* ಸ್ಪೆಷಲ್ ಕರೆಸ್ಪಾಂಡೆಂಟ್ , ಸುಳ್ಯನ್ಯೂಸ್.ಕಾಂ
——————–
ಸುಳ್ಯ: ಹಾಲಿ, ಮಾಜಿ ಸದಸ್ಯರಾಗಿದ್ದ ಎಲ್ಲರಿಗೂ ಕೋಕ್ ನೀಡಿ ಸಂಪೂರ್ಣ ಹೊಸ ಮುಖಗಳ ತಂಡವನ್ನು ಕಣಕ್ಕಿಳಿಸುವುದು. ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಹೀಗೊಂದು ಸ್ಟ್ರಟಜಿಯ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ.
ಎಲ್ಲಾ 20 ವಾರ್ಡ್ ಗಳಲ್ಲಿಯೂ ಹೊಸ ಅಭ್ಯರ್ಥಿಗಳನ್ನು ಇಳಿಸುವ ತಂತ್ರಗಾರಿಕೆ ಬಿಜೆಪಿಯದ್ದು. ಸತತ ಮೂರು ಚುನಾವಣೆಯಲ್ಲಿ ಗೆದ್ದು ಆಡಳಿತ ನಡೆಸಿದ ಕಾರಣ ಸಹಜವಾಗಿ ಎದುರಾಗಬಹುದಾದ ಆಡಳಿತ ವಿರೋಧಿ ಅಲೆಯನ್ನು ತಡೆಯಲು ಹೊಸ ಮುಖಗಳನ್ನು ಇಳಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಯಬಹುದು ಎಂಬುದು ಪಕ್ಷದ ಲೆಕ್ಕಾಚಾರ. 20 ವಾರ್ಡ್ ಗಳಲ್ಲಿಯೂ ಹೊಸ ಮುಖ ಎಂದು ಹೇಳಲಾಗುತ್ತಿದ್ದರೂ ಕೊನೆಯ ಕ್ಷಣದದಲ್ಲಿ ಕೆಲವು ಹಳೆಯ ಮುಖಗಳು ಸ್ಥಾನ ಪಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಕಾರ್ಯಕರ್ತರ ಆಯ್ಕೆ:
ಸ್ಥಳೀಯ ಸಂಸ್ಥೆಯ ಚುನಾವಣೆಗೆ ಸ್ಥಳೀಯ ಕಾರ್ಯಕರ್ತರೇ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬುದು ಪಕ್ಷದ ನಿಲುವು. ಆದುದರಿಂದ ಪ್ರತಿ ವಾರ್ಡ್ ಗಳಲ್ಲಿಯೂ ಸಭೆ ನಡೆಸಿ ಅಲ್ಲಿ ಸೂಚಿಸಲ್ಪಟ್ಟ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಮಂಡಲ ಸಮಿತಿಗೆ ಕಳಿಸಲಾಗುತ್ತದೆ. ಮಂಡಲ ಸಮಿತಿಯ ಪ್ರಮುಖರನ್ನೊಳಗೊಂಡ ಚುನಾವಣಾ ನಿರ್ವಹಣಾ ಸಮಿತಿ ಮತ್ತು ನಗರ ಶಕ್ತಿ ಕೇಂದ್ರದ ಪದಾಧಿಕಾರಿಗಳು ಸಭೆ ನಡೆಸಿ ಚರ್ಚಿಸಿ ಸೂಕ್ತ ಅಭ್ಯರ್ಥಿಯ ಆಯ್ಕೆಯನ್ನು ಘೋಷಿಸಲಾಗುವುದು. ಹೊಸ ಮುಖಗಳಿಗೆ ಆದ್ಯತೆ ನೀಡಿ ಸಮರ್ಥ ಅಭ್ಯರ್ಥಿಯ ಆಯ್ಕೆ ನಡೆಸಲಾಗುವುದು ಎಂದು ನಗರ ಬಿಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ‘ಸುಳ್ಯನ್ಯೂಸ್.ಕಾಂ‘ಗೆ ತಿಳಿಸಿದ್ದಾರೆ.
ಆಕಾಂಕ್ಷಿಗಳ.. ಸಾಲು ಸಾಲು:
ನಗರ ಪಂಚಾಯತ್ ಚುನಾವಣೆ ಗೆ ಅಭ್ಯರ್ಥಿಗಳಾಗಲು ಆಕಾಂಕ್ಷಿಗಳು ಹಲವು ಮಂದಿ ಇದ್ದಾರೆ ಎಂದು ತಿಳಿದು ಬಂದಿದೆ. ಕೆಲವು ವಾರ್ಡ್ ಗಳಲ್ಲಿ ಮೂರು ನಾಲ್ಕು ಮಂದಿ ಆಕಾಂಕ್ಷೆಗಳು ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಕೆಲವು ಸಾಮಾನ್ಯ ಮಹಿಳಾ ವಾರ್ಡ್ ಗಳಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಕಂಡು ಬಂದಿರುವುದು ಕುತೂಹಲ ಕೆರಳಿಸಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವಲ್ಲಿ ಅಭ್ಯರ್ಥಿ ಯ ಆಯ್ಕೆ ಪಕ್ಷದ ಪ್ರಮುಖರಿಗೆ ತಲೆ ನೋವು ಸೃಷ್ಠಿಸಲಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಆಡಳಿತ ವಿರೋಧಿ ಅಲೆ ತಡೆಯಲು ಹೊಸ ತಂತ್ರ : ಹೊಸ ಮುಖಗಳಿಗೆ ಬಿಜೆಪಿ ಆದ್ಯತೆ"