ಶೇಣಿ ಗೋಪಾಲಕೃಷ್ಣ ಭಟ್ಟರ ‘ರಕ್ತಬೀಜ’
(ಪ್ರಸಂಗ : ಶ್ರೀ ದೇವಿ ಮಹಾತ್ಮ್ಯೆ)
(ಶುಂಭ ಮತ್ತು ಶ್ರೀದೇವಿಯ ಯುದ್ಧದ ಸನ್ನಿವೇಶ. ದೇವಿಯನ್ನು ನೋಡಿದ ರಕ್ತಬೀಜ ಹೀಗೆ ತರ್ಕಿಸುತ್ತಾನೆ)
…. ಭಲೇ… ಭಲೇ… ಈ ದರ್ಶನ ಜೀವಾತ್ಮನಿಗೆ ಮೊದಲೇ ಆಗಬೇಕು. ನಿರಾಕಾರ ನಿರ್ಗುಣವಾದಂತಹ ‘ಪರಬ್ರಹ್ಮ’ ಕೇವಲ ನಮ್ಮ ತರ್ಕಕ್ಕೆ ವಸ್ತು. ಸಾಕಾರ ಸ್ವರೂಪವಾದಂತಹ ಈ ವಿಶ್ವವನ್ನು ಕಂಡು ಅದನ್ನು ಗುರುತಿಸಬಹುದು. ಯಾವುದಾದರೂ ಒಂದು ವಸ್ತುವನ್ನು ಕಂಡಾಗ ಆ ವಸ್ತುವನ್ನು ತಯಾರಿಸಿದಂತಹ ವ್ಯಕ್ತಿಯ ಇಚ್ಚಾ – ಕ್ರಿಯಾ – ಜ್ಞಾನವನ್ನು ಗುರುತಿಸಬಲ್ಲ ಪ್ರಾಜ್ಞನಂತೆ ನಾನು ಇವಳನ್ನು ‘ಪರಬ್ರಹ್ಮ’ ಎಂದು ಗುರುತಿಸಿದೆ.
ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು. ಪ್ರಪಂಚದಲ್ಲಿರುವ ಸಕಲ ಪುರುಷರನ್ನು ಆಕರ್ಷಿಸುವ ಮಾಯಾಮೋಹಿನಿಯಾದ ಹೆಂಡತಿಯೂ ಇವಳೇ. ಸಂಸಾರಕ್ಕೆ ಎಳೆಯುವ ಮಾಯಾರೂಪಿಣಿಯಾದ ಮಗಳೂ ಇವಳೇ. ಹಾಗಾದರೆ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ‘ಮಾಯೆ’ ನನ್ನನ್ನು ಕಾಡಿತ್ತು. ನನಗೇನಂತೆ, ನನ್ನ ಇಚ್ಛಾ-ಕ್ರಿಯಾ-ಜ್ಞಾನಶಕ್ತಿಯನ್ನು ಮುಂದಿಟ್ಟುಕೊಂಡು ಇವಳನ್ನು ಇದಿರಿಸಿ, ಶಕ್ತಿಯಿಂದ ಇವಳು ಸೋಲುವಂತ ಮಾಡಿ ಮೈಯಿಂದಲ್ಲದಿದ್ದರೂ, ಮನಸ್ಸಿನಿಂದಾದರೂ ಸೋತರೆ ಸಾಕು. ‘ಕೈಹಿಡಿ’ ಅಂತ ಕೇಳಲು ಬಂದಿದ್ದೇನೆ. ‘ಕೈಹಿಡಿ’ ಇದಕ್ಕೆ ಅಂತರಾರ್ಥ ಬೇರೆ. ಯಾಕೆ? ‘ನನ್ನ ಅತ್ತೆಯ ಮಗಳಾಗಿ ಕೈಹಿಡಿದು ನನ್ನ ಪಾಣಿಗ್ರಹಣದ ಸತಿಯಾಗಿ ಬಾ’ ಎಂದು ಸ್ಥೂಲಾರ್ಥ… ‘ಇದೋ ಈ ಸಂಸಾರದಲ್ಲಿ ನನ್ನನ್ನು ಹೆತ್ತು ಹಾಕಿದ್ದಿ. ಮುಂದೇನು ಅಂತ ದಾರಿ ಕಾಣುವುದಿಲ್ಲ. ತಾಯಿಯಾಗಿ ಕೈ ಹಿಡಿದು ಮುಂದಕ್ಕೆ ಒಯ್ಯು’ ಎಂಬುದು ಇನ್ನೊಂದು.
ನೋಡೋಣ. ಸರ್ವಜ್ಞಳಲ್ಲವೇ ಇವಳು. ಅರ್ಥವಾದೀತಲ್ಲ ಇವಳಿಗೆ…. ಒಂದೋ ಇದು ಶುಂಭಾಸುರನ ಕೊನೆ. ಅಲ್ಲದಿದ್ದರೆ ಶುಂಭಾಸುರನ ಜೀವನದ ಪ್ರಾರಂಭ….