ಸುಳ್ಯ: ಸುಳ್ಯ ಕ್ಷೇತ್ರದಿಂದ ನಿರಂತರ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಅಂಗಾರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನಲೆಯಲ್ಲಿ ಸುಳ್ಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ಸುಳ್ಯ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು ರಾಜಿನಾಮೆಗೆ ಮುಂದಾಗಿದ್ದು ಸುಳ್ಯ ಬಿಜೆಪಿ ಮಂಡಲ ಸಮಿತಿಯು ಅಸಹಕಾರ ಚಳುವಳಿ ಘೋಷಿಸಿದೆ.
ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಸಭೆಯ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಶಾಸಕ ಅಂಗಾರರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಸಿಗುವ ತನಕ ಸುಳ್ಯದಲ್ಲಿ ಬಿಜೆಪಿಯ ಎಲ್ಲಾ ಕೆಲಸ ಕಾರ್ಯಗಳನ್ನೂ ಸ್ಥಗಿತಗೊಳಿಸಲಾಗುವುದು. ಜನಪ್ರತಿನಿಧಿಗಳು ತಮ್ಮ ಕಚೇರಿಗೆ ತೆರಳುವುದಿಲ್ಲ, ಪಕ್ಷದ ಕಾರ್ಯಕರ್ತರು ಯಾವುದೇ ಪಕ್ಷದ ಕೆಸಗಳನ್ನೂ ಮಾಡುವುದಿಲ್ಲ ಎಂದು ಬಿಜೆಪಿ ಪ್ರಮುಖರ ಮತ್ತು ಬಿಜೆಪಿ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ನಾಯಕರು ಸುಳ್ಯಕ್ಕೆ ಬಂದು ಅಂಗಾರರಿಗೆ ಮುಂದೆ ನಡೆಯುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಕೊಡುವ ಭರವಸೆ ದೊರೆಯದೆ ಅಸಹಕಾರ ಚಳುವಳಿಯನ್ನು ಕೈ ಬಿಡುವುದಿಲ್ಲ ಎಂದು ಹೇಳಿದರು. ಸ್ಪಷ್ಟ ಭರವಸೆ ಸಿಗದೆ ಜಿಲ್ಲೆ, ರಾಜ್ಯದ ನಾಯಕರ ಜೊತೆ ಸುಳ್ಯ ಮಂಡಲದ ಅಸಹಕಾರ ಮುಂದುವರಿಯಲಿದೆ. ಕ್ಷೇತ್ರದ ಎಲ್ಲಾ ಗ್ರಾಮಗಳ 231 ಬೂತ್ ಗಳ ಕಾರ್ಯಕರ್ತರು, ಜನಪ್ರತಿನಿಧಿಗಳು ಒಕ್ಕೊರಲಿನಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ಸಚಿವ ಸ್ಥಾನ ಅಲ್ಲದೆ ಬೇರೆ ಯಾವುದೇ ಸ್ಥಾನವನ್ನೂ ಶಾಸಕರು ಸ್ವೀಕರಿಸುವುದಿಲ್ಲ. ಆರು ಬಾರಿ ಶಾಸಕರಾಗಿರುವ ಅಂಗಾರರಿಗೆ ಸಚಿವ ಸ್ಥಾನ ಅಲ್ಲದೆ ಬೇರೆ ಯಾವುದೇ ಸ್ಥಾನವೂ ಬೇಡ ಎಂಬುದು ಕಾರ್ಯಕರ್ತರ ನಿರ್ಧಾರ ಎಂದು ಅವರು ಸ್ಪಷ್ಟಪಡಿಸಿದರು.
ಬೀದಿಗಿಳಿದು ಹೋರಾಟ ಇಲ್ಲ: ಎ.ವಿ.ತೀರ್ಥರಾಮ
ಅಂಗಾರರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೀದಿಗಿಳಿದು ಹೋರಾಟ ಮಾಡುವುದಿಲ್ಲ ಎಂದು ಬಿಜೆಪಿ ಮುಖಂಡ ಎ.ವಿ.ತೀರ್ಥರಾಮ ಹೇಳಿದರು. ಪ್ರಥಮ ಹಂತದಲ್ಲಿ ಅಸಹಕಾರ ಚಳುವಳಿಯ ಮೂಲಕ ಹೋರಾಟ ಮಾಡುತ್ತೇವೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ಆಗುವವರೆಗೆ ಕಾಯುತ್ತೇವೆ. ಆ ಬಳಿಕ ಮುಂದಿನ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪ್ರಮುಖರಾದ ವೆಂಕಟ್ ದಂಬೆಕೋಡಿ, ಹರೀಶ್ ಕಂಜಿಪಿಲಿ, ದಿನೇಶ್ ಮೆದು, ರಾಕೇಶ್ ರೈ ಕೆಡೆಂಜಿ, ಭಾಗೀರಥಿ ಮುರುಳ್ಯ, ಮುಳಿಯ ಕೇಶವ ಭಟ್, ಚನಿಯ ಕಲ್ತಡ್ಕ, ರಾಧಾಕೃಷ್ಣ ಬೊಳ್ಳೂರು, ಮಹೇಶ್ ರೈ ಮೇನಾಲ, ಸುರೇಶ್ ಕಣೆಮರಡ್ಕ, ಚಂದ್ರಶೇಖರ ಪನ್ನೆ, ಮಾಧವ ಚಾಂತಾಳ ಉಪಸ್ಥಿತರಿದ್ದರು.