ಸುಳ್ಯ: ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ವಿವಿಧ ಸಂಘ ಸಂಸ್ಥೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಯೋಗಾಭ್ಯಾಸ, ಯೋಗ ತರಬೇತಿ, ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಸ್ನೇಹ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ, ಪರ್ಜನ್ಯ ಜಪ:
ಸುಳ್ಯ: ಸ್ನೇಹ ಶಾಲೆಯ ಬಯಲು ಸೂರ್ಯಾಲಯದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅವರು ವಿಶ್ವಯೋಗ ದಿನದ ಮಹತ್ವ ಮತ್ತು ದೈನಂದಿನ ಜೀವನದಲ್ಲಿ ಅದರ ಅಳವಡಿಕೆಯ ಅನಿವಾರ್ಯತೆ ಹಾಗೂ ಅವಶ್ಯಕತೆಯ ಬಗ್ಗೆ ತಿಳಿಸಿದರು. ಬಳಿಕ ಸಾಮೂಹಿಕ ಸೂರ್ಯನಮಸ್ಕಾರ, ಮತ್ತು ಧ್ಯಾನಗಳನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ, ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸೂರ್ಯ ನಮಸ್ಕಾರದ ಬಳಿಕ ಮಳೆಗಾಗಿ ಎಲ್ಲರೂ ಪರ್ಜನ್ಯ ಜಪದ ಮೂಲಕ ವರುಣ ದೇವರನ್ನು ಪ್ರಾರ್ಥಿಸಲಾಯಿತು.
ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಯೋಗ- ಡಾ. ಕೆ ಗಿರಿಧರ ಗೌಡ
ಸುಳ್ಯ: ನಿರಂತರವಾಗಿ ಕ್ರಿಯಾಶೀಲರಾಗಿರಲು ಆರೋಗ್ಯ ಮುಖ್ಯ. ವ್ಯಕ್ತಿಯು ದಿನನಿತ್ಯ ಯೋಗಾಭ್ಯಾಸ ನಿರತನಾದಾಗ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಮತ್ತು ಆ ಮೂಲಕ ತನ್ನ ಸ್ಮರಣ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ ಗಿರಿಧರ ಗೌಡ ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಆಧ್ಯಕ್ಕ್ಷತೆ ವಹಿಸಿ ಮಾತನಾಡಿದರು.
ಕಾಲೇಜಿನ ಎನ್ ಸಿ ಸಿ, ಎನ್ ಎಸ್ ಎಸ್ ಯುವ ರೆಡ್‍ಕ್ರಾಸ್ ಘಟಕವಹಾಗೂ ರೋವರ್ ರೇಂಜರ್ ಘಟಕದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕವನ ಹಾಗೂ ಪ್ರಜ್ಞಾಶ್ರೀ ಯೋಗ ಪ್ರಾತ್ಯಕ್ಷಿಕೆ ನೀಡಿದರು.
ಕಾಲೇಜಿನ ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ ಎಂ ಡಿ, ಎನ್ ಎಸ್ ಎಸ್ ಅಧಿಕಾರಿಗಳಾದ ಸಂಜೀವ ಕುದ್ಪಾಜೆ ಹಾಗೂ ಬಿ.ಪಾವನ, ಯುವ ರೆಡ್‍ಕ್ರಾಸ್ ಘಟಕದ ಅಧಿಕಾರಿ ಡಾ.ಅನುರಾಧಾ ಕುರುಂಜಿ ಹಾಗೂ ರೋವರ್ ರೇಂಜರ್ ಘಟಕದ ಅಧಿಕಾರಿಗಳಾದ ತಿಪ್ಪೇಸ್ವಾಮಿ ಹಾಗೂ ಹರ್ಷಕಿರಣ ಉಪಸ್ಥಿತರಿದ್ದರು. ದ್ವಿತೀಯ ಬಿ ಎಸ್ಸಿ ವಿದ್ಯಾರ್ಥಿಗಳಾದ ಸಾಯಿಶಂಕರಿ ಸ್ವಾಗತಿಸಿ, ಅನುಶ್ರೀ ವಂದಿಸಿದರು.
ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಸುಳ್ಯ: ಸುಳ್ಯದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಸಭಾಧ್ಯಕ್ಷತೆ ಶಾಲಾ ಮುಖ್ಯೋಪಾಧ್ಯಾಯಿನಿ ಬಿನೋಮ ವಹಿಸಿಕೊಂಡಿದ್ದರು. ಮುಖ್ಯ ಅತಿಥಿ ಹಾಗೂ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಯೋಗ ಗುರು ಶ್ರೀಧರ್ ಮಡಿಯಾರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೋಗದ ಮಹತ್ವದ ಬಗ್ಗೆ ತಿಳಿಸಿದರು. ಶಿಕ್ಷಕಿ ವಿದ್ಯಾಸರಸ್ವತಿ ಸ್ವಾಗತಿಸಿ, ಶಿಕ್ಷಕಿ ಪುಷ್ಪವೇಣಿ ವಂದಿಸಿದರು. ಶಿಕ್ಷಕಿ ಸವಿತಾ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ ಸಹಕರಿಸಿದರು. ಬಳಿಕ ಶ್ರೀಧರ್ ಮಡಿಯಾರು ಹಾಗೂ ಅವರ ಶಿಷ್ಯರಾದ ದಿವಾಕರ ಕೇರ್ಪಳ, ಗೌತಮ್ ಮಡಿಯಾರು ಯೋಗ ಪ್ರದರ್ಶನ ಮತ್ತು ವಿದ್ಯಾಥಿಗಳಿಗೆ ಯೋಗ ತರಬೇತಿ ನೀಡಿದರು.
ಪತಂಜಲಿ ಯೋಗ ಸಮಿತಿಯಿಂದ ಶಿಬಿರ:
ಬೆಳ್ಳಾರೆ: ಇಲ್ಲಿನ ಪತಂಜಲಿ ಯೋಗ ಸಮಿತಿಯ ವತಿಯಿಂದ ವಿಶ್ವಯೋಗ ದಿನಾಚರಣೆ ಪ್ರಯುಕ್ತ ಪ್ರಾಣಾಯಾಮ ಮತ್ತು ಯೋಗ ಶಿಬಿರ ಕಾರ್ಯಕ್ರಮ ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ನಡೆಯಿತು. 40 ಯೋಗ ಶಿಬಿರಾರ್ಥಿಗಳು ಭಾಗವಹಿಸಿದರು. ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕಿ ಸರಸ್ವತಿ ಹಾಗು ಸಮಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸತ್ಯಸಾಯಿಯಲ್ಲಿ 5ನೇ ವರ್ಷದ ವಿಶ್ವಯೋಗ ದಿನಾಚರಣೆ:
ಚೊಕ್ಕಾಡಿ: ಚೊಕ್ಕಾಡಿ ಶ್ರೀ ಭಗವಾನ್ ಸತ್ಯಸಾಯಿ ಸೇವಾ ಟ್ರಸ್ಟ್‍ನ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ 5ನೇ ವರ್ಷದ ವಿಶ್ವಯೋಗ ದಿನಾಚರಣೆ ಪ್ರಯುಕ್ತ ಪ್ರಾಣಾಯಾಮ ಹಾಗು ಯೋಗಾಸನ ಶಿಬಿರ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕ ವೃಂದ ಹಾಗು ಶಾಲ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು
ಇಡ್ಯಡ್ಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ :
ಇಡ್ಯಡ್ಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಇಡ್ಯಡ್ಕ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಗೀತಾ ಎಂ ಎ ವಹಿಸಿದ್ದರು.ವೇದಿಕೆಯಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಚಾರ್ವಾಕ ಘಟ ಸಮಿತಿ ಅಧ್ಯಕ್ಷ ದಿನೇಶ್ ಐ ಕೆ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಂದರ ಗೌಡ ಕೀಲೆ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾದ ಮನೋಹರ ಇಡ್ಯಡ್ಕ,ಧರ್ಣಪ್ಪ ಗೌಡ ಪತ್ತನೆಜಾಲ್, ಕೇಶವ ಐ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮೀನಾಕ್ಷಿ, ಪ್ರೇಮ ಉಪಸ್ಥಿತರಿದ್ದರು.ಶಾಲಾ ಮುಖ್ಯ ಗುರು ಜಯಂತ ವೈ ಯೋಗ ತರಬೇತಿ ನೀಡಿದರು.ಹಿಮಾನಿ,ಪ್ರಣಮ್ಯ,ಪಲ್ಲವಿ, ಶ್ರಾವ್ಯ ಪ್ರಾರ್ಥಿಸಿದರು.ಶಾಲಾ ಶಿಕ್ಷಕರಾದ ಚಂದ್ರಿಕಾ ಸ್ವಾಗತಿಸಿ, ಅಕ್ಷತಾ ವಂದಿಸಿದರು. ಶಾಲಾ ನಾಯಕ ಶಿವಜಿತ್ ಉಪಸ್ಥಿತರಿದ್ದರು.