ಬೆಂಗಳೂರು: ಅಕ್ಕಿ ಗಿರಣಿಗಳಿಗೆ ವಿಧಿಸಲಾಗುವ ಸೆಸ್ ದರವನ್ನು ಶೇ. 1.5 ರಿಂದ ಶೇ. 1ಕ್ಕೆ ಇಳಿಸುವಂತೆ ಅಕ್ಕಿ ಗಿರಣಿಗಳ ಮಾಲೀಕರು ಮಾಡಿರುವ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದರು.
ಶಾಸಕ ಹಾಗೂ ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಅಧ್ಯಕ್ಷ ಪರಣ್ಣ ಮುನವಳ್ಳಿ ನೇತೃತ್ವದ ನಿಯೋಗವು ಡಿ.20ರಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿತು. ಈ ಸಂದರ್ಭದಲ್ಲಿ ನೆರೆಯ ರಾಜ್ಯಗಳಲ್ಲಿ ಅಕ್ಕಿ ಗಿರಣಿಗಳ ಮೇಲಿನ ಸೆಸ್ ಶೇ. 1 ರಷ್ಟಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಶೇ. 1.5 ರಷ್ಟಿದೆ. ಈಗಾಗಲೇ ಕಳೆದ ವರ್ಷ ಮಳೆ ಕೊರತೆ ಮತ್ತು ಇತರ ಸಮಸ್ಯೆಗಳಿಂದಾಗಿ ಗಿರಣಿಗಳು ನಷ್ಟದಲ್ಲಿದ್ದು, ಸೆಸ್ ದರವನ್ನು ಶೇ. 1 ಕ್ಕೆ ಇಳಿಸುವಂತೆ ಮನವಿ ಮಾಡಿತು. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಇದೀಗ ಸಿದ್ಧವಾಗುತ್ತಿರುವ ನೂತನ ಕೈಗಾರಿಕಾ ನೀತಿಯಲ್ಲಿ ಅಕ್ಕಿ ಗಿರಣಿಗಳ ಆಧುನೀಕರಣಕ್ಕೆ ನೆರವು ನೀಡುವ ಕಾರ್ಯಕ್ರಮ ರೂಪಿಸುವಾಗ ದೊಡ್ಡ ಹಾಗೂ ಸಣ್ಣ ಅಕ್ಕಿ ಗಿರಣಿಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಮಾಡಿದ ಮನವಿಗೆ ಮುಖ್ಯಮಂತ್ರಿಗಳು ಸಮ್ಮತಿ ನೀಡಿದರು. ಸ್ಥಳೀಯ ಸಂಸ್ಥೆಗಳು ಅಕ್ಕಿ ಗಿರಣಿಗಳಿಗೆ ವಾಣಿಜ್ಯ ದರದಲ್ಲಿ ತೆರಿಗೆ ವಿಧಿಸುತ್ತಿದ್ದು, ಆಸ್ತಿಗಿಂತ ಆಸ್ತಿ ತೆರಿಗೆಯೇ ಹೊರೆಯಾಗಿದೆ. ಅಕ್ಕಿ ಗಿರಣಿಗಳನ್ನು ಕೃಷಿ ಆಧಾರಿತ ಕೈಗಾರಿಕೆಯೆಂದು ಪರಿಗಣಿಸಿ, ಆಸ್ತಿ ತೆರಿಗೆಯನ್ನು ಕೈಗಾರಿಕಾ ದರದಲ್ಲಿ ವಿಧಿಸಬೇಕು ಎಂದು ಮನವಿ ಮಾಡಿದರು. ಈ ವಿಷಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.