ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆಯನ್ನು ಆಟಿ ಅಮಾವಾಸ್ಯೆ ಎನ್ನುತ್ತಾರೆ. ಸಾಮಾನ್ಯವಾಗಿ ಭೀಮನ ಅಮಾವಾಸ್ಯೆಯೇ ಆಟಿ ಅಮಾವಾಸ್ಯೆಯಾಗಿದೆ.
ಕರಾವಳಿಯ ಹೆಚ್ಚಿನ ಭಾಗಗಳಲ್ಲಿ ಅದರಲ್ಲೂ ತುಳುನಾಡಿನಲ್ಲಿ ಆಷಾಢ ಅಮಾಸ್ಯೆಯಂದು ಮುಂಜಾನೆ ಖಾಲಿ ಹೊಟ್ಟೆಗೆ ಹಾಲೆ ಮರದಿಂದ ತೆಗೆದ ಹಾಲಿಗೆ ಬೆಳ್ಳುಳ್ಳಿ, ಕರಿಮೆಣಸು ಮತ್ತು ಓಮದ ಕಾಳನ್ನು ಸೇರಿಸಿ ಮನೆಯ ಸದಸ್ಯರೆಲ್ಲರೂ ಕೂಡ ಸೇವಿಸುವ ಪದ್ಧತಿಯಿದೆ. ಸಂಕ್ರಾಂತಿಯಂದು ಬೇವು – ಬೆಲ್ಲ ಸೇವನೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಆಷಾಢ ಅಮಾವಾಸ್ಯೆಯಂದು ಸೇವಿಸುವ ಹಾಲೆ ಮರದ ಕಷಾಯಕ್ಕೂ ಇದೆ. ಈ ಕಷಾಯವನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ವೈಜ್ಞಾನಿಕವಾಗಿ ಈ ಮರದಿಂದ ತೆಗೆಯುವ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವಿದೆ.
ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ) ದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು. ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ನಂತರ ತೆಂಗಿನ ಕಾಯಿ ತುರಿ ಹಾಕಿದ ಗಂಜಿ ಉಣ್ಣುತ್ತಾರೆ.
ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ. ಅನ್ಯ ಆಹಾರ ಸೇವನೆಗೆ ಮೂದಲು ಖಾಲಿ ಹೊಟ್ಟೆಗೆ ಸೇವಿಸುವುದು ಅತೀ ಉತ್ತಮವೆಂದು ತಿಳಿವಳಿಕೆ ಇದೆ.
ಹಿಂದಿನ ಕಾಲದಲ್ಲಿ ಆಟಿತಿಂಗಳಿನಲ್ಲಿ ವಿಪರೀತ ಮಳೆ. ಮಳೆಯಿಂದಾಗಿ ಶರೀರದಲ್ಲಿ ಕಫ ವೃದ್ಧಿಯಾಗಿ ಅಗ್ನಿ ಕುಂಠಿತವಾಗಿರುತ್ತದೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು. ಆದ್ದರಿಂದ ಈ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಬಲವಾಗಿದೆ.
ಹಾಲೆಮರ ಹಾಲಿನಲ್ಲಿ ಸಸ್ಯ ಕ್ಷಾರದಂತಹ ಔಷಧೀಯ ಗುಣಗಳಿವೆ ಎಂದು ಕಂಡು ಬಂದಿದೆ. ವೈದ್ಯಕೀಯದಲ್ಲಿ ಹೊಟ್ಟೆನೋವು, ಅತಿಸಾರ,ವಾತ, ಸುಂಧಿನೋವು, ಮಲೇರಿಯಾ, ಜ್ವರ, ಸ್ತ್ರೀರೋಗ, ಹುಣ್ಣುನಿವಾರಣೆಯಲ್ಲಿ ಬಳಕೆಯಾಗುವ ಔಷಧೀಯ ಗುಣಗಳು ಮರದ ಹಾಲು ಮತ್ತು ತೊಗಟೆಯಲ್ಲಿ ಕಂಡು ಬಂದಿವೆ.
ಹಾಲೆ ಮರವನ್ನು ಆಯುರ್ವೇದದಲ್ಲಿ ಸಪ್ತಪರ್ಣ ಎನ್ನುತ್ತಾರೆ. ಈ ಮರದ ಎಲೆಗಳಲ್ಲಿ ಏಳು ಎಲೆಗಳಿರುವ ಕಾರಣ ಸಪ್ತ ಪರ್ಣ ಎಂದು ಹೆಸರು ಬಂದಿರಬೇಕು. ಹೀಗಾಗಿ ಸಪ್ತಪರ್ಣಿ ಎಂದೂ ಕರೆಯುತ್ತಾರೆ.