ಸುಳ್ಯ: 13 ವರ್ಷಗಳ ಹಿಂದೆ ಆರಂಭಗೊಂಡು ಕುಂಟುತ್ತಾ ಸಾಗಿದರೂ ಸುಳ್ಯ ನಗರದಲ್ಲಿ ಒಳಚರಂಡಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಅಸಮರ್ಪಕ ಕಾಮಗಾರಿಯಿಂದ,ಒಳಚರಂಡಿಯ ಒಳಗಡೆ ಹರಿದು ಹೋಗಬೇಕಾಗಿದ್ದ ತ್ಯಾಜ್ಯ, ಕೊಳಚೆ ನೀರು ಕಣಿವೆಯಲ್ಲಿ ಹರಿದು ಕಂದಡ್ಕ ಹೊಳೆಗೆ ಸೇರಿ ಅದರ ನೀರು ಮಲೀನಗೊಂಡು ಪಯಸ್ವಿನಿ ನದಿ ಸೇರಿ ಮತ್ತೆ ಅದೇ ನೀರನ್ನು ಸುಳ್ಯದ ತಳಭಾಗದ ಜನ ಕುಡಿಯುವಂತಾಗಿದೆ. ಇದರಿಂದ ಒಳಚರಂಡಿ ಯೋಜನೆಗೆ ಬಳಸಿದ 2.87 ಕೋಟಿ ರೂ ವ್ಯರ್ಥವಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಸುಳ್ಯ ನಗರದ ಒಳಚರಂಡಿ ಯೋಜನೆ ಕಾರ್ಯಗತ ಸಂಪೂರ್ಣಗೊಂಡಿದೆ ಎಂದು ನಗರ ಆಡಳಿತ ಹೇಳುತ್ತಿದ್ದರೂ ಕಾಮಗಾರಿಯಿಂದ ನಗರಕ್ಕೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಜಯನಗರದಲ್ಲಿರುವ ಇದರ ಶುದ್ದೀಕರಣ ಘಟಕ ಪಾಳು ಬಿದ್ದಿರುವುದು ಕಂಡು ಬಂದಿದೆ. ಇದರಿಂದ 2.87 ಕೋಟಿ ಹಣ ಎಲ್ಲಿ ಹೋಗಿದೆ ಎಂಬುದರ ಬಗ್ಗೆ ಆಡಳಿತದಲ್ಲಿ ಇದ್ದವರು ಜನತೆಗೆ ತಿಳಿಸಬೇಕಾಗಿದೆ ಎಂದರು.ಕಲ್ಚರ್ಪೆಯಲ್ಲಿ ಹಾಕಲಾಗಿದ್ದ ನಗರದ ಕಸವನ್ನು ಸಂಸ್ಕರಣೆ ಮಾಡುವ ಯೋಜನೆಗೆಂದು ಲಕ್ಷಾಂತರ ಹಣ ವ್ಯಯ ಮಾಡಲಾಗಿದ್ದರೂ ವಾಸ್ತವವಾಗಿ ಒಂದು ಕಟ್ಟಡವನ್ನು ಹೊರತುಪಡಿಸಿದರೆ ಕಸ ನಿರ್ವಹಣೆಗೆ ಕೈಗೊಂಡ ವೈಜ್ಞಾನಿಕ ಕ್ರಮ ಶೂನ್ಯವಾಗಿದೆ. ತ್ಯಾಜ್ಯದ ಮಲಿನಗೊಂಡ ನೀರು ಪಯಸ್ವಿನಿ ನದಿಗೆ ಹರಿದು ಅದನ್ನೇ ನಗರದ ಜನತೆ ಕುಡಿಯುವಂತಾಗಿದ್ದು ನಗರದ ಜನತೆಯ ದುರಂತವೇ ಸರಿ ಎಂದು ಅವರು ಹೇಳಿದರು.