ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಇದುವರೆಗೆ ಅಡಿಕೆ ಚಾಕೋಲೇಟ್ ಮಾಡಲಾಗುತ್ತಿತ್ತು. ಈಗ ಅಡಿಕೆ ಐಸ್ ಕ್ರೀಂ ಕೂಡಾ ಟೇಸ್ಟಿಯಾಗಿದೆ. ಈಗಾಗಲೇ ಕೆಲವು ಶುಭ ಕಾರ್ಯಕ್ರಮದಲ್ಲಿ ವಿತರಣೆಯಾಗಿದ್ದು, ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅಡಿಕೆಯ ಸಿರಪ್ ಮೂಲಕ ಐಸ್ ಕ್ರೀಂ ಮಾಡಲಾಗುತ್ತದೆ.
ಅಡಿಕೆಯ ಚೊಗರನ್ನು ಬಳಸಿ ಚಾಕಲೇಟ್ ತಯಾರಿಸಲು ಸಾಧ್ಯ ಎಂಬುದನ್ನು ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಪ್ರಗತಿಪರ ಕೃಷಿಕ, ಸಂಶೋಧಕ ಬದನಾಜೆ ಶಂಕರ ಭಟ್ ತೋರಿಸಿಕೊಟ್ಟಿದ್ದಾರೆ. ಅಡಿಕೆಯ ಬಳಕೆ ಉತ್ತರ ಭಾರತದಲ್ಲಿ ಮಾತ್ರವೇ ಹೆಚ್ಚಾಗಿ ಇತ್ತು, ಅಲ್ಲಿ ನಿತ್ಯವೂ ಬಳಕೆ ಮಾಡುತ್ತಾರೆ. ಆದರೆ ಇತ್ತೀಚೆಗೆ ಅಡಿಕೆ ಮಾರುಕಟ್ಟೆ ಅಸ್ಥಿರ ಮಾಡುವ ಪ್ರಯತ್ನ ನಡೆಯಿತು. ಅಡಿಕೆಯಲ್ಲಿ ವಿವಿಧ ಅಂಶ ಇದೆ, ಹಾನಿಕಾರಕ ವಸ್ತುಗಳು ಇವೆ ಎಂದೂ ಬಿಂಬಿಸಲಾಯಿತು. ಆದರೆ ಅಡಿಕೆಯಲ್ಲಿ ಯಾವುದೇ ಹಾನಿಕಾರಕ ಅಂಶವಿಲ್ಲ ಎಂದು ಪದೇ ಪದೇ ಸಾರಲಾಯಿತು. ಇಂತಹ ಸಂದರ್ಭದಲ್ಲಿ ಅಡಿಕೆಯಿಂದ ಹಲವು ವಿಧದ ಉತ್ಪನ್ನಗಳನ್ನು ತಯಾರಿಸಬಹುದು ಮತ್ತು ಜಗತ್ತಿನಾದ್ಯಂತ ಮಾರುಕಟ್ಟೆ ನಿರ್ಮಾಣ ಮಾಡಬಹುದು ಎಂಬುದು ಇತ್ತೀಚಿನ ದಿನದ ಸಂಶೋಧನೆಯಿಂದ ದೃಢ ಪಟ್ಟಿದೆ.
ಬದನಾಜೆ ಶಂಕರ ಭಟ್ ಅವರು ಅಡಿಕೆಯ ಚೊಗರನ್ನು ಬಳಸಿಕೊಂಡು ‘ಬಟರ್ ಸುಪಾರಿ ಚೊಕೋ’ ತಯಾರಿಸಿದ್ದು, ಸುಮಾರು 6 ಎರಡು ತಿಂಗಳ ಕಾಲ ಕೆಡದಂತೆ ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ತೋರಿಸಿದ್ದಾರೆ. 1 ಕೆ ಜಿ ಅಡಿಕೆಯಲ್ಲಿ ಸುಮಾರು 150 ಚಾಕಲೇಟ್ ತಯಾರಿಸಬಹುದಾಗಿದ್ದು, ಎಲ್ಲಾ ಖರ್ಚುಗಳನ್ನು ಸೇರಿಸಿದರೂ ಚಾಕಲೇಟ್ ಅನ್ನು 2 ರೂ. ಗೆ ಮಾರುಕಟ್ಟೆಯಲ್ಲಿ ಜನರಿಗೆ ನೀಡಬಹುದೆಂಬುದು ಭಟ್ಟರ ಅಭಿಪ್ರಾಯವಾಗಿದೆ.
ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇವೆ, ಬೆಳೆಯನ್ನೇ ನಿಷೇಧಿಸಬೇಕೆಂಬ ವಿಜ್ಞಾನಿಗಳಿಗೆ ಸವಾಲಾಗಿ ಸಂಶೋಧನೆಗಳನ್ನು ಮಾಡಿದ ಭಟ್ಟರು ಅಡಿಕೆ ಆರೋಗ್ಯಕ್ಕೆ ಉತ್ತಮ ಎನ್ನುವ ವಿಚಾರವನ್ನು ಸಾರುವಂತೆ ಮಾಡಿದ್ದಾರೆ. ಅಡಿಕೆಯ ಹಲವು ಉತ್ಪನ್ನಗಳನ್ನು ಮನೆಯಲ್ಲಿ ಯಾರು ಬೇಕಾದರೂ ತಯಾರಿಸಿ ಬಳಸಬಹುದೆಂಬುದನ್ನು ಪ್ರಯೋಗಗಳ ಮೂಲಕ ದೃಢ ಪಡಿಸಿದ್ದಾರೆ.
ಇದೀಗ ಅಡಿಕೆ ಐಸ್ ಕ್ರೀಂ ಕೂಡಾ ಹೆಚ್ಚು ಇಷ್ಟವಾಗುವ ವಸ್ತುವಾಗಿದೆ. ಅಡಿಕೆಯ ಚೊಗರು ಅಥವಾ ಅಡಿಕೆಯ ಸಿರಪ್ ತಯಾರಿಸಿ ಅದರ ಮೂಲಕ ರಾಸಾಯಕನಿಕ ರಹಿತವಾದ ಐಸ್ ಕ್ರೀಂ ತಯಾರಿ ಮಾಡಲು ಸಾಧ್ಯವಿದೆ. ಇದೀಗ ಅಡಿಕೆ ಐಸ್ ಕ್ರೀಂ ಅನ್ನು ವಿಟ್ಲದ ಐಸ್ ಕ್ರೀಂ ತಯಾರಕರು ತಯಾರು ಮಾಡಿ ಶುಭ ಕಾರ್ಯಕ್ರಮಗಳಿಗೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ. ಅಡಿಕೆಯ ಸಿರಪ್ ಬದನಾಜೆಯ ಶಂಕರ್ ಭಟ್ ಅವರು ತಯಾರಿಸಿ ಐಸ್ ಕ್ರೀಂ ತಯಾರಕರಿಗೆ ನೀಡಿದ್ದಾರೆ. ಇದೇ ಸಿರಪ್ ಬಳಸಿ ಬರ್ಫಿ ಸೇರಿದಂತೆ ಅಡಿಕೆಯ ಪ್ಲೇವರ್ ಬರುವ ತಿಂಡಿ ತಯಾರು ಮಾಡಬಹುದು ಎನ್ನುತ್ತಾರೆ ಬದನಾಜೆ ಶಂಕರ ಭಟ್.
ಹಲವು ಸಂಶೋಧನೆ:
ಬದನಾಜೆ ಶಂಕರ ಭಟ್ಟರು ಅಡಿಕೆಯ ದಾರಣೆ ಕುಸಿದು ಹೋದ ಸಮಯದಲ್ಲಿ ಏನಾದರೂ ಹೊಸತನ್ನು ಮಾಡಬೇಕು ಮತ್ತು ಅಡಿಕೆಯ ವಿವಿಧ ಉತ್ಪನ್ನಗಳ ಮೂಲಕ ಅಡಿಕೆಯ ಬೇಡಿಕೆಯನ್ನು ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಸಂಶೋಧನೆಗೆ ಮುಂದಾಗಿದ್ದರು. ಸುಮಾರು 8 ವರ್ಷಗಳಿಂದ ಅಡಿಕೆಯ ತಂಪುಪಾನೀಯ, ಅಡಿಕೆಯ ಸಾಮೂನು, ಅಡಿಕೆಯ ವೈನ್, ಅಡಿಕೆ ವಾಯಿಂಟ್ ಮೆಂಟ್, ಅಡಿಕೆ ವಾರ್ನಿಷ್, ಅಡಿಕೆಯ ಉಪ್ಪಿನಕಾಯಿ ಮಾಡಿ ಯಶಸ್ವಿಯನ್ನು ಕಂಡಿದ್ದಾರೆ.ಇದೀಗ ಪಿವಿಸಿ ಪೈಪ್ ಜೋಡಣೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಗಮ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಭಟ್ಟರು ಸದ್ಯ ಪೈಪ್ ಜೋಡಣೆಗೆ ಅಡಿಕೆಯ ಗಮ್ ತಯಾರಿಕೆ ಮಾಡಬಹುದೆಂಬ ಸಂಶೋಧನೆಯಲ್ಲಿ ತೊಡಗಿದ್ದಾರೆ.
(( ಸಹಕಾರ : ನಿಶಾಂತ್ ಬಿಲ್ಲಂಪದವು ))