ಮಳೆ ಇಲ್ಲ.. ಮಳೆ ಇಲ್ಲ..!
ಮಳೆಯ ಅವಸ್ಥೆ ಎಂತ ಮಾರಾಯ್ರೆ….!
ಹೀಗಾದರೆ ಬರುವ ವರ್ಷ ಕುಡಿಯಲೇ ನೀರಿಲ್ಲ…!
ಮಳೆ ಕೊಯ್ಲು ಮಾಡಬೇಕು… ಜಲಮರುಪೂರಣ ಮಾಡಬೇಕು…!
ಇದಿಷ್ಟು ಈಗ ಎಲ್ಲೆಡೆ ಕೇಳುವ ಮಾತು. ಸದ್ಯ ಏನೂ ಮಾಡಲಾಗದ ಸ್ಥಿತಿ ಇದೆ. ಮಳೆ ಕೊರತೆ ಎಂದಷ್ಟೇ ಈಗ ಹೇಳಬಹುದು. ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ವಿಪರೀತವಾಗಿ ಮಳೆಯ ಕೊರತೆ ಇದೆ. ಕೊಡಗಿನಲ್ಲಿ ಅಣೆಕಟ್ಟುಗಳೂ ಭರ್ತಿಯಾಗಿಲ್ಲ. ಜಲಪಾತಗಳು ವೈಭವ ಪಡೆದುಕೊಂಡಿಲ್ಲ. ದಕ್ಷಿಣ ಕನ್ನಡದಲ್ಲಿ ಯಾವ ನದಿಗಳೂ ತುಂಬಿಹರಿಯಲು ಆರಂಭವಾಗಿಲ್ಲ. ಇಂದು ಜುಲೈ 19…!. ಅರ್ಧ ಮಳೆಗಾಲ ಮುಗಿದಿದೆ. ಆಟಿ ತಿಂಗಳು ಆರಂಭವಾಗಿದೆ. ಧೋ… ಸುರಿಯಬೇಕಾದ ಮಳೆಯೇ ಎಲ್ಲಿ ಹೋಗಿರುವೆ..!!
ಹವಾಮಾನ ಇಲಾಖೆ ನಾಳೆಯೇ ಮಳೆ ಆರಂಭವಾಗುತ್ತದೆ , ಹೈಎಲರ್ಟ್ ಎನ್ನುತ್ತದೆ, ವೆದರ್ ರಿಪೋರ್ಟ್ ತಿಳಿಸುವ ಎಲ್ಲಾ ಮಾಹಿತಿಗಳೂ ಸರಿಯಾಗಲಿಲ್ಲ, ಮೋಡಗಳು ಕಟ್ಟುತ್ತವೆ ಒಮ್ಮೆಲೇ ಜೋರಾಗಿ ಮಳೆ ಸುರಿಯುತ್ತದೆ, ಅದೇ ಮಾದರಿಯಲ್ಲಿ ಬಿಸಿಲೂ ಬರುತ್ತದೆ. ಮಳೆಯ ಕತೆ ಮುಗಿದೇ ಬಿಟ್ಟಿತು. ಈ ಬಾರಿ ವಿಪರೀತ ಮಳೆಯ ಕೊರತೆ ಕಂಡಿದೆ. ದಕ್ಷಿಣ ಕನ್ನಡ, ಮಲೆನಾಡು, ಕೊಡಗು ಪ್ರದೇಶದಲ್ಲಿ ಇಷ್ಟೊಂದು ಮಳೆ ಕೊರತೆಯಾದ್ದು ಕಡಿಮೆ.
ಈ ಬಾರಿ ಸುಳ್ಯದಲ್ಲಿ ಅದರಲ್ಲೂ ಬಾಳಿಲದಲ್ಲಿ ಪಿಜಿಎಸ್ ಎನ್ ಪ್ರಸಾದ್ ಅವರ ದಾಖಲೆಯ ಪ್ರಕಾರ, ಜುಲೈ ತಿಂಗಳಲ್ಲಿ ಪುನರ್ವಸು/ ಪುಷ್ಯ ನಕ್ಷತ್ರದ ಅವಧಿಯಲ್ಲಿ ಇಷ್ಟೂ ವರ್ಷಗಳಲ್ಲಿ ಮಳೆ ದಾಖಲಾದ ಇನ್ನೂ ಕೆಲವು ಕುತೂಹಲಕಾರಿ ಅಂಕಿ ಅಂಶಗಳು ಹೀಗಿವೆ,
ಜುಲೈ 13,14 (1976 -2019 ) ಇಷ್ಟೂ ವರ್ಷಗಳಲ್ಲಿ ಮಳೆ ದಾಖಲಾಗಿದೆ. ಗರಿಷ್ಟ 1978 ರಲ್ಲಿ ದಾಖಲಾದ 215 ಮಿ.ಮೀ. ದಿಂದ 2010 ರಲ್ಲಿನ 001 ಮಿ.ಮೀ.ನಡುವೆ ಜುಲೈ 13 ರ ಸರಾಸರಿ 46.3.ಮಿ.ಮೀ. ಕನಿಷ್ಟ 02 ಮಿ.ಮೀ.(2008), ಗರಿಷ್ಟ 138 ಮಿ.ಮೀ.(2011) ಸೇರಿದಂತೆ ಜುಲೈ 14 ರ ಸರಾಸರಿ 44.8 ಮಿ.ಮೀ.
ಪುತ್ತೂರಿನಲ್ಲಿ ಈ ವರ್ಷ 1549 ಮಿ.ಮೀ. ಮಳೆಯ ಕೊರತೆ ಇದೆ. ಈ ಸಾಲಿನ ಜನವರಿ 1ರಿಂದ ಜುಲೈ 10 ರವರೆಗೆ ಪುತ್ತೂರಿನಲ್ಲಿ 819.2 ಮಿ.ಮೀ. ಮಳೆ ದಾಖಲಾಗಿದ್ದು 2018ರಲ್ಲಿ ಇದೇ ಅವಧಿಯಲ್ಲಿ 2368.4 ಮಿ.ಮೀ. ಮಳೆಯಾಗಿತ್ತು. ಕಳೆದ 10ವರ್ಷಗಳ ಅವಧಿಯಲ್ಲಿ ಸುರಿದ ಕನಿಷ್ಟ ಮಳೆ ಇದಾಗಿದೆ.
2017ರಲ್ಲಿ ಇದೇ ಅವಧಿಯಲ್ಲಿ 1344ಮಿ.ಮೀ., 2016ರಲ್ಲಿ 1495.6ಮಿ.ಮೀ., 2015ರಲ್ಲಿ 1351.7ಮಿ.ಮೀ., 2014ರಲ್ಲಿ 1490.0ಮಿ.ಮೀ. 2013ರಲ್ಲಿ 2056.4ಮಿ.ಮೀ., 2012ರಲ್ಲಿ 1219.2ಮಿ.ಮೀ., 2011ರಲ್ಲಿ 1889.2ಮಿ.ಮೀ., 2010ರಲ್ಲಿ 1382.2ಮಿ.ಮೀ. ಮಳೆ ಪುತ್ತೂರಿನಲ್ಲಿ ದಾಖಲಾಗಿದೆ. 2018ರಲ್ಲಿ ದಾಖಲಾದ 2368.4ಮಿ.ಮೀ. ಮಳೆ ಈ 10 ವರ್ಷಗಳ ಅವಧಿಯಲ್ಲಿ ಪುತ್ತೂರಿನಲ್ಲಿ ಬಿದ್ದ ಗರಿಷ್ಠ ಮಳೆಯಾಗಿದೆ.
ಕೊಡಗಿನಲ್ಲಿ ಮಳೆ ಇಲ್ಲ : ಮಳೆಗಾಲದಲ್ಲೂ ಬೇಸಿಗೆ ಬಿಸಿಲು:
ಮುಂದಿನ ಐದು ದಿನಗಳ ಕಾಲ ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ನೀಡಿದ ಮುನ್ಸೂಚನೆಗೆ ವಿರುದ್ಧವಾದ ವಾತಾವರಣ ಕೊಡಗಿನಲ್ಲಿದೆ.
ಹವಮಾನ ಇಲಾಖೆಯ ಪ್ರಕಟಣೆಯಂತೆ ಜು.18 ರಿಂದ ಧಾರಾಕಾರ ಮಳೆ ಸುರಿಯಬೇಕಾಗಿತ್ತು. ಆದರೆ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಮಳೆಯ ನಿರೀಕ್ಷೆ ಹುಸಿಯಾಗಿದೆ. ಕಳೆದ ವರ್ಷ ಅತಿ ಮಳೆಯನ್ನು ಕಂಡಿದ್ದ ಕೊಡಗು ಈ ಬಾರಿ ಮಳೆಗಾಲದ ಮಳೆಯನ್ನೇ ಕಂಡಿಲ್ಲ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 6.53 ಮಿ.ಮೀ. ಕಳೆದ ವರ್ಷ ಇದೇ ದಿನ 36.94 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 718.12 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2236.82 ಮಿ.ಮೀ ಮಳೆಯಾಗಿತ್ತು. ಈ ಪ್ರಕಾರವಾಗಿ ಪ್ರಸ್ತುತ ವರ್ಷ ಜನವರಿಯಿಂದ ಜುಲೈ 18 ರವರೆಗೆ ಕೊಡಗಿನಲ್ಲಿ ಸುಮಾರು 1500 ಮಿ.ಮೀ ನಷ್ಟು ಮಳೆ ಕೊರತೆಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 15.80 ಮಿ.ಮೀ. ಕಳೆದ ವರ್ಷ ಇದೇ ದಿನ 45.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 910.85 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3090.31 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.87 ಮಿ.ಮೀ. ಕಳೆದ ವರ್ಷ ಇದೇ ದಿನ 28.03 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 822.22 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1873.48 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.93 ಮಿ.ಮೀ. ಕಳೆದ ವರ್ಷ ಇದೇ ದಿನ 36.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 421.28 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1746.68 ಮಿ.ಮೀ. ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ :
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2820.05 ಅಡಿಗಳು, ಕಳೆದ ವರ್ಷ ಇದೇ ದಿನ 2856.41 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 4.20 ಮಿ.ಮೀ., ಕಳೆದ ವರ್ಷ ಇದೇ ದಿನ 12.80 ಮಿ.ಮೀ. ಇಂದಿನ ನೀರಿನ ಒಳಹರಿವು 637 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 12668 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನದಿಗೆ 14883, ನಾಲೆಗೆ 450 ಕ್ಯುಸೆಕ್.
ಚಿಕ್ಲಿಹೊಳೆ ಜಲಾಶಯವು ಬರಿದು :
ಮಳೆಯಿಲ್ಲದೆ ಬಿಸಿಲಕಾವು ಏರತೊಡಗಿದ ಪರಿಣಾಮ ಚಿಕ್ಲಿಹೊಳೆ ಜಲಾಶಯವು ಸೊರಗಿದಂತಿದೆ. ಕಳೆದ ವರ್ಷ ಹಾರಂಗಿ ಜಲಾಶಯದ ಜೊತೆ ಜೊತೆಗೆ ಚಿಕ್ಲಿಹೊಳೆ ಜಲಾಶಯ ಕೂಡ ತುಂಬಿಕೊಂಡು ಬೋರ್ಗರೆಯುತ್ತಾ ಹರಿಯುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು.
ಆದರೆ ಪ್ರಸ್ತುತ ವರ್ಷ ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳು ಕಳೆದಿದ್ದರು ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿಲ್ಲ. ಪ್ರತಿದಿನ ಇಲ್ಲಿಗೆ ಆಗಮಿಸುತ್ತಿರುವ ನೂರಾರು ಪ್ರವಾಸಿಗರು ಜಲಾಶಯ ಸೊರಗಿದ ಹಿನ್ನೆಲೆ ನಿರಾಶೆಯಿಂದ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬಹುದೆನ್ನುವ ನಿರೀಕ್ಷೆ ಕೊಡಗಿನ ಜನರಲ್ಲಿ ಮಾತ್ರವಲ್ಲ ಪ್ರವಾಸಿಗರಲ್ಲೂ ಮೂಡಿದೆ.
