೂ ಕೇಳಿದ್ದಾರೆ, ತಾರತಮ್ಯ ಮಾಡಿದ್ದಾರೆಯೇ ಎಂದೂ ಲೆಕ್ಕಹಾಕಿದ್ದಾರೆ. ಹಾಗಿರುವಾಗ ಮಧೂರು ಕ್ಷೇತ್ರಕ್ಕೆ ಅನುದಾನ ಬಾರದೇ ಇರಲು ಕಾರಣವೇನು..?
ಯಾವುದೇ ಸರ್ಕಾರ, ಯಾವುದೇ ಆಡಳಿತವು ಏನೇ ಹೇಳಿದರೂ ಸ್ಥಳೀಯ ಸಂಸದರನ್ನು , ಶಾಸಕರನ್ನು ಸರ್ಕಾರ ಕೇಳದೇ ಇದ್ದರೂ ಅಧಿಕಾರಿಗಳು ಕೇಳುತ್ತಾರೆ. ಏಕೆಂದರೆ ನಾಳೆ ಸರ್ಕಾರವಲ್ಲ ಅಧಿಕಾರಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ. ಆದರೆ ಇಲ್ಲಿ ಸ್ಥಳೀಯ ಶಾಸಕ, ಸಂಸದರು ಇಂದಿಗೂ ಈ ಬಗ್ಗೆ ಮೌನ…!. ಇಲ್ಲಿ ಸ್ವದೇಶಿ ದರ್ಶನ್ ಯೋಜನೆಗೆ ಸ್ಥಳೀಯ ಸಂಸದರ, ಶಾಸಕರ ಪತ್ರ, ಶಿಫಾರಸು ಇಲ್ಲದ ಮೇಲೆ ಅವರದೇ ಸರ್ಕಾರವೂ ಮಾನ್ಯ ಮಾಡುತ್ತದೆಯೇ..? ಒಂದು ಸಣ್ಣ ಪುಟ್ಟ ಕೆಲಸಕ್ಕೂ ಪಂಚಾಯತ್ ಮೆಂಬರಪತ್ರ ಕೇಳುವ ,ಶಿಫಾರಸು ಕೇಳುವ ಕೆಲವು ಆಡಳಿತಗಳು, ದೊಡ್ಡ ಯೋಜನೆಗಳಿಗೆ ಸ್ಥಳೀಯ ಪುಡಾರಿಗಳು ಹೇಳಿದರೂ ಆಯಾ ಕ್ಷೇತ್ರದ ಸಂಸದ, ಶಾಸಕರ ಶಿಫಾರಸು ಇಲ್ಲದೆ ಅದಿಕಾರಿಗಳು ಮಂಜೂರಾತಿ ಮಾಡಬಹುದೇ…?.
ಅದಕ್ಕಾಗಿಯೇ ಧಾರ್ಮಿಕ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದ ಸಹಿತ ಪ್ರಮುಖವಾದ ಸ್ಥಳಗಳಲ್ಲಿ ರಾಜಕೀಯ ದೂರ ಇರಬೇಕು. ರಾಜಕೀಯವಾದ ಲಾಭ ಪಡೆಯುವುದು ಇದ್ದದ್ದೇ. ಆದರೆ, ಊರಿನ ಜನರಿಗೆ ಕೊಡುಗೆ ಬೇಕಾದರೆ, ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ಬೇಕಾದರೆ ರಾಜಕೀಯ ರಹಿತವಾದ ಚರ್ಚೆ, ಮಾತುಕತೆ ಬೇಕು. ಅನುದಾನ ಬಿಡುಗಡೆ ನಂತರ ಅವರಿಂದಲೇ ಉದ್ಘಾಟಿಸಿದರೂ ಪರವಾಗಿಲ್ಲ, ಆದರೆ ಆರಂಭದಲ್ಲೇ ರಾಜಕೀಯ ಶುರುವಾದರೆ ಅದರ ಪ್ರತಿಫಲನವೂ ನಿಶ್ಚಿತವೇ ಆಗಿದೆ. ಮಧೂರು ಕ್ಷೇತ್ರದಲ್ಲೂ “ಸ್ವದೇಶಿ ದರ್ಶನ್” ಪ್ರಸ್ತಾವನೆಯೇ, ಘೋಷಣೆಯಾಗಿ ಉಳಿದಿದೆಯೇ ಹೊರತು, ಅನುದಾನ ಬಿಡುಗಡೆ ಹಂತದವರೆಗೇ ಹೋಗಿಲ್ಲ..!. ಸ್ವದೇಶಿ ದರ್ಶನ್ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಬರುತ್ತದೆ, ಅದಕ್ಕೆ ಅದರದೇ ಆದ ಗೈಡ್ ಲೈನ್ ಇದೆ. ಅದೆಲ್ಲಾ ಆದ ಬಳಿಕವೇ ಅನುದಾನವೂ ಬರುತ್ತದೆ. ಅನೇಕ ಬಾರಿ ಈ ಗೈಡ್ ಲೈನ್ ಕಾರಣದಿಂದಲೇ ಘೋಷಣೆ ಬಾಕಿಯಾಗುತ್ತದೆ, ಅನುದಾನಕ್ಕೆ ತಡೆಯಾಗುತ್ತದೆ. ಈಚೆಗೆ ಪ್ರಸಾದಂ ಎನ್ನುವ ಯೋಜನೆಯಲ್ಲೂ ಅದೇ ಮಾದರಿಯ ಗೈಡ್‌ಲೈನ್ ಇದೆ. ಸ್ಥಳೀಯ ಶಾಸಕ, ಸಂಸದರ ಪ್ರಯತ್ನಗಳು ಇದ್ದರೆ ಮಾತ್ರವೇ ಪ್ರಸಾದಂ ಯೋಜನೆಯೂ ಸರಿಯಾಗಿ ಜಾರಿಯಾಗುತ್ತದೆ ಕೂಡಾ. ಅದಕ್ಕಾಗಿ ಧಾರ್ಮಿಕ ಕ್ಷೇತ್ರಕ್ಕೆ ಸರ್ಕಾರದಿಂದ ಲಭ್ಯವಾಗುವ ಅನುದಾನಗಳು ಬಿಡುಗಡೆಯಾದ ಬಳಿಕವೇ ಹಂಚಿಕೊಳ್ಳಬೇಕು.ಇಲ್ಲದೇ ಇದ್ದರೆ ಇದೇ ಮಾದರಿಯ ಘಟನೆಗಳು ನಡೆಯುತ್ತದೆ. ಮಧೂರಿನಲ್ಲಿ ಅದು ಬೆಳಕಿಗೆ ಬಂತು, ಹಲವು ಕಡೆ ಸದ್ದಿಲ್ಲದೇ ಹೋಗುತ್ತದೆ.
ಸ್ವದೇಶಿ ದರ್ಶನ್ ಯೋಜನೆಯಲ್ಲಿ ಕೇರಳಕ್ಕೂ ಕೇಂದ್ರ ಸರ್ಕಾರದ ಪಾಲು ಸಿಕ್ಕಿದೆ. 2019 ರಲ್ಲಿ ಕೇರಳದ ಸಂಸದ ಕೆ ವಿ ಥಾಮಸ್ ಅವರು ಸ್ವದೇಶಿ ದರ್ಶನ್ ಬಗ್ಗೆ ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ “ಕೇರಳವು ಸ್ವದೇಶಿ ದರ್ಶನ್‌ನಲ್ಲಿ ಒಳಗೊಂಡಿದೆಯೇ” ಎಂದು ಕೇಳಿದ್ದರು. ಅಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೇರಳವೂ ಈ ಯೋಜನೆಯಲ್ಲಿ ಒಳಗೊಂಡಿದೆ ಹಾಗೂ ಒಟ್ಟು 6 ಪ್ರಾಜೆಕ್ಟ್‌ಗಳಿಗೆ 503 ಕೋಟಿ ರೂಪಾಯಿಯನ್ನೂ ಒದಗಿಸಲಾಗಿತ್ತು.ಅದರಲ್ಲಿ ಶಬರಿಮಲೆ, ಗುರುವಾಯೂರ್, ಪಟ್ಟಂತಿಟ್ಟ, ನಾರಾಯಣಗುರು ಆಶ್ರಮ ಒಳಗೊಂಡಿತ್ತು.ಅಷ್ಟೇ ಅಲ್ಲ, ವಯನಾಡು, ಕಾಸರಗೋಡು ಅಭಿವೃದ್ಧಿ ಎಂದೂ ಉಲ್ಲೇಖವಿತ್ತು. 2014 ರಲ್ಲಿ ಇದೇ ವಿಷಯದ ಬಗ್ಗೆ ಮಧ್ಯಪ್ರದೇಶದ ಸಂಸದ ಗುಮನ್ ಸಿಂಗ್ ಅಧಿವೇಶನದಲ್ಲಿ ಮಾತನಾಡಿದ್ದರು.
ಈ ಯೋಜನೆಯಲ್ಲಿ ಪ್ರವಾಸೋದ್ಯಮ ಸಚಿವಾಲಯವು ರಾಷ್ಟ್ರೀಯ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ವಿವಿಧ ಕೇಂದ್ರ ಸರ್ಕಾರಿ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಚಟುವಟಿಕೆಗಳ ಸಮನ್ವಯಕ್ಕಾಗಿ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ. ಸ್ವದೇಶಿ ದರ್ಶನ್ ಯೋಜನೆಯ ಮೂಲಕ ದೇಶದಲ್ಲಿ ಒಟ್ಟು 76 ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಯೋಜನೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಆಯಾ ರಾಜ್ಯ, ರಾಜ್ಯ ದೃಷ್ಟಿಕೋನದ ಯೋಜನೆಯನ್ನು ಸಿದ್ಧಪಡಿಸುತ್ತದೆ ಮತ್ತು ಪ್ರವಾಸೋದ್ಯಮ ಸಚಿವಾಲಯವು ಅದಕ್ಕೆ ಅನುಗುಣವಾಗಿ ಅಭಿವೃದ್ಧಿಗಾಗಿ ಆಯ್ಕೆ ಮಾಡುತ್ತದೆ. ಈ ಬಾರಿ ಸಚಿವಾಲಯವು ಸ್ವದೇಶಿ ದರ್ಶನ್ ಯೋಜನೆಯ ಅಡಿಯಲ್ಲಿ ದೇಶದ 57 ತಾಣಗಳನ್ನು 2014 ರಲ್ಲಿ ಅಭಿವೃದ್ಧಿಗಾಗಿ ಸೂಚಿಸಿದೆ.
ಅದಾದ ಬಳಿಕ, ಪ್ರವಾಸೋದ್ಯಮ ಸಚಿವಾಲಯವು ಯಾತ್ರಾ ಸ್ಥಳಗಳ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ರಾಷ್ಟ್ರೀಯ ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಅಭಿಯಾನ (PRASHAD) ಯೋಜನೆಯನ್ನು ಪ್ರಾರಂಭಿಸಿತು. ತೀರ್ಥಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿಯನ್ನು ಸೃಷ್ಟಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯಡಿಯಲ್ಲಿ ಒಟ್ಟು 46 ಯೋಜನೆಗಳನ್ನು 2014 ರ ವೇಳೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. 2014 ರಿಂದ 2024 ರವರೆಗೆ ಒಟ್ಟು ಸ್ವದೇಶಿ ದರ್ಶನ್ 1.0 ದಲ್ಲಿ ದೇಶದಲ್ಲಿ 76 ಯೋಜನೆ, ಸ್ವದೇಶಿ ದರ್ಶನ್ 2.0 ದಲ್ಲಿ 57 ಯೋಜನೆ ಮಂಜೂರಾಗಿದೆ. ಅದಾದ ಬಳಿಕ ಪ್ರಸಾದ್ ಯೋಜನೆಯಲ್ಲಿ 46 ಯೋಜನೆಯನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆ ಮಂಜೂರು ಮಾಡಿದೆ. ಕೇರಳಕ್ಕೆ ಈ ಯೋಜನೆಯಲ್ಲಿ ಹಲವು ಪ್ರಾಜೆಕ್ಟ್ ಲಭ್ಯವಾಗಿದೆ, ಲಭ್ಯವಾದ ಅನುದಾನದ ಶೇ.50 ರಷ್ಟು ಪ್ರಗತಿಯೂ ಕಂಡುಬಂದಿತ್ತು. ಆದರೆ ಕರ್ನಾಟಕ ಸೇರಿ ಕೆಲವು ರಾಜ್ಯಗಳಿಗೆ ಇಂತಹದೊಂದು ಯೋಜನೆ ಇರುವುದೇ ತಿಳಿದಿರಲಿಲ್ಲ..!. ಸ್ಥಳೀಯ ಸಂಸದರು ಹಾಗೂ ಆಡಳಿತವು ಸೂಕ್ತವಾಗಿ ಇಲ್ಲಿ ಕೆಲಸ ಮಾಡಬೇಕಾಗಿದೆ. ಏಕೆಂದರೆ ಈ ಯೋಜನೆ ಮಂಜೂರಾತಿಗೆ ಹಲವು ಗೈಡ್‌ಲೈನ್ ದಾಟಿ ಮುಂದೆ ಹೋಗಬೇಕು. ಪ್ರವಾಸೋದ್ಯಮಕ್ಕೆ ಲಿಂಕ್ ಆಗಿರಬೇಕು. ಅತ್ಯಂತ ಸುಂದರವಾದ ಈ ಸ್ವದೇಶಿ ದರ್ಶನ್ ಯೋಜನೆಯ ಗೈಡ್‌ಲೈನ್ ಅನ್ನು ಸುಮಾರು 50 ಪುಟಗಳಲ್ಲಿ ವಿವರಿಸಲಾಗಿದೆ. ಗೈಡ್ ಲೈನ್‌ಗೆ ಒಳಪಟ್ಟರೆ ಮಾತ್ರವೇ ಯೋಜನೆ ಮುಂದಿನ ಹಂತಕ್ಕೆ ತಲಪುತ್ತದೆ. ಅದಕ್ಕೆ ಸ್ಥಳೀಯ ಸಂಸದರ ಪ್ರಯತ್ನವೂ ಅಗತ್ಯ ಇದೆ. ಹೀಗಾಗಿ ಸ್ಥಳೀಯ ಸಂಸದರು ಸಕ್ರಿಯ ಇದ್ದರಷ್ಟೇ ಈ ಯೋಜನೆಗಳು ಜಾರಿಯಾದೀತು.
ಹೀಗಾಗಿ ಇಂತಹದೊಂದು ಯೋಜನೆಯ ಮೂಲಕ ಮಧೂರು ಕ್ಷೇತ್ರಕ್ಕೆ ಹಣ ಬಂದಿದೆ, ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಕೇಳಿದಾಗಲೇ ದೊಡ್ಡ ಬಜೆಟ್‌ನ ಕೆಲಸಗಳ ಜೀರ್ಣೋದ್ಧಾರದ ಕೆಲಸಗಳಲ್ಲಿ ಸಮಿತಿಯವರಿಗೆ ಸಮಾಧಾನವಾಗುತ್ತದೆ. ಒಂದು ವೇಳೆ ಹನದ ಕೊರತೆಯಾದರೆ ಎಲ್ಲಾ ಕಡೆಯೂ ಕೆಲಸದ ವೇಗ ಕಡಿಮೆಯಾಗುತ್ತದೆ. ವಿಳಂಬವಾಗುತ್ತದೆ. ಮಧೂರಿನಲ್ಲಿ ಏನಾಗಿದೆ ಎಂಬ ಬಗ್ಗೆ ಅರಿವಿಲ್ಲ, ಆದರೆ ಇಲ್ಲಿಯೂ ದಾನಿಗಳ ಸಂಪರ್ಕ ನಡೆದಿದೆ. ಅನೇಕರು ದೊಡ್ಡ ಮೊತ್ತದ ದಾನ ಮಾಡಿರಬಹುದು. ಹೀಗಾಗಿ ಮತ್ತೆ ಕೆಲಸ ವೇಗ ಪಡೆದಿದೆ ಎನ್ನುವುದು ಸದ್ದಿಲ್ಲದೆ ಸುದ್ದಿಯಾಗುವ ಸಂಗತಿ. ಹೀಗಾಗಿ ಅದೇ ದೇವಸ್ಥಾನದ ಬ್ರಹ್ಮಕಲದ ಕಾರ್ಯದಲ್ಲಿ ನೋವು ವ್ಯಕ್ತವಾಗಿರುತ್ತದೆ, ಆಗಬೇಕು ಕೂಡಾ. ಅದು ಕಸಿವಿಸಿ ಆಗುವುದು ಸಹಜವೇ ಆಗಿದೆ. ಅದನ್ನು ದೊಡ್ಡ ಸಂಗತಿ ಮಾಡದೆ, “ಗಣಪತಿ ಭಕ್ತ”ರಿಗೆ ಸತ್ಯವನ್ನು ತಿಳಿಸುವ ಕೆಲಸ, ಏಕೆ ವಿಳಂಬವಾಗಿದೆ, ಅನುದಾನ ಬಂದಿಲ್ಲ ಎನ್ನುವುದನ್ನು ತಿಳಿಸಬೇಕಿತ್ತು. ಏಕೆಂದರೆ ಅಂದು ಸಾರ್ವಜನಿಕವಾಗಿ ಪೋಸ್ಟರ್ ಮೂಲಕ ಸಂಭ್ರಮಿಸಿದ ಮೇಲೆ , ಅನುದಾನದ ಪ್ರಸ್ತಾವನೆಯನ್ನು ಹಂಚಿಕೊಂಡು ಸಂಭ್ರಮಿಸುವಾಗ ಆದ ಖುಷಿಯಷ್ಟೇ ಇದನ್ನೂ ಸ್ವೀಕರಿಸಿ ಅದೇ ಮಾದರಿಯಲ್ಲಿ ಸಾರ್ವಜನಿಕವಾಗಿ ಹೇಳುವುದು ಪ್ರಾಮಾಣಿಕವಾಗಿರುವ ಸಮಿತಿಯ ಪದಾಧಿಕಾರಿಗಳಿಗೆ ಜವಾಬ್ದಾರಿ ಕೂಡಾ ಇದೆ. ಏಕೆಂದರೆ ಇಂದು ದೇವಸ್ಥಾನದ ಬ್ರಹ್ಮಕಲಶ, ಜೀರ್ಣೋದ್ಧಾರದಲ್ಲೂ ಕಮಿಶನ್ ಹೊಡೆಯುವ ತಂಡವೇ ಹೆಚ್ಚಾಗಿ ಇರುವಾಗ ಪ್ರಾಮಾಣಿಕರು ಬಹಳ ಎಚ್ಚರಿಕೆ ಇರಬೇಕಾದ್ದು ಅಗತ್ಯ ಇದೆ. ಇಲ್ಲಿ ಗೌರವಾಧ್ಯಕ್ಷರ ಮಾತುಗಳು ಕೂಡಾ ಇಂದು ಅದೇ ಕಾರಣದಿಂದ ಮಹತ್ವ ಪಡೆಯಿತು. ರಾಜಕೀಯ ಸೋಂಕಿದ ಕಾರಣದಿಂದ ಇನ್ನೊಂದು ರಾಜಕೀಯ ಪಕ್ಷ ಕಾಯುತ್ತಿರುತ್ತದೆ, “ಅಂದು ಅನುದಾನ ಬಂದಿದೆ ಎಂದಿದ್ದಾರೆ- ನಿಜಕ್ಕೂ ಅನುದಾನವೇ ಬಂದಿಲ್ಲ” ಎನ್ನುವುದನ್ನು ಹೇಳುವುದು ಸಹಜವೇ ಆಗಿದೆ. ಹೀಗಾಗಿ ಮುಂದೆ ಚರ್ಚೆಗಳು ಮುಂದುವರಿಯುತ್ತದೆ ಅಷ್ಟೇ ಹೊರತಾಗಿ ಯಾವ ಪ್ರಯೋಜನವೂ “ಗಣಪತಿ ಭಕ್ತರಿಗೆ” ಇಲ್ಲ. ಅದಕ್ಕಾಗಿ ಈಗ ಅಲ್ಲೇ ಓಡಾಡುವ ನೂರಾರು ಭಕ್ತಾದಿಗಳು, ಕೆಲಸ ಮಾಡುವ ಕಾರ್ಯಕರ್ತರು “ಅವರು ಏನಾದರು ಮಾಡಲಿ, ನಮಗೇನು” ಎಂದು ಉಡಾಫೆ ಮಾಡುತ್ತಾರೆ.ಇದನ್ನು ಅರಿತುಕೊಳ್ಳಬೇಕು ಅಷ್ಟೇ.
ಹಾಗೆ ನೋಡಿದರೆ ಕೇರಳದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ವಿವಾದಗಳು ತೀರಾ ಕಡಿಮೆ. ಎಡ ಸರ್ಕಾರ ಇದ್ದರೂ ದೇವಸ್ಥಾನಗಳಲ್ಲಿ ವಿವಾದವಾಗುವುದು ತೀರಾ ಕಡಿಮೆ. ಶಬರಿಮಲೆಯಂತಹ ಕ್ಷೇತ್ರದಲ್ಲಿ ವಿವಾದ ಕಂಡಿದೆ ಬಿಟ್ಟರೆ ಉದ್ದೇಶ ಪೂರ್ವಕವಾಗಿ ರಾಜಕೀಯ ಪ್ರವೇಶವಾಗುವುದು ಕಡಿಮೆ.ಇಂದಿಗೂ ನೂರಾರು ದೇವಸ್ಥಾನಗಳಲ್ಲಿ ಶರ್ಟ್ ತೆಗೆದು ಒಳಪ್ರವೇಶ ಮಾಡಬೇಕು, ಅನ್ಯಮತೀಯರಿಗೆ ಪ್ರವೇಶ ಇಲ್ಲ ಎನ್ನುವ ಬೋರ್ಡ್ ಇರುವುದು ಕೇರಳದ ಕೆಲವು ದೇವಸ್ಥಾನದಲ್ಲಿ. ಹೀಗಾಗಿ ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಒಳಪ್ರವೇಶ, ಮತೀಯವಾದ ಜಗಳ ಕಡಿಮೆ. ಹಾಗೆಂದು ವಿವಾದವೇ ಆಗಿಲ್ಲ ಎಂದಲ್ಲ, ಆಗಿದೆ ಕೂಡಾ.
ಕೆಲವು ಸಲ ಬ್ರಹ್ಮಕಲಶೋತ್ಸವದಲ್ಲಿ ನಡೆಯುವ ಧಾರ್ಮಿಕ ಭಾಷಣಗಳೇ ವಿವಾದಗಳಾಗುತ್ತವೆ. ದೇವರು-ಧರ್ಮದ ಹೊರತಾಗಿ ಅನ್ಯ ಧರ್ಮವನ್ನು ನಿಂದಿಸುವುದೇ ಭಾಷಣವಾಗುತ್ತದೆ. ಕೆಲವು ಸಮಯದ ಹಿಂದೆ ದೇವಸ್ಥಾನವೊಂದರ ಬ್ರಹ್ಮಕಲಶೋತ್ಸವದಲ್ಲಿ ಅನ್ಯಮತೀಯರಿಗೆ ಒಬ್ಬ ನಿಂದಿಸಿದರು. ಅದುವರೆಗೂ ನೆಮ್ಮದಿಯಿಂದ ಇದ್ದ ಊರು, ದೇವಸ್ಥಾನದ ಬ್ರಹ್ಮಕಲಶದ ನಂತರ ಜಗಳಕ್ಕೆ ಹೇತುವಾಯಿತು. ದೇವಸ್ಥಾನದ ಸುತ್ತಮುತ್ತ ಅನ್ಯಮತೀಯರ ಜಾಗ, ಅವರದೇ ಜಾಗದಲ್ಲಿ ರಸ್ತೆ, ನೀರು ಎಲ್ಲವೂ ಇತ್ತು. ಸೌಹಾದರ್ತೆ ಕೆಟ್ಟು ಹೋಗುವ ಹಂತಕ್ಕೆ ಬಂದಿತ್ತು.
ಧಾರ್ಮಿಕ ಮುಖಂಡರುಗಳು ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಇರಲಿ ಆದರೆ ಸಂಬಂಧ ಇರಿಸಿಕೊಂಡರೆ ಅಲ್ಲಿ ಧಾರ್ಮಿಕ ಸ್ವಚ್ಛತೆ ಇರಲು ಸಾಧ್ಯವಿಲ್ಲ. ಅನೇಕ ಸಲ ಈ ಕಾರಣದಿಂದಲೂ ವಿವಾದಗಳು ಸೃಷ್ಟಿಯಾಗುತ್ತದೆ. ರಾಜಕೀಯ ಸಂಬಂಧಗಳು ಇದ್ದರೆ ಇನ್ನೊಂದು ಪಕ್ಷ ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಿ ಮೌನವಾಗಿರುತ್ತದೆ. ಅಂತಹ ಹಲವು ಉದಾಹರಣೆ ಇದೆ. ಇದರಿಂದಾಗಿ ಮತ್ತೆ ಗುಂಪುಗಳು, ಅವುಗಳ ನಡುವೆ ಚರ್ಚೆ. ಹಿಂದು-ಸಾಮರಸ್ಯ, ಶ್ರೇಷ್ಟ ಧರ್ಮ ಇತ್ಯಾದಿ ಹೇಳುವವರೂ ಇಂತಹ ಘಟನೆಗಳಲ್ಲೂ ಮೌನವಾಗಿರುತ್ತಾರೆ. ಹಿಂದೂ ಧರ್ಮದ ಒಳಗಿನ ಅದರಲ್ಲೂ ಧಾರ್ಮಿಕ ಕ್ಷೇತ್ರದೊಳಗಿನ ವಿವಾದಗಳನ್ನು ಒಳಗಡೆ ಕುಳಿತು ಮಾತನಾಡುವ ನೇತೃತ್ವವನ್ನೂ ವಹಿಸುವುದಿಲ್ಲ. ಭಾಷಣಗಳು ಮಾತ್ರಾ ಸಾಮರಸ್ಯ, ಹಿಂದೂ ಧರ್ಮ, ಏಕತೆ ಇತ್ಯಾದಿಗಳು ಸೂಪರ್ ಆಗಿರುತ್ತದೆ..! ಬಡಿದೆಬ್ಬಿಸುವಂತಿರುತ್ತದೆ.
ಹೀಗಾಗಿ ಒಂದು ಊರಿನಲ್ಲಿ ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ ಕ್ಷೇತ್ರ. ಭಗವಂತ ಎಲ್ಲರಿಗೂ ಒಬ್ಬನೇ. ಹೀಗಾಗಿ ಒಂದು ಊರಿನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಜೊತೆಗೇ ಸಮಾಜಕ್ಕೂ ಒಂದು ಬ್ರಹ್ಮಕಲಶವಾಗಿರಬೇಕು. ಆ ಊರಿನಲ್ಲಿ ಸೌಹಾದರ್ತೆ, ಹಿಂದೂ ಧರ್ಮದ ಸಾರ- ದೇವರ ಪ್ರತಿಷ್ಟಾಪನೆ – ಸಾಮರಸ್ಯ ಬಲಗೊಂಡಿರಬೇಕು, ಇದೇ ಮುಖ್ಯವಾಗಬೇಕು. ರಾಜಕೀಯ ಪ್ರವೇಶವಾದರೆ ಅಲ್ಲಿ ನೆಮ್ಮದಿಯೂ ಕಡಿಮೆಯೇ. ವಿವಾದಗಳೇ ಹೆಚ್ಚು. ಹೀಗಾಗಿ ದೇವಸ್ಥಾನ, ಶ್ರದ್ಧಾಕೇಂದ್ರದಲ್ಲಿ ರಾಜಕೀಯ ಪಕ್ಷಗಳು ಚಪ್ಪಲಿ ಕಳಚಿಟ್ಟು ಬಂದಂತೆ ಒಳಬರಬೇಕು. ಭಗವಂತನ ಆಶೀರ್ವಾದ ಇದ್ದರೆ ಮಾತ್ರವೇ ನಿಮಗೂ ಗೆಲವು-ನಮಗೂ ಗೆಲವು ಎನ್ನುವುದು ಅರ್ಥ ಮಾಡಿಕೊಂಡಿರಬೇಕು. ದೇವಸ್ಥಾನದ ಬ್ರಹ್ಮಕಲಶೋತ್ಸವ ಮುಗಿಯುವ ಹೊತ್ತಿಗೆ ಪ್ರತೀ ವ್ಯಕ್ತಿ ಅಹಂಭಾವವೂ ಇಳಿದಿರಬೇಕು. ಸೌಹಾರ್ದತೆ-ಸಾಮರಸ್ಯ ಬಲಗೊಂಡಿರಬೇಕು. ಹೀಗಾದರೆ ಒಂದು ದೇವಸ್ಥಾನದ ಬ್ರಹ್ಮಲಕಶೋತ್ಸವ ಸಂಭ್ರಮ-ಸುಂದರ.
ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…
ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…
ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವುರಿಂದ, ಪಾರಂಪರಿಕ ಮಾಗಿ…