ಅಡಿಕೆ ಕೊಳೆರೋಗದೊಂದಿಗೆ ಸೆಣಸಾಟಕ್ಕೆ 10 ಯಶಸ್ವೀ ಸೂತ್ರಗಳು …!

September 20, 2019
10:45 AM

ಸುಮಾರು ಮೂವತ್ತು ವರ್ಷಗಳ ಹಿಂದಿನ ದಿನಗಳು. ಕೃಷಿಲೋಕದತ್ತ ಆಸಕ್ತಿಯಿಂದ ಮುಖ ಮಾಡಿದ್ದೆ.ಅಜ್ಜನವರಿಂದ ಅಡಿಕೆತೋಟದ ಸಾಂಪ್ರದಾಯಿಕ ಕಲೆಗಳ ಹಿನ್ನೋಟ ಮುನ್ನೋಟಗಳ ಪಾಠ.ಕಿವಿಗೆ ಬಿದ್ದದ್ದೆಷ್ಟೋ….ಗಾಳಿಯಲ್ಲಿ ತೇಲಿಹೋದವೆಷ್ಟೋ…ಇರಲಿ ,ಪ್ರಾಯದ ಗುಣವೇ ಅಂತಹದ್ದು.

ಅಡಿಕೆ ಕೃಷಿಯಲ್ಲಿ ಮೇಲೆ ಬೀಳಬೇಕಾದರೆ ಮಳೆಗಾಲದ,ಕೊಳೆರೋಗದೊಂದಿಗೆ ಸೆಣಸಾಡಲೇಬೇಕು.ಎರಡು ಗಟೋರ್ ಪಂಪು,ಬೋರ್ಡೋ ಮಾಡಲೊಂದು ಡ್ರಮ್, ಗಟೋರ್ ಪಂಪಿನ ಹತ್ತಿರ ಬೋರ್ಡೋ ತುಂಬಲು ಅರ್ದ ಬಾಯಿ ಕಡಿದ ಹಳೇ ಎಣ್ಣೆ ಡಬ್ಬಿ,ಅದಕ್ಕೆ ದೂರದ ಡ್ರಮ್ ನಿಂದ ದ್ರಾವಣ ತಂದು ಎರೆಯಲೊಂದು ಪ್ಲಾಸ್ಟಿಕ್ ಕೊಡಪಾನ. ಗಟೋರ್ ಗೆ ಗಾಳಿ ಹಾಕಲು ಇಬ್ಬರು,ಒಬ್ಬ ತಪ್ಪಿದರೆ ಸ್ವತಃ ನಾನೇ ನಿಲ್ಲುತ್ತಿದ್ದೆ. ಮದ್ದು ತರಲೊಬ್ಬ,ಸ್ಪ್ರೇ ಗೆ ಇಬ್ಬರು…. ಇದು ನಮ್ಮಲ್ಲಿನ ವ್ಯವಸ್ಥೆ. ಅಶೋಕ,ಬಾಬು ಇವರು ಎಂತಹ ಜಾರುವ ಮರಗಳಿಗೂ ಏರುವ ನಿಪುಣರು.ಆಗ ಇದ್ದ ತೋಟದ ವಿಸ್ತಾರವೂ ಅಷ್ಟೇ… ಎಲ್ಲವೂ ಸಾಧಾರಣ ಸುಸೂತ್ರವಾಗಿ ನಡೆಯುತ್ತಿತ್ತು.ಆದರೆ ಈಗ ನಮ್ಮದೂ,ಊರ ತೋಟಗಳೂ ಇಮ್ಮಡಿ ಮುಮ್ಮಡಿ ಆದದ್ದು ನಿಜ.ಹಾಗೇ ನಮ್ಮ ಪ್ರಾಯವೂ ಮುಂದೋಡಿ ನಮ್ಮ ಶಕ್ತಿ ಕೆಳಗಿಳಿದದ್ದೂ ನಿಜ..ಕಾರ್ಮಿಕ ಮತ್ತು ಯಜಮಾನ ವರ್ಗದ ಹೊಸ ಪೀಳಿಗೆಯ ಉಪಸ್ಥಿತಿ ಉಸ್ತುವಾರಿಯೂ ಕಡಿಮೆಯಾದದ್ದೂ ನಿಜ.ಇದೆಲ್ಲದರ ಸಾಧಕ ಭಾಧಕಗಳೇ ಕೊಳೆರೋಗದ ಉಲ್ಬಣಾವಸ್ಥೆ.

ಏನೇ ಇರಲಿ, ಇರುವ ವ್ಯವಸ್ಥೆಗಳೊಂದಿಗೆ ನಾವು ಹೋರಾಡಲೇಬೇಕು.ಅಸ್ತಿತ್ವದ ಪ್ರಶ್ನೆ. ನನ್ನ ತೋಟಕ್ಕೆ ನಾನೇ ಒಡೆಯ,ಹಾಗಾಗಿ ಇಲ್ಲಿನ ಕಷ್ಟ ನಷ್ಟಗಳಿಗೂ ನಾನೇ ಜವಾಬ್ದಾರ.ಸರಕಾರವನ್ನೋ ಮತ್ತೊಬ್ಬನನ್ನೋ ದೂಷಿಸಿದರೆ ಪ್ರಯೋಜನವಾಗದು.ಅಂತೂ ಕಾಲಕ್ಕನುಗುಣವಾಗಿ ಹೊಸ ಯಂತ್ರೋಪಕರಣಗಳು , ರಾಸಾಯನಿಕಗಳು, ಹೊಸ ಪದ್ದತಿಗಳು ಕೊಳೆರಾಯನ ವಿರುದ್ಧದ ಹೋರಾಟಕ್ಕಾಗಿ ಹೊರಬಂದವು…. ಕೊಳೆರೋಗಕ್ಕೆ ಶಾಶ್ವತ ಪರಿಹಾರವೋ ಎಂದು ಕಂಡುಬಂದವು. ಆದರೆ ಕೊಳೆರಾಯ ಯಾವ ಯಂತ್ರಕ್ಕೂ ರಾಸಾಯನಿಕಕ್ಕೂ ಜಗ್ಗದಾದ. ಕಾರಣ ಅವನ ಅರಮನೆ ಅಡಿಕೆಮರದ ತುತ್ತತುದಿಯಲ್ಲಿ. ಮರವೇರುವ,ಏರಿಸುವ ಯಂತ್ರಗಳು, ಬೈಕ್ ಗಳು ಬಂದವು.ಏನಿದ್ದರೂ ಕೊಳೆರಾಯನ ಕಾಲಕೆಳ ಭಾಗಕ್ಕಷ್ಟೇ ತಲುಪಲು ಮತ್ತು ಔಷಧ ಕೊಡಲು ಸಾದ್ಯವಾಯಿತೇ ಹೊರತು ಕೊಳೆರಾಯನ ತಲೆಗೆರೆಯಲು ಸಾಧ್ಯವಾಗಲಿಲ್ಲ. (ಅಡಿಕೆ ಕೊಳೆ ರೋಗ ನಿಯಂತ್ರಣಕ್ಕೆ ,ಅಡಿಕೆಯ ತೊಟ್ಟು ಅಂದರೆ ಮುಖ ಭಾಗಕ್ಕೆ ಔಷಧಿ ಬೀಳುವುದು ಅತೀ ಅವಶ್ಯಕ) .ಇಲ್ಲೇ ಎಲ್ಲಾ ರಾಸಾಯನಿಕಗಳು,ಯಂತ್ರಗಳೂ ಸೋತು ಸುಣ್ಣವಾಗುವುದು.ಹಾಗಿದ್ದರೆ ಏನು ಮಾಡಬಹುದೂ….ಕೃಷಿ ಕ್ಷೇತ್ರದಲ್ಲಿ ಕೆಲವೊಂದು ಅನುಸರಣಾತ್ಮಕ, ಅಂತರ್ವ್ಯಾಪೀ ಬದಲಾವಣೆಗಳನ್ನು ಮಾಡಿಕೊಳ್ಳುವತ್ತ ನಾವು ಚಿಂತಿಸಬೇಕಾಗಿದೆ.ಈ ಬಗ್ಗೆ ನಾನು ಕಂಡುಕೊಂಡದ್ದನ್ನು ಈ ಕೆಳಗಿನಂತೆ ಹಂಚಿಕೊಳ್ಳುತ್ತೇನೆ.

1. ಬೇಸಿಗೆಯಲ್ಲಿ ನೀರಾವರಿ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು.ಚಳಿಗಾಲದ ಸಮಯದಲ್ಲಿ ತೋಟಕ್ಕೆ ಐದಾರು ದಿನಕ್ಕೊಮ್ಮೆ ಎರಡು,ಎರಡುವರೆ ಗಂಟೆ ನೀರು ಕೊಡುವುದು. ಚಳಿಗಾಲದಲ್ಲಿ ನೀರ ಅವಶ್ಯಕತೆ ಮರಗಳಿಗೆ ಹೆಚ್ಚಿದೆ ,ಯಾಕೆಂದರೆ ವಾತಾವರಣ ಶುಷ್ಕವಾಗಿದ್ದು, ಮರ ಗರ್ಭಾವಸ್ಥೆಯಲ್ಲಿರುತ್ತಾ ನೀರ ಅಗತ್ಯತೆ ಹೆಚ್ಚಿರುತ್ತದೆ.ಅದೇ ಪೆಬ್ರವರಿ ನಂತರ ಐದಾರು ದಿನಗಳಿಗೊಮ್ಮೆ ಒಂದು ವರೆ ಗಂಟೆ ನೀರು ದಾರಾಳ ಸಾಕು.ವಾತಾವರಣದಲ್ಲಿ ತೇವಾಂಶ ತುಂಬಿರುತ್ತದೆ.

2. ಮಾರ್ಚ್ ತಿಂಗಳ ನಂತರ ತೋಟಕ್ಕೆ ಸಾರಜನಕಯುಕ್ತ ಗೊಬ್ಬರ ಕಡ್ಡಾಯವಾಗಿ ನಿಷೇಧ. ಮಾರ್ಚ್ ನಂತರ ಸಾರಜನಕ ಗೊಬ್ಬರ ಕೊಟ್ಟರೆ ಎಪ್ರಿಲ್ ,ಮೇ ತಿಂಗಳ ಮಳೆಗೆ ತೋಟ ಎಳತೇರಿ ಕೊಳೆರಾಯನಿಗೆ ಆಹ್ವಾನ ಕೊಡುವಂತಾಗುತ್ತದೆ.ರೋಗ ನಿರೋಧಕ ಶಕ್ತಿ ಕುಂದುತ್ತದೆ.ಹಾಗೂ ಸಾರಜನಕದ ಹೆಚ್ಚಳದಿಂದ “ಮೈಟ್ ರೋಗ” ಬಾದಿಸಿ ಮರದ ಆರೋಗ್ಯ ಏರುಪೇರಾಗಬಹುದು.

3 .ಮೇ ತಿಂಗಳಲ್ಲಿ ತೋಟಕ್ಕೆ ಸುಣ್ಣ ಕೊಡುವುದು. ಇದರಿಂದಾಗಿ ತೋಟದ ರಸಸಾರ ಸಮತೋಲನದಲ್ಲಿರುತ್ತದೆ.

4 . ಮೇ ತಿಂಗಳ ಕೊನೆಗೆ ಮರಕ್ಕೆ ನೂರೋ ಇನ್ನೂರೋ ಗ್ರಾಮ್ಸ್ ಪೊಟೇಷ್ ಕೊಡುವುದು….ಇದರಿಂದಾಗಿ ಮರಕ್ಕೆ ರೋಗ ಸಹಿಷ್ಣುತಾ ಶಕ್ತಿ ಬರುತ್ತದೆ.

5 .ಬಸಿಗಾಲುವೆಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದೂ ಅತೀ ಮುಖ್ಯ.

6 .ತೋಟದ ಸುತ್ತ ತುಂಬಿರುವ ಕಾಡು ಮರಗಳ ಗೆಲ್ಲುಗಳನ್ನು ಸವರಿ ಗಾಳಿ ಬೆಳಕು ಆಡುವಂತೆ ಮಾಡುವುದು.

7 .ತೋಟದ ಶುಚಿತ್ವ ಅಂದರೆ ಅನಗತ್ಯ ಹಲಸಿನಕಾಯಿ,ಮುಂತಾದ ಹಣ್ಣುಗಳಿದ್ದರೆ ಕೊಳೆಯುವ ತನಕ ಬಿಡದೆ ಕಡಿದು ತೆಗೆದು ಹಾಕುವುದು.

8 .ಮಾರ್ಚ್ ,ಎಪ್ರಿಲ್ ಮೇ ತಿಂಗಳ ಕೊನೆಗೇ ಬೋರ್ಡೋ ಸಿಂಪರಣೆ.(ಈ ಸಿಂಪರಣೆಗಳಿಗೆ ,ಅಡಿಕೆ ಮಿಡಿ ತೀರಾ ಸಣ್ಣದಿರುವ ಕಾರಣ ಹೆಚ್ಚು ಬೋರ್ಡೋ ಮುಗಿಯುವುದಿಲ್ಲ, ಅರ್ದಕ್ಕಿಂತಲೂ ಕಡಿಮೆ. ಈ ಸ್ಪ್ರೇ ಮಳೆಗಾಲಕ್ಕೆ ಶ್ರೀ ರಕ್ಷೆಯಾಗಿ ಕಾಯುತ್ತದೆ.

9 .ಸಾದ್ಯವಾದರೆ,ಮಳೆ ಕಡಿಮೆ ಇದ್ದರೆ ಅಗಸ್ಟ್ ಸುರುವಿಗೆ ನೂರು ಗ್ರಾಮ್ಸ್ ನಂತೆ ಪುನಃ ಪೊಟೇಷ್ ಕೊಡುವುದು.

10 . ಇದೆಲ್ಲಕ್ಕೂ ಕಲಶಪ್ರಾಯ, ಕೃಷಿ ಕಾರ್ಯದಲ್ಲಿ ನಮ್ಮ ಉಪಸ್ಥಿತಿ ಮತ್ತು ತೀರಾ ಹತ್ತಿರದಿಂದ ಗಮನಿಸುವಿಕೆ ಮತ್ತು ತೊಡಗಿಸಿಕೊಳ್ಳುವಿಕೆ.

ಇಷ್ಟು ಅನುಸರಣೆಗಳನ್ನು ಮಾಡಿದರೆ 99% ಕೊಳೆರಾಯನ ತಡೆಯಬಹುದು.ಇದೆಲ್ಲವೂ ಎಲ್ಲರಿಗೂ ಅನ್ವಯಿಸಿತೆಂದು ಹೇಳಲಾರೆ.ನಮ್ಮ ತೋಟ,ವಾತಾವರಣ, ಮಣ್ಣಿನ ತರಗತಿಗಳನ್ನು ಹಲವು ವರ್ಷ ಸೂಕ್ಷ್ಮವಾಗಿ ಗಮನಿಸಿ ಅನುಸರಿಸಬೇಕಾದೀತು.

  • ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಸಮೋಸ
March 19, 2025
8:00 AM
by: ದಿವ್ಯ ಮಹೇಶ್
ಮಾರ್ಚ್ 19 ರಿಂದ 5 ರಾಶಿಗಳಿಗೆ ವಿಶೇಷ ಶುಭ ಸೂಚನೆ
March 19, 2025
6:41 AM
by: ದ ರೂರಲ್ ಮಿರರ್.ಕಾಂ
ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?
March 17, 2025
10:34 AM
by: ವಿವೇಕಾನಂದ ಎಚ್‌ ಕೆ
ಮುಂದಿನ ಸೂರ್ಯಗ್ರಹಣದ ಪ್ರಭಾವಗಳು ಏನು..? ಯಾವ ರಾಶಿಯವರಿಗೆ ಉತ್ತಮ..?
March 17, 2025
6:13 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror