ಅಮ್ಮಂದಿರ ದಿನ | ಅಮ್ಮನೆಂಬ ಹೆಮ್ಮೆ – ಅಮ್ಮನೆಂಬ ಪ್ರೀತಿ -ಅಮ್ಮನೆಂಬ ಆಸರೆ- ಅಮ್ಮನೇ ಎಲ್ಲವೂ |

(ಚಿತ್ರ- ಇಂಟರ್ನೆಟ್ )
ಅಮ್ಮನೆಂಬ ಅಮ್ಮನಿಗೆ ಇಂದು ಶುಭಾಶಯವಲ್ಲ….  ಶರಣು……
ಒಂದೇ ಬಾಯಿಯ ಮೂಲಕ ಎರಡು ಜೀವಗಳಿಗೆ ಆಹಾರ, ಗಾಳಿ, ನೀರು…ಯಾವುದೇ ವಿಜ್ಞಾನಕ್ಕೂ ಈ ಸೃಷ್ಟಿಯನ್ನು ಮರುಸೃಷ್ಟಿ ಮಾಡಲಾಗದು. ಮಾಡಿದರೂ ಯಶಸ್ಸಾಗದು. ಹೀಗಾಗಿಯೇ ಅದು ಅಮ್ಮ. ಯಾರಿಗೂ, ಯಾವುದಕ್ಕೂ ಸೃಷ್ಟಿ ಮಾಡಲಾಗದ್ದನ್ನು ಸೃಷ್ಟಿ ಮಾಡುವ ಅಮ್ಮನ ದಿನ ಇಂದು. ಹೀಗಾಗಿ ಜಗತ್ತಿನ ಸರ್ವಶ್ರೇಷ್ಟ ದೇವರು ಅಮ್ಮ.

“ನೀನು ಆಕಾಶಕ್ಕೆ ಗುರಿ ಇಡು, ಮನೆಯ ಮಾಡನ್ನಾದರು(ಚಾವಣಿ)ಏರುತ್ತೀಯ. ಮನುಷ್ಯ ಯಾವತ್ತೂ ಕನಸು ಕಾಣುವುದನ್ನು ನಿಲ್ಲಿಸಬಾರದು. ” ಎಂಬ ಉದಾತ್ತ ಭಾವನೆಗಳನ್ನು ಬೆಳೆಸುವಾಕೆ ಅಮ್ಮ.
ನಾವು ನಮ್ಮ ಕನಸುಗಳು ಆಕಾಶದೆತ್ತರಕ್ಕಿರ ಬೇಕು. ಬಹಳಷ್ಟು ಕೆಲಸ ( ಸಾಧನೆ) ಮಾಡಿದರೆ ಬದುಕಿನಲ್ಲಿ ಏನನ್ನಾದರು ಸಾಧಿಸಬಹುದು ಎಂದು ಜೀವನದ ಕ್ಲಿಷ್ಟತೆಯನ್ನು ಸರಳವಾಗಿ ವಿವರಿಸುವಾಕೆ ಅಮ್ಮ.
ಆಕೆ ಜನನಿ, ಮಾತೆ,ಮಾತೃ, ಅವ್ವ, ಅಬ್ಬೆ, ಅಚ್ಚಿ, ಮಾ, ಜನ್ಮದಾತೆ ಎಂದು ಬೇರೆ ಬೇರೆ ಭಾಷೆಯಲ್ಲಿ , ಹಲವು ರೀತಿಯಲ್ಲಿ ಕರೆದರೂ ಭಾವನೆ ಒಂದೇ. ಅಮ್ಮ ಯಾವತ್ತಿದ್ದರೂ ಅಮ್ಮನೇ.
ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗುವುದೇ ತನ್ನ ಒಡಲಲ್ಲಿ ಮಗುವೊಂದು ಚಿಗುರೊಡೆಯುವಾಗ. ತನ್ನ ಆಸೆ ಕನಸುಗಳನ್ನು ಮಗುವಿನ ಮನಸ್ಸಿನಲ್ಲಿ ಆಕೆ ತುಂಬುತ್ತಾಳೆ. ಪ್ರತಿಯೊಂದು ನಡೆ ನುಡಿಯ ಲ್ಲೂ ಅಮ್ಮನ ಪಡಿಯಚ್ಚಿನಂತೆ ಮಗು ಬೆಳೆಯಲು ಇದೊಂದು ಕಾರಣವಿರಬಹುದು.
ಮಗು ಅಮ್ಮನ ಹೊಟ್ಟೆಯಲ್ಲಿ ಇರುವಾಗಲೇ ಆಕೆಯೊಂದಿಗೆ ಸಂವಹನ ನಡೆಸುತ್ತದೆ. ಮೌಖಿಕವಾಗಿ ಅಲ್ಲವಾದರೂ ಭಾವನಾತ್ಮಕವಾಗಿ ಆಕೆಯೊಂದಿಗೆ ಸ್ಪಂದಿಸುತ್ತದೆ. ಆಕೆಯ ಭಾವನೆಗಳ ಏರಿಳಿತಗಳು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಮ್ಮ ಗಟ್ಟಿ ಗಿತ್ತಿ ಮನಸ್ಥಿತಿಯವಳಾದಾಗ ಮಕ್ಕಳು ಅಂತಹ ಮನಸ್ಥಿತಿಯವರಾಗಿರುತ್ತಾರೆ. ಅಮ್ಮನ ಯೋಚನೆಗಳನ್ನು ಮಕ್ಕಳು ಸುಲಭವಾಗಿ ಅರ್ಥಮಾಡಿ ಕೊಳ್ಳುತ್ತವೆ.  ಗರ್ಭಾವಸ್ಥೆಯ ಸಮಯದಲ್ಲಿ ಅಮ್ಮನ ಮನಸ್ಥಿತಿಯ ನೇರ  ಪರಿಣಾಮ ಮಗುವಿನ ಬೆಳವಣಿಗೆಯ ಮೇಲಾಗುತ್ತದೆ.
ಸಾಮಾನ್ಯವಾಗಿ ಹಿರಿಯರು ಗರ್ಭಿಣಿ ಯರಿಗೆ ಯಾವಾಗಲೂ ಹೇಳುತ್ತಿರುತ್ತಾರೆ, ನಾವು ಯಾವಾಗಲೂ ಒಳ್ಳೆಯ ಆಲೋಚನೆಯನ್ನೇ ಮಾಡುತ್ತಿರಬೇಕು. ಗರ್ಭಸ್ಥೆಯಾಗಿರುವಾಗ ವಿಶೇಷವಾದ ಜಾಗರೂಕತೆಯನ್ನು ಮೈಗೂಡಿಸಿ ಕೊಳ್ಳಬೇಕು. ಸಾಥ್ವಿಕ ಆಹಾರವನ್ನು ಸೇವಿಸಬೇಕು. ಇಂಪಾದ ಸಂಗೀತ ಕೇಳಬೇಕು, ನಿಧಾನವಾಗಿ ನಡೆಯ ಬೇಕು. ಸಾಧ್ಯವಾದಷ್ಟು ಕೆಲಸ ಮಾಡ ಬೇಕು. ಸೋಮಾರಿತನ ಸಲ್ಲ. ಯಾವತ್ತೂ ಚಟುವಟಿಕೆಯಲ್ಲಿರಬೇಕು, ಹೀಗೆ ಹತ್ತು ಹಲವುಗಳಲ್ಲಿ  ಸಲಹೆಗಳಲ್ಲಿ   ತನ್ನ ತನವನ್ನು ಕಳೆದು ಕೊಂಡರೂ ಆಕೆಗೆ ಸ್ವಲ್ಪವೂ ಬೇಜಾರಿಲ್ಲ. ತನ್ನ ದೈಹಿಕ ಬದಲಾವಣೆ ಯನ್ನು ಪ್ರೀತಿಯಿಂದಲೇ ಸ್ವಾಗತಿಸುತ್ತಾ ಳೆ. ಆಕೆಗೆ  ಒಂದು ಚೂರು ಬೇಜಾರಿಲ್ಲ.
ಉದ್ಯೋಗದಲ್ಲಿರುವಾಕೆಯಾದರೂ, ಆಕೆ  ಈ ಎಲ್ಲ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾಳೆ.  ತನ್ನ ಮಾಮೂಲಿಗಿಂತ ವಿಭಿನ್ನವಾದ ಜೀವನ ಶೈಲಿಯನ್ನು ಇಷ್ಟ ಪಡುತ್ತಾಳೆ. ಹೊಸ ಪ್ರಪಂಚದತ್ತ ದಾಪುಕಾಲಿಡು ತ್ತಾಳೆ.   ದೈಹಿಕವಾಗಿ ಮಾನಸಿಕವಾಗಿ ಆ  ಒಂಬತ್ತು ತಿಂಗಳು ದೊಡ್ಡ ತ್ಯಾಗವನ್ನೆ ಮಾಡುತ್ತಾಳೆ. ಇದನ್ನೆಲ್ಲಾ ಒಂದಿನಿತು ಬೇಸರಿಸದೆ ತನ್ನ ಪುಟ್ಟ ಕಂದನ ಮುಖವನ್ನೆ ಎದುರು ನೋಡುತ್ತಾ ಖುಷಿಯಿಂದಲೇ ಕಳೆದು ಬಿಡುತ್ತಾಳೆ. ಅಲ್ಲಿ ಕಾತರ, ನಿರೀಕ್ಷೆ, ಸಂತಸ ಎಲ್ಲಾ ಇದೆ.  ಮಗುವಿನೊಂದಿಗೆ ಅಮ್ಮನ ಲೋಕವು ಬೆಳೆಯುತ್ತದೆ. ಮಗುವಿನೊಂದಿಗೆ ತಾನೂ ಬೆಳೆಯುತ್ತಾಳೆ. ನಮಗೆ ನಮ್ಮ  ಬಾಲ್ಯ ದ ನೆನಪು ಇರುವುದಿಲ್ಲ, ಮಕ್ಕಳು ನಮಗದನ್ನು ನೆನಪಿಸುತ್ತವೆ.
ಅಮ್ಮನ ಪ್ರಪಂಚ ಮಕ್ಕಳೊಂದಿಗೆ ಬೆಳೆಯುತ್ತದೆ. ಶೈಕ್ಷಣಿಕವಾಗಿ ಕಲಿತದ್ದೇಲ್ಲಾ ಮಕ್ಕಳ ವಿಧ್ಯಾಭ್ಯಾಸ ದೊಂದಿಗೆ ಅಮ್ಮಂದಿರಿಗೂ ಮರುಕಳಿಸುವ ಪ್ರಕ್ರಿಯೆ ಅರಿವಿಲ್ಲದಂತೆ ನಡೆದು ಬಿಡುತ್ತದೆ. ತಾವು ಕಲಿತ ಆಟ , ಲೆಕ್ಕ, ಬಾಯಿ ಪಾಠ ಮಗ್ಗಿಯ ಪುನರಾವರ್ತನೆಯಾಗುತ್ತವೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆಳೆಯುವ ಅವಕಾಶವನ್ನು ಅಮ್ಮಂದಿರು ಜಾಣ್ಮೆ ಯಿಂದಲೇ ಬಳಸುವುದನ್ನು ನಾವು ಕಾಣ ಬಹುದು.  ಹೊಸ ವಿಷಯಗಳನ್ನು ಮಕ್ಕಳೊಂದಿಗೆ ಮಕ್ಕಳಾಗಿ ಕಲಿಯುವ ಮನಸು ಅಮ್ಮನದು.
 ಮಕ್ಕಳು ಅಷ್ಟೇ,ಅಪ್ಪ ಅಮ್ಮ ಯಾವುದರಲ್ಲಿ ಚುರುಕಾಗಿರುತ್ತಾರೋ ಅಂತಹುವುಗಳನ್ನು ಬಹು ಬೇಗ ಕಲಿತು ಬಿಡುತ್ತಾರೆ.
ಮಕ್ಕಳ ಪ್ರತಿಯೊಂದು ಕಲಿಕೆಯಲ್ಲೂ ಉತ್ಸಾಹದಿಂದ ಪಾಲ್ಗೊಳ್ಳುವುದು ಅಮ್ಮನಿಗೆ ಇಷ್ಟದ ಕೆಲಸವೇ ಆಗಿದೆ. ಶೈಕ್ಷಣಿಕ ಸವಾಲುಗಳನ್ನು ಎದುರಿಸುವಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಅರ್ಥ ವಾಗದೇ ಇದ್ದಾಗ ಅಪ್ಪನ ಸಹಾಯವನ್ನು ಪಡೆದು  ಮುನ್ನುಗ್ಗಲು ಹೆದರುವುದಿಲ್ಲ. ಮಕ್ಕಳ ಉನ್ನತಿಗಾಗಿ ಎಷ್ಷು ಕಷ್ಟವಾದರೂ

ಅವರು ಬೆಳೆದು ದೊಡ್ಡವರಾದಾಗ ಅವರದೇ ಲೋಕದಲ್ಲಿ ಮುಳುಗಿದರೂ ಅಮ್ಮನಿಗವರೇ ಎಲ್ಲಾ. ಮಕ್ಕಳಿಗೆ ಅಮ್ಮನ ಭಾವನೆಗಳಾವುದೂ ಅರ್ಥವಾಗುವುದಿಲ್ಲ .ಅವರು ಕಿರಿಕಿರಿ ಮಾಡಿದರೂ ಆಕೆಗೆ ಅವರೇ ಸರ್ವಸ್ವ.
ಮಕ್ಕಳ ಕಾರ್ಪೊರೇಟ್ ಜಗತ್ತು ಅವಳ ಊಹೆಗೆ ಸಿಲುಕದು. ಆಕೆಯನ್ನು ಹಳ್ಳಿಗುಗ್ಗು ಎಂದು ಜರಿದರೂ ಮಕ್ಕಳ ಊಟಬಟ್ಟೆಯದೆ ಚಿಂತೆ. ಹಾಳುಮೂಳು ತಿಂದು ಹೊಟ್ಟೆ ಕೆಡಿಸಿಕೊಳ್ಳುವುದು ಬೇಡ ಎಂದು ಯಾವಾಗಲೂ  ಎಚ್ಚರಿಸಲು ಮರೆಯದಾಕೆ ಅಮ್ಮ. ಆಕೆಯ ಇಡೀ ಜೀವನ ತನ್ನ ಮಕ್ಕಳ ಸುತ್ತಲೇ ಕೇಂದ್ರಿಕೃತ ವಾಗಿರುತ್ತದೆ. ಸ್ವಂತಕ್ಕಾಗಿ ಯಾವುದೇ ಬೇಡಿಕೆಗಳಿಲ್ಲದೆ ಬಾಳುವಾಕೆ. ಅಮ್ಮನ ಈಎಲ್ಲಾ ತ್ಯಾಗ, ಭಾವನೆ ,ಬೇಸರಿಕೆಗಳ ಜಗತ್ತು ಅರ್ಥವಾಗ ಬೇಕಾದರೆ ನಾವು ಅಮ್ಮನಾಗುವಷ್ಟು ಕಾಲ ಕಾಯಬೇಕಾಯಿತು.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement
Advertisement

Be the first to comment on "ಅಮ್ಮಂದಿರ ದಿನ | ಅಮ್ಮನೆಂಬ ಹೆಮ್ಮೆ – ಅಮ್ಮನೆಂಬ ಪ್ರೀತಿ -ಅಮ್ಮನೆಂಬ ಆಸರೆ- ಅಮ್ಮನೇ ಎಲ್ಲವೂ |"

Leave a comment

Your email address will not be published.


*