ಸುಳ್ಯ:ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆಯ ಬೆಳ್ಳಾರೆ ವಲಯದ ವತಿಯಿಂದ ಐಸಿಡಿಎಸ್ ದಿನಾಚರಣೆಯನ್ನು ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಆಚರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಐವರ್ನಾಡು ಗ್ರಾಮ ಪಂಚಾಯತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಮಂಜುಶ್ರೀ ಗೆಳೆಯರ ಬಳಗದ ಸಹಯೋಗದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಧಾರಣ ಅಪೌಷ್ಟಿಕತೆಯನ್ನು ಹೊಂದಿರುವ 4 ಮಕ್ಕಳಿಗೆ ವಾರದಲ್ಲಿ ನಾಲ್ಕು ದಿನ ಉಚಿತವಾಗಿ ಮೊಟ್ಟೆಯನ್ನು ವಿತರಿಸುವ ಯೋಜನೆಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಅಂಗನವಾಡಿ ಕೇಂದ್ರಗಳಲ್ಲಿ 3-6 ವರ್ಷದ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆಯನ್ನು ಈಗಾಗಲೇ ಇಲಾಖೆಯಿಂದ ನೀಡಲಾಗುತ್ತಿದೆ. ಸಾಧಾರಣ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ನಾಲ್ಕು ದಿನ ಮೊಟ್ಟೆ ನೀಡುವ ಯೋಜನೆಯಿಂದ ಆ ಮಗು ವಾರದ 6 ದಿನವೂ ಮೊಟ್ಟೆಯನ್ನು ಸೇವಿಸಿ ಮಗುವಿನ ಪೌಷ್ಟಿಕ ತೆಯ ಮಟ್ಟವನ್ನು ಉತ್ತಮಪಡಿಸಲು ಸಹಕಾರಿಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೈಲಜಾ.ಬಿ., ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಧರ್ಮಪಾಲ ಉಪಸ್ಥಿತರಿದ್ದರು.