ಅಡಿಕೆ ಬಗ್ಗೆ ಮತ್ತೆ ಲೋಕಸಭೆಯಲ್ಲಿ ವ್ಯತಿರಿಕ್ತ ಉತ್ತರವನ್ನು ಕೇಂದ್ರ ಆರೋಗ್ಯ ಇಲಾಖೆ ಸಚಿವರು ನೀಡಿದ್ದಾರೆ. ಈಗ ಎಲ್ಲೆಡೆ ಮತ್ತೆ ಚರ್ಚೆ ಆರಂಭವಾಗಿದೆ . ಕಳೆದ ಬಾರಿಯೂ ಹೀಗೆಯೇ ಆಗಿತ್ತು. ಚರ್ಚೆ ಜೋರಾಯಿತು, ಪ್ರತಿಭಟನೆವರೆಗೂ ಪಕ್ಷಗಳು ಮುಂದುವರಿದವು. ಇದೇ ವೇಳೆಗೆ ಅಡಿಕೆ ಧಾರಣೆ ಏರಿಕೆ ಕಂಡಿತು. ಎಲ್ಲರೂ ಮೌನಕ್ಕೆ ಶರಣಾದರು. ಕರಾವಳಿ , ಮಲೆನಾಡು ಭಾಗದ ಕೃಷಿಕರ ಬದುಕೇ ಆಗಿರುವ ಅಡಿಕೆ ರಕ್ಷಣೆಗೆ ಏನು ಮಾಡಬಹುದು ? ಏನು ಮಾಡಬೇಕು ? ಈ ಬಗ್ಗೆ ಈಗ ಚರ್ಚೆ ನಡೆದರೆ ಸಾಲದು ಅನುಷ್ಠಾನವಾಗಬೇಕು.
Advertisement
Advertisement
ಎರಡು ವರ್ಷದ ಹಿಂದೆ ಜೋರಾದ ಚರ್ಚೆ ಅಡಿಕೆ ಬೆಳೆಗಾರರ ವಲಯದಲ್ಲಿ ಮಾತ್ರವಲ್ಲ ಕೃಷಿ ವಲಯದಲ್ಲಿ ನಡೆಯುತ್ತಿತ್ತು. ಅಡಿಕೆ ಇನ್ನಿಲ್ಲ, ಅಡಿಕೆ ಇನ್ನು ಯಾರಿಗೂ ಬೇಡವಂತೆ..!. ಆಗ ಎಲ್ಲಾ ರಾಜಕೀಯ ಪಕ್ಷಗಳೂ ಎದ್ದುಕೊಂಡವು. ವಿಪಕ್ಷಗಳು ಅಡಿಕೆಯನ್ನು ಮುಂದಿಟ್ಟು ಮೈಲೇಜ್ ಪಡೆಯಲು ಯತ್ನಿಸಿದವು. ಅಡಿಕೆ ಬೆಳೆಗಾರರ ಹಿತ ಕಾಯುವ ಸಂಸ್ಥೆಗಳು ಒಂದಿಷ್ಟು ಪ್ರಯತ್ನ ಮಾಡಿ ಬಳಿಕ ಸುಮ್ಮನಾದವು. ಅಡಿಕೆ ಬೆಳೆಗಾರರ ತಂಡವೂ ಇದರ ಫಾಲೋಅಪ್ ಮಾಡಿಲ್ಲ.
ಈಗ ಮತ್ತೆ ಇನ್ನೊಬ್ಬ ಸಂಸದರು ಅಡಿಕೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ, ಗುಟ್ಕಾ, ಅಡಿಕೆ ಬಗ್ಗೆ ಏನು ? ಎಂದು ಕೇಳಿದ್ದಾರೆ. ಇದಕ್ಕೆ ಸಚಿವರು, ಆರೋಗ್ಯ ಇಲಾಖೆಯ ಬಳಿ ಇದ್ದ ಸಿದ್ಧ ಉತ್ತರ ನೀಡಿದ್ದಾರೆ. ಈಗ ಬದಲಾಗಬೇಕಾದ್ದು ಈ ಸಿದ್ಧ ಉತ್ತರ. ಇದಕ್ಕಾಗಿ ಅಡಿಕೆ ಬೆಳೆಯುವ ಪ್ರದೇಶದ ಸಂಸದರುಗಳು ಮಾತನಾಡಬೇಕು. ಬೆಳೆಗಾರರ ತಂಡವೂ ಜೊತೆಯಾಗಬೇಕು. ದಕ್ಷಿಣ ಕನ್ನಡ ಹಾಗೂ ಮಲೆನಾಡು ಭಾಗದ ಆರ್ಥಿಕತೆಯಲ್ಲಿ ಹೆಚ್ಚು ಪಾಲು ಅಡಿಕೆಯನ್ನು ಹೊಂದಿಕೊಂಡಿದೆ. ಪ್ರತೀ ವರ್ಷವೂ ಅಡಿಕೆ ಧಾರಣೆ ಹಾಗೂ ಅಡಿಕೆ ವಹಿವಾಟು ಕರಾವಳಿ ಜಿಲ್ಲೆಯ ವ್ಯಾಪಾರ, ಉದ್ಯಮದ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ ಅಡಿಕೆ ಬೆಳೆಗಾರರ ರಕ್ಷಣೆ , ಧಾರಣೆ ಸ್ಥಿರತೆ ಎಲ್ಲರಿಗೂ ಅನಿವಾರ್ಯ ಹಾಗೂ ಅಗತ್ಯ.
ಸಂಸದರೊಬ್ಬರು ಕೇಳಿರುವ ಪ್ರಶ್ನೆಗೆ ಆರೋಗ್ಯ ಇಲಾಖೆಯ ಸಿದ್ಧ ಉತ್ತರವನ್ನು ನೀಡಿದ ಸಚಿವರ ತಪ್ಪಿಲ್ಲ, ವರದಿಯಲ್ಲಿ ತಪ್ಪಿದೆ, ಈ ವರದಿ ಬದಲಾಗಬೇಕು. ಇದಕ್ಕಾಗಿ ಕ್ರಮ ಆಗಲೇಬೇಕಿದೆ. ಅಡಿಕೆ ಸೇವಿಸಿದರೆ, ಜಗಿದರೆ ಕ್ಯಾನ್ಸರ್ ಬರುತ್ತದೆ ಎಂದು ಸಚಿವರು ನೀಡುವ ಉತ್ತರದಲ್ಲಿದೆ. ಆದರೆ ಕೇವಲ ಅಡಿಕೆ ಜಗಿದರೆ ಏನೋ ಆಗದು, ಅಡಿಕೆಯ ಜೊತೆಗೆ ಸೇರಿಸುವ ಹೊಗೆಸೊಪ್ಪು, ಗುಟ್ಕಾ ಜೊತೆ ಸೇರಿಸುವ ವಸ್ತುಗಳು ಹಾನಿಕಾರಕ. ಇಲ್ಲಿ ವರದಿ ತಯಾರಿಸುವ ಮುನ್ನ ಅಡಿಕೆ ಬೆಳೆಗಾರರ ತೋಟದಿಂದ ಅಡಿಕೆ ಪರಿಶೀಲನೆಯಾಗಿಲ್ಲ. ಬದಲಾಗಿ ಕೊನೆಯ ಹಂತದಲ್ಲಿ, ಗುಟ್ಕಾದಂತಹ ವಸ್ತುಗಳಿಂದ ಅಡಿಕೆ ಬಗ್ಗೆ ವರದಿ ನೀಡಲಾಗಿದೆ. ಇನ್ನೊಂದು ಪ್ರಮುಖವಾಗಿ ಗಮನಿಸಬೇಕಾದ್ದು ಪ್ರತೀ ಬಾರಿಯೂ ಗಮನಿಸಿದಾಗ ಅಡಿಕೆ ನಾಶ ಮಾಡುವ ಹಿಂದೆ ತಂಬಾಕು ಮಾಫಿಯಾದ ಕೈವಾಡ ಇದೆ. ಪ್ರಮುಖವಾದ ಹೊಗೆಸೊಪ್ಪು ಕಂಪನಿಯೊಂದು ಅಡಿಕೆ ವಿರುದ್ಧವಾಗಿ ಮಾತನಾಡುವಂತೆ ಲಾಬಿ ಮಾಡುತ್ತದೆ. ಇದುವರೆಗಿನ ನ್ಯಾಯಾಲಯದ ಹೋರಾಟದಲ್ಲಿ ಅಡಿಕೆ ಪರ ವಾದ ಮಾಡುವ ಮಂದಿ ಕೇವಲ 4-5 ಆದರೆ ಅಡಿಕೆ ವಿರುದ್ಧವಾಗಿ ವಾದ ಮಾಡುವ ಮಂದಿ 30-35 ಮಂದಿ ಇದ್ದಾರೆ ಎಂಬುದು ಈ ಹಿಂದೆಯೇ ತಿಳಿದಿದೆ.
ಹೀಗಾಗಿ ಅಡಿಕೆ ಬೆಳೆಗಾರರ ಪರವಾಗಿ ಮಾತನಾಡಲು, ಧ್ವನಿಯಾಗಲು ಏನು ಮಾಡಬಹುದು ?
ಪರಿಹಾರ-1: ಅಡಿಕೆ ಅನೇಕ ವರ್ಷಗಳಿಂದ ಪೂಜೆಗಳಲ್ಲಿ ಔಷಧಿಯಾಗಿ ಬಳಕೆಯಾಗುತ್ತಿದೆ. ಇಷ್ಟು ಮಾತ್ರವಲ್ಲ ಇತ್ತೀಚೆಗೆ ಅಡಿಕೆ ಐಸ್ ಕ್ರೀಂ, ಅಡಿಕೆ ಚಾಕೋಲೇಟ್ ಸಹಿತ ಇತರ ವಸ್ತುಗಳ ತಯಾರಿ ನಡೆದಿದೆ. ಎಲ್ಲೂ ಅಡಿಕೆ ಹಾನಿಕಾರಕ ಎಂಬ ಅಂಶ ಬಂದಿಲ್ಲ. ಈ ಬಗ್ಗೆ ವಿಟ್ಲದ ಬದನಾಜೆ ಶಂಕರ ಭಟ್ ಸಾಕಷ್ಟು ಅಧ್ಯಯನ ಅಡಿಕೆ ಬಗ್ಗೆ ಮಾಡಿದ್ದಾರೆ. ಅಡಿಕೆ ಹಾನಿಕಾರಕ ಅಲ್ಲ ಎಂಬ ಅಂಶದ ಬಗ್ಗೆ ಅಧ್ಯಯನ ವರದಿ ಸಹಿತ ನೀಡುತ್ತಾರೆ. ಹಾಗಿರುವಾಗ ಆರೋಗ್ಯ ಇಲಾಖೆ ವರದಿಗೂ ಮುನ್ನ ಗಮನಿಸಬೇಕು. ಇದನ್ನು ಸಂಸದರುಗಳು ಇಲಾಖೆಗೆ ತಿಳಿಸಬೇಕು.
ಪರಿಹಾರ-2 :ಇನ್ನೊಂದು ಪ್ರಮುಖವಾದ ಅಂಶವಿದೆ. ಇಂದು ಅಡಿಕೆ ಎನ್ನುವುದು ವಾಣಿಜ್ಯ ಬೆಳೆಯಾಗಿದೆ. ಇದನ್ನು ಕೇಂದ್ರ ಸರಕಾರವು ಅಡಿಕೆಯು ಔಷಧೀಯ ಬೆಳೆ ಎಂಬುದನ್ನು ದಾಖಲೀಕರಣ ಮಾಡಿದರೆ ಎಲ್ಲಾ ಸಮಸ್ಯೆಗಳೂ ಪರಿಹಾರ ಕಾಣಲು ಸಾಧ್ಯವಿದೆ. ಅಡಿಕೆಗೆ ಔಷಧೀಯ ಗುಣವೂ ಇರುವುದರಿಂದ ಔಷಧೀಯ ಬೆಳೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಕ್ರಮ ಆಗಬೇಕಿದೆ. ಇದರಿಂದ ಅಡಿಕೆ ಹಾನಿಕಾರಕ ಎಂಬ ದೂರು ದೂರವಾಗುತ್ತದೆ. ಈ ಬಗ್ಗೆ ಭಾರತೀಯ ಕಿಸಾನ್ ಸಂಘದ ಸದಸ್ಯ ಎಂ.ಜಿ.ಸತ್ಯನಾರಾಯಣ ಸಾಕಷ್ಟು ಮಾಹಿತಿ, ದಾಖಲೆ ಸಂಗ್ರಹಿಸಿದ್ದಾರೆ.
ಪರಿಹಾರ-3: ಕ್ಯಾಂಪ್ಕೋ ಸಂಸ್ಥೆಯ ಜೊತೆ ಎ ಆರ್ ಡಿ ಎಫ್ ಇದೆ. ಅಡಿಕೆ ಸಂಶೋಧನೆ ಹಾಗೂ ಅಭಿವೃದ್ಧಿಗೆ ಎಂದೇ ಇರುವ ವಿಭಾಗ. ಇದುವರೆಗೂ ಅಡಿಕೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ವರದಿ ತಯಾರು ಮಾಡಿಲ್ಲ. ಅತೀ ಸುಲಭ ಇದೆ, ಸಂಸ್ಥೆಯು ವಿಶ್ವ ವಿದ್ಯಾನಿಲಯದ ಮೂಲಕ ಅಡಿಕೆ ಬಗ್ಗೆ ಸಮಗ್ರ ದಾಖಲೆ ಮಾಡಿಸಿ, ವರದಿ ತಯಾರಿಸಿ ಸರಕಾರದ ಮುಂದೆ ಇಡುವುದು ಬಳಿಕ ಭಾರತೀಯ ಕೃಷಿ ಸಂಸ್ಥೆಯ ಮುಂದೆ ಇರಿಸಿ ಅಡಿಕೆ ಹಾನಿಕಾರಕ ಅಲ್ಲವೆಂದು ದೃಢಪಡಿಸುವಂತೆ ಎ ಆರ್ ಡಿ ಎಫ್ ಮಾಡಬಹುದು. ಇದನ್ನೇ ಕೇಂದ್ರ ಸರಕಾರಕ್ಕೆ ನೀಡುವುದು.
ಪರಿಹಾರ-4: ಅಡಿಕೆ ಬೆಳೆಗಾರರ ಹಿತಕಾಯುವ ಸಂಸ್ಥೆಗಳು, ಸಂಘಟನೆಗಳು ಜೊತೆಯಾಗಿ ಅಡಿಕೆ ಹಾನಿಕಾರಕ ಅಲ್ಲ ಎಂಬ ಅಂಶವನ್ನು ಸಚಿವಾಲಯದ ಮುಂದೆ ಇಡುವುದು.
ಇದು ಅಡಿಕೆ ಬೆಳೆಗಾರರ ಬದುಕಿನ ಪ್ರಶ್ನೆ. ಹೀಗಾಗಿ ದಯವಿಟ್ಟು ಇದರಲ್ಲಿ ರಾಜಕೀಯು ಮಾಡಬೇಡಿ. ಎಲ್ಲರೂ ಒಂದಾಗಿ ಹೋರಾಟ ಮಾಡುವಂತಾಗಲಿ. ಅಡಿಕೆ ಬೆಳೆಗಾರರಿಗೆ ನ್ಯಾಯ ಸಿಗುವಂತಾಗಲಿ.