ಸುಬ್ರಹ್ಮಣ್ಯ: ಕೊರೊನಾ ಲಾಕ್ಡೌನ್. ಸರಕಾರ ಬಡ ಜನರು ಹಸಿವಿನಿಂದ ಬಳಲಬಾರದು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ವಿವಿಧ ಸಂಘ ಸಂಸ್ಥೆಗಳು ನಿರಂತರ ಶ್ರಮ ವಹಿಸುತ್ತಿವೆ, ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಎಲ್ಲರದೂ ಒಂದೇ ಕೆಲಸ ಬಡವರು ಹಸಿವಿನಿಂದ ಬಳಲಬಾರದು. ಅನೇಕರು ತಾವು ಹಸಿವಿನಿಂದ ಇದ್ದರೂ ಸೇವೆಯಲ್ಲೇ ತೊಡಗಿದ್ದಾರೆ. ಆದರೆ ಇದೊಂದು ಘಟನೆ ತೀರಾ ವಿಷಾದನೀಯ. ಏನಿದು ?
ಬಡವರು, ನಿರಾಶ್ರಿತ ಜನರು ಹಸಿವಿನಿಂದ ಬಳಲಬಾರದು ಎಂದು ಸರಕಾರ ವ್ಯವಸ್ಥೆ ಮಾಡಿದೆ. ಇದರ ಭಾಗವಾಗಿ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಅಭಯ ವಸತಿಗೃಹದಲ್ಲಿ ಹೊರರಾಜ್ಯದಿಂದ ವಲಸೆ ಬಂದ ಕಾಮಿ೯ಕ ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಹಾಗೂ ದೇವಸ್ಥಾನದ ವತಿಯಿಂದ ಉಚಿತ ಭೋಜನ ವ್ಯವಸ್ಥೆ ಮಾಡಿದೆ. ದೇವಸ್ಥಾನದಲ್ಲಿ ಪ್ರತಿನಿತ್ಯವೂ ಬೆಳ್ತಿಗೆ ಅಕ್ಕಿಯಿಂದ ಮಾಡಿದ ಊಟವನ್ನೇ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಈ ಬಾರಿಯೂ ಅದೇ ನೀಡಲಾಗಿತ್ತು. ಅಧಿಕಾರಿಗಳು, ಸ್ಥಳೀಯ ಕಾರ್ಯಕರ್ತರು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದರು. ಆದರೆ ಸೋಮವಾರ ಬೆಳಗ್ಗೆ ಅನ್ನವನ್ನು ಚೆಲ್ಲುವ ದೃಶ್ಯ ಕಂಡುಬಂತು. ಇದಕ್ಕೆ ವ್ಯಾಪಕವಾದ ಅಸಮಾಧಾನ ಕೇಳಿ ಬಂದಿದೆ. ಅನ್ನ ಚೆಲ್ಲಿರುವುದು ತಿಳಿದಂತೆಯೇ ದೇವಸ್ಥಾನದ ಆಡಳಿತ ಹಾಗೂ ಸಾಮಾಜಿಕ ಕಾರ್ಯಕರ್ತರು ತಕ್ಷಣವೇ ಈ ಬಗ್ಗೆ ಜಾಗೃತರಾಗಿ ಏಕೆ ಎಸೆದಿದ್ದಾರೆ ಎಂದು ಗಮನಿಸಿದ್ದಾರೆ. ಇಂದಿನಿಂದಲೇ ಅನ್ನದ ಬದಲು ಚಪಾತಿ ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಆದರೆ ಅನ್ನವನ್ನು ಈ ಮಾದರಿಯಲ್ಲಿ ಚೆಲ್ಲುವುದು ಯಾವತ್ತೂ ಸರಿಯಲ್ಲ. ಅನ್ನದ ಮಹತ್ವವನ್ನು ಎಲ್ಲರಿಗೂ ತಿಳಿಸಲೇಬೇಕಾದ ಅಗತ್ಯವಿದೆ. ದೇಶದಲ್ಲಿ ಅನ್ನಕ್ಕಾಗಿ ಪರದಾಟ ಮಾಡುವ ಮಂದಿ ಇದ್ದಾರೆ. ಎಲ್ಲೇ ಆಗಲಿ ರೈತ ಶ್ರಮಪಟ್ಟು ಬೆಳೆದ ಭತ್ತವನ್ನು ಅಕ್ಕಿಯ ರೂಪದಲ್ಲಿ ಸಿಗುವವರೆಗೆ ಅನೇಕರ ಶ್ರಮ ಇದೆ. ಈ ಎಲ್ಲಾ ಬೆವರಹನಿಗಳು ಸೇರಿ ಶ್ರದ್ಧಾ ಕೇಂದ್ರಗಳಲ್ಲಿ ಪ್ರಸಾದದ ರೂಪದಲ್ಲಿ ಸಿಕ್ಕಿದರೆ ಮನೆಗಳಲ್ಲಿ ಅನ್ನವಾಗಿ ಸಿಗುತ್ತದೆ. ಹೀಗಾಗಿ ಹೀಗೆ ಎಸೆಯುವ ಮಂದಿಗೆ ಜಾಗೃತಿ ಮೂಡಿಸಬೇಕಿದೆ. ಅನ್ನದ ಶ್ರೇಷ್ಟತೆ ತಿಳಿಸಬೇಕಿದೆ.