ಸುಳ್ಯ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ 7 ಮಂದಿ ಅಡ್ಡ ಮತದಾನ ಮಾಡಿರುವುದು ಖಚಿತ. ಆದರೆ ಅಡ್ಡ ಮತದಾನ ಮಾಡಿದವರು ಯಾರು ಎಂದು ಪತ್ತೆ ಹಚ್ಚಲು ಸಾಧ್ಯವಾಗದ ಹಿನ್ನಲೆಯಲ್ಲಿ ಮತದಾನಕ್ಕೆ ಪ್ರತಿನಿಧಿಗಳಾಗಿದ್ದ ಎಲ್ಲಾ 17 ಮಂದಿಯೂ ಪ್ರಸ್ತುತ ನಿರ್ವಹಿಸುವ ಹುದ್ದೆಗಳಿಗೆ ರಾಜಿನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. ಎಲ್ಲರೂ ರಾಜಿನಾಮೆ ನೀಡಲಿದ್ದು 5 ಮಂದಿ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೈವಸ್ಥಾನದಲ್ಲಿ ಪ್ರಮಾಣ ಮಾಡಿರುವುದು ನಮ್ಮ ಭಾವನಾತ್ಮಕ ವಿಷಯ. ಎಲ್ಲರ ಸಮ್ಮುಖದಲ್ಲಿ ಆದ ನಿರ್ಣಯದಂತೆ ಪ್ರಮಾಣ ಮಾಡಲು ಸೂಚನೆ ನೀಡಿದ್ದೆವು. ಆದರೆ ಪ್ರಮಾಣ ಮಾಡಿದಾಗಲೂ ಅಡ್ಡಮತದಾನ ಮಾಡಿದವರು ಒಪ್ಪಿಕೊಳ್ಳದ ಕಾರಣ ರಾಜೀನಾಮೆ ಕೇಳುವುದು ಅನಿವಾರ್ಯವಾಯಿತು ಎಂದು ಅವರು ಹೇಳಿದರು. ಅಡ್ಡ ಮತದಾನ ಮಾಡಿರುವುದರಿಂದ ಪಕ್ಷದ ಮತ್ತು ಸಂಘಟನೆಯ ವರ್ಚಸ್ಸಿಗೆ ಧಕ್ಕೆಯಾಗಿದೆ. ಕಾರ್ಯಕರ್ತರಿಗೆ ನೋವಾಗಿದೆ. ಆದುದರಿಂದ ಎಲ್ಲರೂ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕು ಮತ್ತು ಆ ಸ್ಥಾನಕ್ಕೆ ಹೊಸಬರಿಗೆ ಅವಕಾಶ ನೀಡಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು. ಇವರೆಲ್ಲರಿಗೂ ಪಕ್ಷ ಸ್ಥಾನ ಮತ್ತು ಜವಾಬ್ದಾರಿಯನ್ನು ನೀಡಿದೆ. ಇದೀಗ ಇಂತಹ ಸಂದರ್ಭ ಎದುರಾದ ಕಾರಣ ಪಕ್ಷ ಎಲ್ಲರ ರಾಜಿನಾಮೆ ಕೇಳಬೇಕಾಗಿ ಬಂದಿದೆ. ಎಲ್ಲರೂ ರಾಜಿನಾಮೆ ನೀಡುವ ವಿಶ್ವಾಸವಿದೆ ಎಂದು ಅವರು ವಿವರಿಸಿದರು.