ಸುಳ್ಯ: ಒಂದು ಕಡೆ ಸಂಪಾಜೆ ಘಾಟಿ ಸರಿ ಇಲ್ಲ, ಇನ್ನೊಂದು ಕಡೆ ಶಿರಾಡಿ ಘಾಟಿಯೂ ಸರಿ ಇಲ್ಲ. ಹಾಗಿದ್ದರೆ ಈ ಮಳೆಗಾಲ ಮಂಗಳೂರು ಸಂಪರ್ಕ ಹೇಗೆ ? ಹೀಗೊಂದು ಪ್ರಶ್ನೆ ಈಗ ಎದ್ದಿದೆ. ತಕ್ಷಣವೇ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಎಲ್ಲರ ಆಶಯ.
ಕಳೆದ ಮಳೆಗಾಲದ ಆರಂಭದಲ್ಲಿ ಶಿರಾಡಿ ಘಾಟ್ ರಸ್ತೆ ದುರಸ್ತಿಯ ಹಿನ್ನೆಲೆಯಲ್ಲಿ ಸಂಪಾಜೆ ಘಾಟಿ ಮೂಲಕ ವಾಹನಗಳು ಬೆಂಗಳೂರು ಸಂಪರ್ಕ ಮಾಡುತ್ತಿದ್ದವು. ಆದರೆ ಆಗಸ್ಟ್ ಬಳಿಕ ಪ್ರವಾಹದ ಮಾದರಿಯಲ್ಲಿ ಮಳೆ ಸುರಿದ ಕಾರಣ ಮಂಗಳೂರು ಮಡಿಕೇರಿ ರಸ್ತೆಯ ನಡುವಿನ ಸಂಪಾಜೆ ಘಾಟಿಯಲ್ಲಿ ರಸ್ತೆ ಕುಸಿತಗೊಂಡು ಸಂಚಾರವೇ ಕಷ್ಟವಾಗಿತ್ತು. ನಂತರ ಬೆಂಗಳೂರು ಸಂಪರ್ಕವೇ ಕಷ್ಟವಾಗಿತ್ತು. ಅನೇಕರು ಸುತ್ತುಬಳಸು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರು. ಕೊನೆಗೆ ಚಾರ್ಮಾಡಿ ಘಾಟಿ ಕೂಡಾ ಕುಸಿತಗೊಂಡು ಮಂಗಳೂರು -ಬೆಂಗಳೂರು ನಡುವೆ ಸಂಚಾರವೇ ಕಷ್ಟವಾಗಿತ್ತು. ಒಂದು ಹಂತದಲ್ಲಿ ರಸ್ತೆ, ರೈಲು, ವಿಮಾನ ಈ 3 ಸಂಪರ್ಕ ವ್ಯವಸ್ಥೆಯೂ ಬೆಂಗಳೂರಿಗೆ ಇಲ್ಲವಾಗಿತ್ತು.
ಬಳಿಕ ಶಿರಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ, ನಂತರ ಬಸ್ಸು ಓಡಾಟ ಆ ಬಳಿಕ ಘನ ವಾಹನ ಓಡಾಟವೂ ಆರಂಭವಾಯಿತು. ಇತ್ತ ಕಡೆ ಸಂಪಾಜೆ ಘಾಟಿಯೂ ದುರಸ್ತಿಯಾಯಿತು. ಅದಾದ ನಂತರ ಸುಗಮ ಸಂಚಾರ.
ಇನ್ನೀಗ ಮಳೆಗಾಲ ಆರಂಭಕ್ಕೆ ಒಂದು ತಿಂಗಳು ಉಳಿದಿದೆ. ಶಿರಾಡಿ ಘಾಟಿ ಕಾಮಗಾರಿ ಇನ್ನೂ ಬಾಕಿ ಇದೆ. ಇತ್ತ ಕಡೆ ಸಂಪಾಜೆ ಘಾಟಿಯೂ ಜೋರಾದ ಮಳೆ ಬಂದರೆ ಸಂಚಾರ ಸ್ಥಗಿತದ ಭೀತಿ ಇದೆ. ಇನ್ನೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲವಾದರೆ ಇನ್ಯಾವಾಗ?
ಶಿರಾಡಿ ಘಾಟ್ ಮಾರ್ಗದ ನಡುವೆ ಅತಿವೃಷ್ಠಿ ಗೆ ಉಂಟಾದ ಹಾನಿಯನ್ನು ಸರಿಪಡಿಸುವ ಕಾಮಗಾರಿ ಬಾಕಿ ಉಳಿದಿದೆ. ಕುಸಿತ ಸಂಭವಿಸಿದ ಸ್ಥಳಗಳಲ್ಲಿ ಇನ್ನು ಕಾಮಗಾರಿಗಳು ಅರೆಬರೆಯಾಗಿಯೇ ಇವೆ. ಮಳೆಗಾಲದ ಮುಂಚಿತ ಪ್ರಯಾಣಿಕರ ಸುರಕ್ಷತೆಗೆ ಹಾಸನ ಮತ್ತು ದ.ಕ ಉಭಯ ಜಿಲ್ಲೆಗಳ ಜಿಲ್ಲಾಡಳಿತ ಇನ್ನು ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಹೀಗಿದೆ ಈಗ ಶಿರಾಡಿ ಕತೆ :
ಶಿರಾಡಿ ಘಾಟ್ ರಸ್ತೆಯಲ್ಲಿ ಗುಂಡ್ಯದಿಂದ ಹೆಗ್ಗದ್ದೆ ತನಕ ಹಾಸನ ಮತ್ತು ಮಂಗಳೂರು ಎರಡು ವಿಭಾಗದ 26 ಕಿ ಮೀ ವ್ಯಾಪ್ತಿಯಲ್ಲಿ ಅಳವಡಿಸಿದ ಕಾಂಕ್ರೀಟ್ ರಸ್ತೆಯಲ್ಲಿ 12 ಕಡೆ ಭೂಕುಸಿತ ನಡೆದಿತ್ತು. ಮಾರ್ಗದುದ್ದಕ್ಕೂ ರಸ್ತೆಯ ಹೊಳೆ ಇರುವ ಬದಿಗಳಲ್ಲಿ ಬ್ರಹತ್ ಪ್ರಮಾಣದಲ್ಲಿ ಮಣ್ಣು ಕುಸಿತಗೊಂಡಿದ್ದವು. ಕುಸಿತ ನಡೆದ ಸ್ಥಳಗಳಲ್ಲಿ ತಾತ್ಕಾಲಿಕ ಮರಳಿನ ಚೀಲಗಳನ್ನು ಪೇರಿಸಿಟ್ಟು ಮಣ್ಣಿನ ಮೇಲೆ ಟಾರ್ಪಲ್ ಹಾಸಿ ಮುಚ್ಚಲಾಗಿದೆ. ಕಾಂಕ್ರೀಟ್ ಅಳವಡಿಕೆಯಾದ ಸ್ಥಳಗಳ ಮೇಲ್ಭಾಗದಲ್ಲೂ ಕೂಡ ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದೆ. ಇಲ್ಲೆಲ್ಲ ಎಚ್ಚರಿಕೆ ಫಲಕ ಅಳವಡಿಕೆಯಾಗಿದೆ. ಅವುಗಳು ಇಂದಿಗೂ ಅದೇ ರೀತಿ ಇದೆ. ಇದಿಷ್ಟು ಬಿಟ್ಟರೆ ರಸ್ತೆ ಕುಸಿತ ನಡೆದ ಅಪಾಯಕಾರಿ ಸ್ಥಳಗಳಲ್ಲಿ ಯಾವುದೇ ಶಾಶ್ವತ ವ್ಯವಸ್ಥೆಗಳು ಆಗಿಲ್ಲ.
ಒಂದು ಕಡೆ ಗುಡ್ಡಗಳು ಅಪಾಯದ ಸ್ಥಿತಿಯಲ್ಲಿವೆ. ಇನ್ನೊಂದು ಬದಿ ಕುಸಿತದಿಂದ ರಸ್ತೆ ಇಕ್ಕಟ್ಟಾಗಿದೆ. ರಸ್ತೆ ಎರಡು ಬದಿಗೆ ಸೂಕ್ತ ಚರಂಡಿ ವ್ಯವಸ್ಥೆ ಕೂಡ ಇರುವುದಿಲ್ಲ. ಅಪಾಯಕಾರಿ ಸ್ಥಿತಿಯಲ್ಲಿ ಸಂಚಾರ ಬೆಳೆಸಬೇಕಿದೆ. ಹೆದ್ದಾರಿಯಲ್ಲಿ ವಾಹನಗಳ ಒತ್ತಡ ಕೂಡ ಹೆಚ್ಚಿದೆ.
ಇಲ್ಲಿ ಸಂಪಾಜೆ ಘಾಟಿಯಲ್ಲೂ ಹಾಗೆಯೇ ಇದೆ ಪರಿಸ್ಥಿತಿ. ರಸ್ತೆ ಕುಸಿತಗೊಂಡ ಸ್ಥಳಗಳ ಮೇಲ್ಭಾಗದಲ್ಲಿ ಮತ್ತೆ ಮಣ್ಣು ಕುಸಿತವಾಗುವ ಭೀತಿ ಇದೆ. ಇಲ್ಲೂ ಕೂಡಾ ಯಾವುದೇ ಮುಂಜಾಗ್ರತಾ ಕ್ರಮವಾದಂತೆ ಕಾಣುತ್ತಿಲ್ಲ. ಹೀಗಾಗಿ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಳ್ಳದೇಹೋದರೆ ಈ ಮಳೆಗಾಲವೂ ಮಂಗಳೂರು – ಬೆಂಗಳೂರು ಸಂಪರ್ಕ ಕಡಿತಗೊಳ್ಳುವುದು ನಿಶ್ಚಿತ.