ಸುಳ್ಯ:ಅಜ್ಜಾವರ ಗ್ರಾಮದ ಮಾವಿನಪಳ್ಳ ಶ್ರೀ ಮಹಾಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನಲೆಯಲ್ಲಿ
ಸೀಮೆ ದೇವರಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಆಶೀರ್ವಾದ ಪಡೆಯಲು ಅಜ್ಜಾವರ ಮತ್ತು ಮಂಡೆಕೋಲು ಗ್ರಾಮದ ಜನತೆ ಒಟ್ಟಾಗಿ ಅ.13ರಂದು ಮಾವಿನಪಳ್ಳದಿಂದ ತೊಡಿಕಾನಕ್ಕೆ ಪಾದಯಾತ್ರೆ ‘ಸೀಮೆ ದೇವರೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹಾಗು ಸುಳ್ಯ ತಾ.ಪಂ. ಅಧ್ಯಕ್ಷರೂ ಆದ ಚನಿಯ ಕಲ್ತಡ್ಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಅಜ್ಜಾವರ ಗ್ರಾಮದ ಮಾವಿನಪಳ್ಳದಲ್ಲಿ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಶೆ. 85 ರಷ್ಟು ಕೆಲಸ ಕಾರ್ಯಗಳು ಮುಗಿದಿದೆ. ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಕೆಲಸಗಳು ಪೂರ್ತಿಗೊಳ್ಳಲಿದೆ. 2020ರ ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಅದಕ್ಕಾಗಿ ಬ್ರಹ್ಮ ಕಲಶೋತ್ಸವ ಸಮಿತಿ ರಚನೆ ಆಗಿದ್ದು ಸಿದ್ಧತೆಗಳು ಆಭಗೊಂಡಿದೆ. ಅದಕ್ಕಿಂತ ಮುಂಚಿತವಾಗಿ ಸುಳ್ಯ ಸೀಮೆ ದೇವರ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಪಾದಯಾತ್ರೆ ಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಮಾವಿನಪಳ್ಳದಿಂದ ಆರಂಭಗೊಳ್ಳಲಿದೆ. ಮಧ್ಯಾಹ್ನ ದ ಮಹಾಪೂಜೆ ವೇಳೆಗೆ ತೊಡಿಕಾನಕ್ಕೆ ತಲುಪಲಿದ್ದೇವೆ. ಪೂಜೆಯ ಬಳಿಕ ನಡಿಗೆ ಮತ್ತು ಜೀರ್ಣೋದ್ಧಾರ ಕುರಿತ ಅವಲೋಕನ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ, ಪ್ರಧಾನ ಕಾರ್ಯದರ್ಶಿ ದಿವಾಕರ ನೆಹರೂ ನಗರ, ಆರ್ಥಿಕ ಸಮಿತಿಯ ಅಧ್ಯಕ್ಷ ನವೀನ್ ಕುಮಾರ್ ರೈ ಮೇನಾಲ, ಸಮಿತಿಯ ಪದಾಧಿಕಾರಿಗಳಾದ ನಾರಾಯಣ ಬಂಟ್ರಬೈಲು, ಫಕೀರ ಮೇನಾಲ ಉಪಸ್ಥಿತರಿದ್ದರು.