ಸುಳ್ಯ: ಹೃದಯ ತುಂಬಾ ಪ್ರೀತಿ ಮತ್ತು ಮುಖ ತುಂಬಾ ಮಂದಸ್ಮಿತದೊಂದಿಗೆ ಸರ್ವರ ಹೃದಯ ಗೆದ್ದ ಅಜಾತ ಶತ್ರು, ಪ್ರೀತಿ ವಾತ್ಸಲ್ಯಗಳ ಸಾಕಾರಮೂರ್ತಿ, ಪ್ರೀತಿ- ವಿಶ್ವಾಸಗಳಿಂದಲೇ ಸುಳ್ಯದ ಜನತೆಯ ಹೃದಯದಲ್ಲಿ ಬಲುದೊಡ್ಡ ಸಾಮ್ರಾಜ್ಯ ಕಟ್ಟಿದ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ಅವರ ಅಗಲಿಕೆಗೆ ಇಡೀ ಸುಳ್ಯವೇ ಕಂಬನಿ ಮಿಡಿಯುತಿದೆ.
ಭಾನುವಾರ ರಾತ್ರಿ ನಿಧನರಾದ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ಅವರ ಅಂತ್ಯ ಕ್ರಿಯೆ ಗಾಂಧೀನಗರ ಜುಮಾ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನ ನಡೆಯಿತು. ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆ ಅವರ ನಿವಾಸಕ್ಕೆ ಸಮಾಜದ ವಿವಿಧ ಭಾಗಗಳಿಂದ ಜನಪ್ರವಾಹವೇ ಹರಿದು ಬಂತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಅಂತ್ಯಕ್ರಿಯೆ ಸಂದರ್ಭದಲ್ಲೂ ಸಾವಿರಾರು ಮಂದಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಗರದ ವರ್ತಕರು ಕೆಲ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಗೌರವ ಸಲ್ಲಿಸಿದರು.
ಸರಳ ಸಜ್ಜನಿಕೆಯ ಮಾನವತಾವಾಧಿ: ನಿಜ ಅರ್ಥದ ಮಾನವತಾವಾಧಿಯಾಗಿ ನಮ್ಮ ನಡುವೆ ಇದ್ದವರು ಅಬ್ಬಾಸ್ ಹಾಜಿಯವರು. ಜಾತಿ, ಧರ್ಮ, ರಾಜಕೀಯ, ಮೇಲು, ಕೀಳು, ಬಡವ, ಶ್ರೀಮಂತ ಎಂಬ ಯಾವುದೇ ಭೇದ ಭಾವ ಅವರಲ್ಲಿ ಎಂದೂ ಇರಲಿಲ್ಲ. ಎಲ್ಲರನ್ನೂ ಮಕ್ಕಳಂತೆ, ಸಹೋದರರಂತೆ ನೋಡಿಕೊಂಡರು. ಸರ್ವರನ್ನೂ ಪ್ರೀತಿಯಿಂದ ಅಪ್ಪಿಕೊಂಡರು.
ಯಾವುದೇ ನಾಡಿನಲ್ಲಾಗಲೀ, ಸಮಾಜದಲ್ಲಾಗಲೀ ಈ ರೀತಿಯ ರತ್ನಗಳು ಇರುವುದು ಬಲು ಅಪರೂಪ. ಸುಳ್ಯದ ಅನರ್ಘ್ಯ ರತ್ನವಾಗಿದ್ದ ಅಬ್ಬಾಸ್ ಹಾಜಿಯವರ ಅಗಲಿಕೆ ದೊಡ್ಡ ಶೂನ್ಯತೆಯನ್ನು ಸೃಷ್ಟಿಸಿದೆ.
ಸುಳ್ಯದಲ್ಲಿ ಪ್ರತಿಷ್ಠಿತ ಉದ್ಯಮಗಳನ್ನು ಹೊಂದಿದ್ದರೂ ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಹಾಜಿಯವರು ಕೊಡುಗೈ ದಾನಿಯೂ ಆಗಿದ್ದರು. ಸುಳ್ಯದ ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೇ ಹಾಜರಾಗುತ್ತಿದ್ದ ಅವರು ಉದಾರವಾದ ನೆರವನ್ನೂ ನೀಡುತ್ತಿದ್ದರು. ಕಾಸರಗೋಡು ಜಿಲ್ಲೆಯ ಕುಂಬಳೆಯಿಂದ ಸುಳ್ಯಕ್ಕೆ ಬಂದು ನೆಲೆಸಿದ್ದ ಅಬ್ಬಾಸ್ ಹಾಜಿಯವರ ಕುಟುಂಬ ಸುಳ್ಯದಲ್ಲಿ ವಿವಿಧ ಉದ್ಯಮಗಳನ್ನು ಸ್ಥಾಪಿಸಿ ಸುಳ್ಯದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದರು. ಸುಳ್ಯ ನಗರ, ತಾಲೂಕಿನ ಅಭಿವೃದ್ಧಿಗೆ, ತನ್ನದೇ ಆದ ಕೊಡುಗೆಯನ್ನು ನೀಡಿ ಸಾಮಾಜಿಕ, ಧಾರ್ಮಿಕ ಹಾಗು ಶೈಕ್ಷಣಿಕ ಬೆಳವಣಿಗೆಗೆ ಕೈಜೋಡಿಸಿದರು. ಇತ್ತೀಚೆಗೆ ಸುವರ್ಣ ಮಹೊತ್ಸವವನ್ನು ಆಚರಿಸಿದ ಅನ್ಸಾರುಲ್ ಮುಸ್ಲೀಮಿನ್ ಅಸೋಸಿಯೇಶನ್ ನ ಸ್ಥಾಪಕಾಧ್ಯಕ್ಷರಾಗಿ, ಅನ್ಸಾರಿಯಾ ಅನಾಥಾಲಯದ ಅಧ್ಯಕ್ಷರಾಗಿ ಸಂಸ್ಥೆಯ ಬೆಳವಣಿಗೆಗೆ ಸಾರಥ್ಯ ವಹಿಸಿದ್ದರು. ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ, ಕೈಗಾರಿಕೆ ಮತ್ತು ವಾಣೀಜ್ಯೋದ್ಯಮಿಗಳ ಸಂಘ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ತನ್ನ ಎಲ್ಲಾ ವ್ಯವಹಾರಿಕ ಒತ್ತಡಗಳ ಮಧ್ಯೆಯೂ ಸುಳ್ಯದ ಎಲ್ಲಾ ಸಂಘ ಸಂಸ್ಥೆಗಳ ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೇ ಭಾಗವಹಿಸುತ್ತಿದ್ದರು. ತಾನು ಕಟ್ಟಿ ಬೆಳೆಸಿದ ಸಂಘ ಸಂಸ್ಥೆಗಳ ಬಗ್ಗೆ, ಸಮಾಜದ ಬಗ್ಗೆ ಅವರ ಮನಸ್ಸು ಸದಾ ತುಡಿಯುತ್ತಿತ್ತು. ಇತ್ತೀಚೆಗೆ ಅಸೌಖ್ಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಶಾಲೆಯ ಸಭೆ ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗಿರುವುದರ ಬಗ್ಗೆಯೇ ಮಾತನಾಡುತ್ತಿದ್ದರು ಎಂದು ನೆನಪಿಸುತ್ತಾರೆ ಅವರ ಸಂಬಂಧಿಯೂ ಆದ ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ. ಅಬ್ಬಾಸ್ ಹಾಜಿಯವರೇ ಹಾಗೆ ತನ್ನ ಜೀವನದ ಕೊನೆಯ ದಿನದವರೆಗೂ ಸಹ ಜೀವಿಗಳಿಗಾಗಿ ಸಮಾಜಕ್ಕಾಗಿ ಅವರ ಹೃದಯ ತುಡಿಯುತ್ತಿತ್ತು.
ಪತ್ರಕರ್ತರ ಮಿತ್ರ: ದಿವಂಗತ ಕೋಟೆ ವಸಂತ ಕುಮಾರರಂತೆ ಪತ್ರಕರ್ತರ ಜೊತೆ ಅತ್ಯಂತ ನಿಕಟ ಸಂಪರ್ಕ ಮತ್ತು ಆತ್ಮೀಯತೆಯಿಂದ ಇದ್ದವರು ಅಬ್ಬಾಸ್ ಹಾಜಿಯವರು. ಪ್ರತಿ ಬಾರಿ ನೋಡಿದಾಗಲೂ ಪ್ರೀತಿಯಿಂದ ಬರಮಾಡಿಕೊಂಡು ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. ಆದುದರಿಂದಲೇ ಸುಳ್ಯದ ಎಲ್ಲಾ ಪತ್ರಕರ್ತರಿಗೂ ಹಾಜಿಯವರೆಂದರೆ ಅಚ್ಚು ಮೆಚ್ಚು. ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಸೇರಿ ಎಲ್ಲಾ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾದವರ ಪಟ್ಟಿಯ ಮೊದಲ ಹೆಸರು ಅವರದ್ದೇ ಆಗಿರುತ್ತಿತ್ತು. ಅವರೂ ಹಾಗೆ ಕಾರ್ಯಕ್ರಮಕ್ಕೆ ಮೊದಲಿಗರಾಗಿ ಆಗಮಿಸಿ ಕೊನೆಯವರೆಗೂ ಇದ್ದು ಮರಳುತ್ತಿದ್ದರು. ಎರಡು ವರ್ಷದ ಹಿಂದೆ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ‘ಭವ್ಯ ಸಂಕಲ್ಪ’ ದಿನಾಚರಣೆಯ ಸಂದರ್ಭ ಅವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಕಳೆದ ವರ್ಷದ ಭವ್ಯ ಸಂಕಲ್ಪ ಸಂದರ್ಭದಲ್ಲಿ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದ್ದರು.
ಪತ್ರಕರ್ತರ ಸಂಘ ಮಾತ್ರ ಅಲ್ಲ, ಎಲ್ಲಾ ಸಂಘ ಸಂಸ್ಥೆಗಳೊಂದಿಗೂ ಅದೇ ರೀತಿಯ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದರು. ಯಾರು ಹೋಗಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆದಾಗಲೂ ಇಲ್ಲ ಎನ್ನುತ್ತಿರಲಿಲ್ಲ. ಪುರುಷೋತ್ತಿಲ್ಲ ಎಂದು ಯಾವುದೇ ಕಾರ್ಯಕ್ರಮಕ್ಕೆ ಹೋಗದೆ ಇರುತ್ತಿರಲಿಲ್ಲ. ಎಲ್ಲದಕ್ಕೂ ಭಾಗವಹಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿ ಆಶೀರ್ವದಿಸಿ ಬರುತ್ತಿದ್ದರು. ಅವರು ಬಂದಾಗಲೇ ಅಲ್ಲೊಂದು ಪ್ರೀತಿಯ, ಅಕ್ಕರೆಯ ಅಲೆ ಹರಿದಾಡುತ್ತಿತ್ತು. ಆ ಅಲೆಯು ಇದೀಗ ಹರಿವು ನಿಲ್ಲಿಸಿದೆ. ಆ ಪ್ರೀತಿ, ವಾತ್ಸಲ್ಯದ ತುಂಬಲಾಗದ ನಷ್ಟ ಸುಳ್ಯವನ್ನು ಸದಾ ಕಾಲ ಕಾಡಲಿದೆ.
ಸಮಾಜದ ಬಗ್ಗೆ, ಸಹಜೀವಿಗಳ ಬಗ್ಗೆ ಸದಾ ತುಡಿಯುತ್ತಿದ್ದವರು ಹಿರಿಯರಾದ ಅಬ್ಬಾಸ್ ಹಾಜಿಯವರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಗಲೂ ಶಾಲೆ, ಅನಾಥಾಲಯದ ಮೀಟಿಂಗ್ ಗೆ, ಇತರ ಚಟುವಟಿಕೆಗಳ ಬಗ್ಗೆಯೇ ಮಾತನಾಡುತ್ತಿದ್ದರು. – ಖಾದರ್ ಷಾ , ವಾರ್ತಾಧಿಕಾರಿ. ದ.ಕ. ಜಿಲ್ಲೆ