ಬಹುಶ: ಇಷ್ಟೊಂದು ಭಾವನಾತ್ಮಕ ಸಂದರ್ಭ ಬೇರೆ ಯಾವುದೇ ಸಂದರ್ಭದಲ್ಲಿ ಕಾಣದು. ಹೇಳುವುದಕ್ಕೆ ಅದೊಂದು ಸಣ್ಣ ಕಾರ್ಯಕ್ರಮ. ಶಾಲೆಯ ಮುಖ್ಯೋಪಾಧ್ಯಾಯರ ಬೀಳ್ಗೊಡುಗೆ ಕಾರ್ಯಕ್ರಮ. ಆದರೆ ಅಷ್ಟೂ ವರ್ಷದ ವಿದ್ಯಾರ್ಥಿಗಳ ಪಾಲಿಗೆ ಅವಿಸ್ಮರಣೀಯ ದಿನ. ಭವಿಷ್ಯದ ತುತ್ತ ತುದಿಯಲ್ಲಿರುವ ಹಾಗೂ ಸಾಧನೆಯ ಪಥದಲ್ಲಿರುವ ಎಲ್ಲರಿಗೂ ಗುರು ತೋರಿದ ದಾರಿಯ ನೋಡುವ ಕ್ಷಣ. ಅಂತಹ ಶಿಕ್ಷಕರಿಗೆ ಅದೊಂದು ದೊಡ್ಡ ಸಮ್ಮಾನ. ಒಬ್ಬ ಶಿಕ್ಷಕ ಬಯಸುವುದು ಅದನ್ನೇ ಅಲ್ಲವೇ? ಆ ಸಾರ್ಥಕ ಕ್ಷಣ ಕಂಡ ಶಿಕ್ಷಕರು ಕೆಲವೇ ಕೆಲವು. ಆ ಸಾಲಿನಲ್ಲಿ ಕಂಡವರು ಬಾಳಿಲದ ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯ ಎಂ.ಎಸ್.ಶಿವರಾಮ ಶಾಸ್ತ್ರಿ.
ಬಾಳಿಲದ ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಯಲ್ಲಿ ಜು.31 ರಂದು ಶಾಲಾ ಮುಖ್ಯೋಪಾಧ್ಯಾಯ ಎಂ.ಎಸ್.ಶಿವರಾಮ ಶಾಸ್ತ್ರಿ ಅವರ ಬೀಳ್ಕೊಡುಗೆ ಕಾರ್ಯಕ್ರಮ. ಬಾಳಿಲ ಶಾಲೆ ಎಂದರೇ ಹಾಗೆ ಅಲ್ಲಿನ ಎಲ್ಲಾ ಶಿಕ್ಷಕರೂ ಗೌರವಕ್ಕೆ ಪಾತ್ರರಾದವರೇ. ಬಿ.ವಿ.ಶಗ್ರಿತ್ತಾಯ, ಜತ್ತಪ್ಪ, ಪಿ.ಎನ್.ಭಟ್, ನಾರಾಯಣ ಭಟ್ , ಕಲಾವತಿ, ಕೃಷ್ಣ ಶಾಸ್ತ್ರಿ …… ಹೀಗೇ ಎಲ್ಲರೂ ವಿದ್ಯಾರ್ಥಿಗಳನ್ನು ತಿದ್ದಿದವರು ಮಾತ್ರವಲ್ಲ ವಿದ್ಯಾರ್ಥಿ ಬದುಕುಗೊಂದು ಅರ್ಥ ಕಲ್ಪಿಸಿದವರು. ಇಂದು ಹೊಸ ಪೀಳಿಗೆಯ ಶಿಕ್ಷಕರು ಇದ್ದಾರೆ, ಇವರೆಲ್ಲರೂ ಕೂಡಾ ಅದೇ ಮಾದರಿ ಅನುಸರಿಸುತ್ತಿರುವುದು ಗಮನಿಸಬೇಕಾದ ಅಂಶ. ಈ ಶಾಲೆಯ ಫಲಿತಾಂಶವೂ ಹಾಗೆಯೇ ಶೇ.90 ಕ್ಕಿಂತ ಮೇಲೆ. ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ 250 ಕ್ಕಿಂತ ಹೆಚ್ಚು.
ಈಗ ಅಂತಹ ಶಾಲೆಯ ಮುಖ್ಯೋಪಾಧ್ಯಾಯರು ನಿವೃತ್ತರಾಗಿದ್ದಾರೆ. ಅವರು ಎಂ.ಎಸ್.ಶಿವರಾಮ ಶಾಸ್ತ್ರಿ. ವಿದ್ಯಾರ್ಥಿಗಳ ನೆಚ್ಚಿನ ಸಂಸ್ಕೃತ ಗುರುಗಳು ಹಾಗೂ ಈಗಿನ ಮುಖ್ಯೋಪಾಧ್ಯಾಯರು. ಅವರ ಮುಂದಿನ ನಿವೃತ್ತ ಜೀವನ ಸುಖ ಸಂತೋಷ ದಿಂದ ಕೂಡಿರಲಿ ಎಂದು ವಿದ್ಯಾರ್ಥಿಗಳೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಾರೆ….
ವಿದ್ಯಾಬೋಧಿನೀ ವಿದ್ಯಾ ಸಂಸ್ಥೆ ಯ ಅದೆಷ್ಟೋ ಶ್ರೇಷ್ಠ ಗುರುಗಳಲ್ಲಿ ಇವರು ಒಬ್ಬರು. ಇವರ ವೃತ್ತಿ ಜೀವನದಲ್ಲಿ ಅದೆಷ್ಟೋ ವಿದ್ಯಾರ್ಥಿಗಳನ್ನು ಈ ದೇಶದ ಸತ್ಪ್ರಜೆಯನ್ನಾಗಿ ರೂಪಿಸಿ ಈ ದೇಶಕ್ಕೆ ನೀಡಿದ್ದಾರೆ. ಇಂದಿನ ದಿನ ಅವರ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಅಲಂಕರಿಸಿದ್ದಾರೆ ಎಂದರೆ ಅದರ ಹಿಂದೆ ಅವರ ಶ್ರಮ ಅಪಾರ. ಅವರಿಗೆ ಸಂಸ್ಕೃತ ಪಠ್ಯದ ಮೇಲಿದ್ದ ಅಪಾರವಾದ, ಆಳವಾದ ಜ್ಞಾನ ಮತ್ತು ವಿಶೇಷವಾದ ಭೋದಿಸುವ ಕೌಶಲ್ಯ ಅವರನ್ನು ಈ ಉತ್ತುಂಗಕ್ಕೆ ಏರಿಸಿದೆ.
ಅವರು ನಮಗೆ ಪಾಠ ಮಾಡುತ್ತಿದ್ದ ರೀತಿ ಈಗಲೂ ಕಣ್ಣಿನಲ್ಲಿ ಕಾಣುತ್ತದೆ ಮಾತು ಕಿವಿಯಲ್ಲಿ ಕೇಳುತ್ತದೆ. ಅದರಲ್ಲಿ ಕೂಡ ಪುರಾಣ ಮತ್ತು ಇತಿಹಾಸದ ಬಗ್ಗೆ ಇದ್ದ ಅಪಾರವಾದ ಜ್ಞಾನ ಮತ್ತು ನಮಗೆ ತರಗತಿಯಲ್ಲಿ ಹೇಳುತ್ತಿದ್ದ ರೀತಿಯಿಂದ ನನಗೆ ಅದರ ಮೇಲಿನ ಪ್ರೀತಿಯ ಹೆಚ್ಚಾಗುತ್ತಾ ಹೋಗಿ, ಅಂದಿನಿಂದ ಇಂದಿನ ವರೆಗೂ ತುಂಬಾ ಇಷ್ಟದ ವಿಷಯ ಆಗಿದೆ. ಅಂತಹ ನಮ್ಮ ನೆಚ್ಚಿನ ಗುರುಗಳಿಗೆ ಅವರ ಮುಂದಿನ ನಿವೃತ್ತಿಯ ಜೀವನ ಸುಖ ಸಂತೋಷ ದಿಂದ ಕೂಡಿರಲಿ. ನಿವೃತ್ತಿ ಬಳಿಕವೂ ವಿದ್ಯಾರ್ಥಿಗಳ ಪಾಲಿಗೆ ಬದುಕಿನ ದಾರಿ ತೋರುವ ಗುರುಗಳು ಇವರು. ಹೀಗಾಗಿ ಹೆಮ್ಮೆ, ಆದರ, ಅಭಿಮಾನ. …
ಬರಹ : # ರಘುರಾಮ ಶಂಕರತೋಟ