ಸುಳ್ಯ: ದೇಶದಲ್ಲಿ ಉಂಟಾಗಿರುವ ಆರ್ಥಿಕ ಕುಸಿತದಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ. ಸುಳ್ಯ ತಾಲೂಕು ಸೇರಿ ಎಲ್ಲಿಯೂ ಕೆಲಸವಿಲ್ಲದೆ ಕಾರ್ಮಿಕರ ಕುಟುಂಬಗಳಿಗೆ ಪ್ರತಿ ದಿನದ ಅನ್ನಕ್ಕೂ ಕುತ್ತು ಬಂದಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫಡರೇಶನ್ (ಸಿಐಟಿಯು) ಪ್ರಮುಖರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಸುಳ್ಯ ತಾಲೂಕು ಅಧ್ಯಕ್ಷ ಕೆ. ಪಿ. ಜಾನಿ ಕಲ್ಲುಗುಂಡಿ, ನಿರ್ಮಾಣ ವಲಯದಲ್ಲಿ ಕೆಲಸ ಇಲ್ಲದೆ ಕಾರ್ಮಿಕರ ಬದುಕು ಅತ್ಯಂತ ಕ್ಲಿಷ್ಟಕರವಾಗಿದೆ. ಕೆಲಸ ನಂಬಿ ವಿವಿಧ ಅಗತ್ಯತೆಗಳಿಗಾಗಿ ಸಾಲ ಮಾಡಿದವರು ಮರು ಪಾವತಿ ಮಾಡಲಾಗದೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಆದುದರಿಂದ ತಾಲೂಕಿನ ಕೆಲಸವನ್ನು ಆದಷ್ಟು ರಾಜ್ಯದ ಕಾರ್ಮಿಕರಿಗೇ ನೀಡಬೇಕು, ಪ್ರತಿ ಪಂಚಾಯತಿಗಳೂ ಉದ್ಯೋಗ ಖಾತರಿ ಕೆಲಸವನ್ನು ಕಾರ್ಮಿಕರ ಮೂಲಕವೇ ಮಾಡಿಸಬೇಕು. ಇದಕ್ಕೆ ಕೇರಳ ಮಾದರಿಯಲ್ಲಿ ಕಾರ್ಮಿಕರನ್ನು ಸೇರಿಸಿ ಉದ್ಯೋಗ ಖಾತರಿಯ ತಂಡವನ್ನು ರಚಿಸಬೇಕು. ವಿವಿಧ ಸ್ವಸಹಾಯ ಸಂಘಗಳು ಸಾಲ ವಸೂಲಿಯ ಸಂದರ್ಭದಲ್ಲಿ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುಳ್ಯ ತಾಲೂಕಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ವಲಯ ಹಲವು ಸಮಯದಿಂದ ಸಂಪೂರ್ಣ ಸ್ಥಬ್ದವಾಗಿದ್ದು ಬಹುತೇಕ ಮಂದಿ ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ನೋಟ್ ಬ್ಯಾನ್, ಜಿಎಸ್ ಟಿ ಹೇರಿಕೆ ನಿರ್ಮಾಣ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಹೆಚ್ಕೆ . ನಾಗರಾಜ್, ಕಾರ್ಮಿಕ ಮುಖಂಡರಾದ ಬಿಜು ಅಗಸ್ಟಿನ್, ಪುಟ್ಟಣ್ಣ. ಕೆ, ವಿ. ಗಣೇಶ್, ವಿ. ಆರ್. ಪ್ರಸಾದ್, ಮೋನಪ್ಪ, ನಾಗರಾಜ್ ಕಲ್ಲುಮುಟ್ಲು ಉಪಸ್ಥಿತರಿದ್ದರು.