ಸುಳ್ಯ: ಆಧುನಿಕತೆಗೆ ಹೆಜ್ಜೆ ಇಟ್ಟ ಇಂದಿನ ದಿನಗಳಲ್ಲಿ ಆಧುನಿಕತೆಯಿಂದ ಕೂಡಿದ ವಿದ್ಯೆಯ ಜೊತೆಗೆ ಆಧುನಿಕತೆಗೆ ಸರಿಯಾಗಿ ಜ್ಞಾನಾಭಿವೃದ್ಧಿಯ ಅಗತ್ಯವಿದೆ. ಉತ್ತಮ ವಿದ್ಯೆ ಕಲಿತು, ಕಾಲೇಜಿನ ನಿಷ್ಠಾವಂತ ವಿದ್ಯಾರ್ಥಿಯಾಗಿ, ತಂದೆ ತಾಯಿಯರಿಗೆ ಒಳ್ಳೆಯ ಮಕ್ಕಳಾಗಿ, ಸಾಮಾಜಿಕ ನೆಲೆಯಲ್ಲಿ ಉತ್ತಮ ಪ್ರಜೆಗಳಾಗಿ ಹೊರಬಂದಾಗ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಮಾತನಾಡಿ, ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಇಂದು ಹೊಸ ಚಟುವಟಿಕೆಗಳ ಮೂಲಕ ಕಾಲೇಜ್ ಮತ್ತು ವಿಲೇಜ್‍ನ ನಡುವೆ ಸಂಪರ್ಕ ಸೇತುವೆ ಒಡಮೂಡಿದೆ. ಇದನ್ನು ಸದುಪಯೋಗಪಡಿಸಿಕೊಂಡು, ಪ್ರಶ್ನೆ ಕೇಳುತ್ತಾ, ಜಗ ಹುಡುಕುತ್ತಾ, ಹೋದಾಗ ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯಲ್ಲಿ ಆಯ್ಕೆಯ ಸಾರ್ಥಕತೆಯಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಜವರೇಗೌಡ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪೋಷಕರ ಪರವಾಗಿ ಅಬ್ದುಲ್ ಹಮೀದ್ ಕನಕಮಜಲು ಹಾಗೂ ವಿದ್ಯಾರ್ಥಿಗಳ ಪರವಾಗಿ ಪ್ರತೀಕ್ಷಾ ಕೆ ಬಿ ಮತ್ತು ಶ್ರೀಶ್ಯಾಂ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ ಗಿರಿಧರ ಗೌಡ ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ತನ್ಮಯಿ ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ ಕೆ. ಪೂವಪ್ಪ ಗೌಡ ವಂದಿಸಿದರು. ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.