ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಬ್ರಹ್ಮ’
ಪ್ರಸಂಗ : ಬ್ರಹ್ಮಕಪಾಲ
(ತನಗೆ ಉದ್ಯೋಗ ನೀಡಬೇಕೆಂದು ಶಾರದೆ ಬಿನ್ನವಿಸಿಕೊಂಡಾಗ ಬ್ರಹ್ಮನು ವಿದ್ಯಾಧಿಕಾರದ ಪಟ್ಟ ನೀಡಲು ಮುಂದಾಗುತ್ತಾನೆ)
“… ವಿದ್ಯಾಧಿದೇವತೆಯ ಪಟ್ಟ ಅದು ಬುದ್ಧಿಯ ಮೇಲೆ. ವ್ಯವಸಾಯಾತ್ಮಕವಾದ ಬುದ್ಧಿಯ ಸ್ಥಾನದಲ್ಲಿ ಶಾರದೆ ಪ್ರಕಾಶಿಸುತ್ತಾಳೆ. ಯೋಗಶಾಸ್ತ್ರದ ಪ್ರಕಾರ ‘ಸಹಸ್ರಾರ’ ಎಂಬ ಸ್ಥಾನವೊಂದು ನೆತ್ತಿಯಲ್ಲಿದೆ. ಅಲ್ಲಿ ಅವಳು ವಾಸ ಮಾಡುತ್ತಾಳೆ. ಬ್ರಹ್ಮನ ಸ್ಥಾನವೂ ಕಮಲವೇ. ಶಾರದೆಯ ಸ್ಥಾನವೂ ಕಮಲವೇ. ಆದರೆ ಅದು ನಾಭೀಕಮಲ. ನಿನ್ನ (ಶಾರದೆ) ಪೀಠ ಅದಲ್ಲ. ಸಹಸ್ರಾರ ಚಕ್ರದ ಕಮಲ. ಶಾರದೆಯಾದ ನಿನಗೆ ಇದನ್ನು ಅರ್ಥೈಸಲು ಕಷ್ಟವಾಗದು.
ಈ ದೇಹೇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠವಾದುದು. ಮನಸ್ಸಿಗಿಂತಲೂ ಬುದ್ಧಿ ಉತ್ಕೃಷ್ಟವಾದುದು. ಈ ದೇಹೇಂದ್ರಿಯಗಳೆಲ್ಲಾ ಮನಸ್ಸಿನಲ್ಲಿ ನೆಲೆಸಬೇಕು. ಈ ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳು ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿ ವಿಷಯಗಳನ್ನು ಸವಿಯುತ್ತವೆ. ಆಮೇಲೆ ದಾಹಗೊಳ್ಳುತ್ತದೆ. ಈ ದಾಹಗೊಳ್ಳುತ್ತಿರುವ ವೃತ್ತಿ ಮನಸ್ಸಿನಲ್ಲಿ ಲೀನವಾಗಬೇಕು. ಈ ಹತ್ತು ಇಂದ್ರಿಯಗಳು ಹನ್ನೊಂದನೆಯ ಇಂದ್ರಿಯಾಧ್ಯಕ್ಷನಲ್ಲಿ ಕೇಂದ್ರೀಕೃತವಾದರೆ, ಈ ಶುದ್ಧವಾದಂತಹ ಯಾವತ್ತೂ ಏಕಾದಶೀ ಸ್ಥಾನದಿಂದ, ಈ ಎಲ್ಲಾ ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿಗಳನ್ನು ಅರಗಿಸಿಕೊಂಡು, ಈ ಅಂತಃಕರಣ ವೃತ್ತಿಯು ಅಧೋಮುಖಿಯಾಗಿದ್ದುದು ಊಧ್ರ್ವಮುಖಿಯಾಗಬೇಕು. ಆವಾಗ ಅದಕ್ಕೆ ‘ಚಿತ್ತ’ ಅಂತ ಹೆಸರು.
ಈ ಚಿತ್ತವೃತ್ತಿ ಎಲ್ಲಾ ವಾಸನೆಗಳನ್ನು ಕೂಡಿಸಿಕೊಂಡು ಬುದ್ಧಿಯಲ್ಲಿ ರಮಿಸಬೇಕು. ಆಗ ಅದು ಶುದ್ಧ ಅದ್ವೈತವೇ ಆಗಿಬಿಟ್ಟರೆ ಕೊನೆಗೆ ಉಳಿದದ್ದು ‘ಜ್ಞಾನ’ ಮಾತ್ರ. ಆದ್ದರಿಂದ ಇಂತಹ ‘ಜ್ಞಾನ’ ಕೊನೆಯಲ್ಲಿ ಸಹಸ್ರಾರದಲ್ಲಿದ್ದ ಶಾರದೆಯಲ್ಲಿ ಮುಳುಗಿಹೋಗುವಾಗ ದೃಕ್ ಇಲ್ಲ; ದೃಶ್ಯ ಇಲ್ಲ. ದರ್ಶನವೂ ಇಲ್ಲ….”