ಬಳ್ಪ: ಬಳ್ಪದ ಬೋಗಾಯನ ಕೆರೆ ಸಂಪೂರ್ಣ ಬತ್ತಿಹೋಗಿದೆ. ಕೆರೆಯನ್ನು ಹೂಳೆತ್ತಿ ಪುನಶ್ಚೇತನಗೊಳಿಸಲು ಇದು ಸಕಾಲವಾಗಿದೆ. ಸುಮಾರು 1.5 ಎಕ್ರೆ ವಿಸ್ತೀರ್ಣದ ಕೆರೆಯಲ್ಲಿ ಸಂಪೂರ್ಣ ಹೋಳೇ ತುಂಬಿಕೊಂಡ ಕಾರಣ ನೀರಿಲ್ಲದೆ ಕೆರೆ ಬರಿದಾಗಿದೆ.
ಸಂಸದರ ಆದರ್ಶಗ್ರಾಮ ಯೋಜನೆಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಬಳ್ಪದಲ್ಲಿನ ಬೋಗಾಯನ ಕೆರೆಗೆ ಐತಿಹಾಸಿಕ ಮಹತ್ವವೂ ಇದೆ. ಕದಂಬರ ಕಾಲದಲ್ಲಿ ಕಟ್ಟಿಸಲಾದ ಕೆರೆ ಎಂದು ಇತಿಹಾಸಗಳಿಂದ ತಿಳಿಯುತ್ತದೆ. ಈ ಕೆರೆ ಹಿಂದೆ ಹಲವು ಪ್ರದೇಶಗಳಿಗೆ ನೀರುಣಿಸುತ್ತಿತ್ತು. ಕಾಲಾನಂತರದಲ್ಲಿ ಸರಿಯಾದ ನಿರ್ವಹಣೆಯಿಲ್ಲದೇ ಹೂಳು ತುಂಬಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ತುಂಬಿಕೊಂಡಿರುತ್ತದೆ.
ಈ ಇತಿಹಾಸ ಪ್ರಸಿದ್ಧ ಕೆರೆ ಅಭಿವೃದ್ಧಿಯಾಗಬೇಕು, ಸಂಸದರ ಆದರ್ಶ ಗ್ರಾಮಕ್ಕೆ ಕೀರೀಟವಾಗಬೇಕು ಎಂಬ ಕನಸು ಸ್ಥಳಿಯ ಜನರದ್ದು ಆಗಿತ್ತು. ಆದರೆ ಅಭಿವೃದ್ಧಿ ಭಾಗ್ಯ ಕಂಡಿರಲಿಲ್ಲ. ಈ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸಬಹುದು ಎಂಬ ಸಲಹೆಯೂ ಇದೆ. ಇದಕ್ಕಾಗಿ ಮಂಗಳೂರಿನ ತೋಟಗಾರಿಕಾ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯನ್ನು ಪರಿಶೀಲನೆ ನಡೆಸಿದ್ದು ಕೆರೆಯನ್ನು ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೇ ಕೆರೆಯ ಪಕ್ಕದಲ್ಲೇ ಪುಷ್ಟವನವನ್ನೂ ನಿರ್ಮಾಣ ಮಾಡುವ ಯೋಜನೆ ತಯಾರಾಗಿದೆ.
ಸಂಪೂರ್ಣ ಬರಿದು:
ಕೆರೆ ಈಗ ಸಂಪೂರ್ಣವಾಗಿ ಬರಿದಾಗಿದ್ದು ಕೆರೆಯನ್ನು ಅಭಿವೃದ್ಧಿಪಡಿಸಲು ಇದು ಸಕಾಲವಾಗಿದೆ. ನೀರಿಲ್ಲದೇ ಇರುವ ಕಾರಣ ಕೆರೆಯ ಹೂಳೆತ್ತುವುದು ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಇಲಾಖೆಗಳು ಮುತುವರ್ಜಿ ವಹಿಸಬೇಕಿದೆ.
ಹಿಂದೊಮ್ಮೆ ಹೂಳು ತೆಗೆಯಲಾಗಿತ್ತು:
ಕೆಲ ವರ್ಷದ ಹಿಂದೊಮ್ಮೆ ಈ ಕೆರೆಯ ಹೂಳು ತೆಗೆಯಲಾಗಿತ್ತು. ಈ ಹೂಳನ್ನು ಕೆರೆಯ ಮೇಲ್ಭಾಗದಲ್ಲಿ ಹಾಕಲಾಗಿತ್ತು. ಮಳೆಗಾಲ ಮತ್ತೆ ಅದೇ ಕೆಸರು ಮಣ್ಣು ಕೆರೆಗೆ ಸೇರಿತ್ತು. ಹೂಳು ಈ ಬಾರಿ ತೆಗೆಯುವುದಿದ್ದರೆ ಮತ್ತೆ ಅದೇ ಸ್ಥಿತಿ ಆಗದಿರಲಿ ಎಂಬುದು ಸ್ಥಳೀಯರ ಒತ್ತಾಯ.
ಕೆರೆ ಅಭಿವೃದ್ಧಿ ಬಗ್ಗೆ ಮಾತನಾಡಿದ ಬಳ್ಪ ಪಿಡಿಒ ಶ್ಯಾಮ ಪ್ರಸಾದ್, “ಕೆರೆಯ ದುರಸ್ಥಿಗೆ ಇಲಾಖೆಗಳಿಂದ 1.25 ಕೋಟಿ ರೂ. ಬಿಡುಗಡೆ ಮಾಡುವ ಯೋಜನೆ ತಯಾರಾಗಿರುವ ಮಾಹಿತಿ ಇದೆ. ಚುನಾವಣಾ ಘೋಷಣೆ ಹಾಗೂ ನೀತಿ ಸಂಹಿತೆ ಇರುವ ಕಾರಣ ಮುಂದಿನ ಕ್ರಮಗಳು ಸ್ಥಗಿತಗೊಂಡಿವೆ” ಎನ್ನುತ್ತಾರೆ.