ಮಡಪ್ಪಾಡಿ: ಒಂದು ಸಣ್ಣ ಸೇತುವೆ ನಿರ್ಮಾಣ. ಅಂದಾಜು ಒಂದು ವರ್ಷ ಆಯ್ತು ಮಾರಾಯ್ರೆ ಶುರು ಮಾಡಿ. ಇನ್ನೂ ಮುಗೀಲಿಲ್ಲ..!. ಯಾರೂ ಕೇಳುವವರು ಇಲ್ವಾ ? ಇಂಜಿನಿಯರ್ ಅಂತ ಇದ್ದಾರಾ ಇದಕ್ಕೆ ? ಬಿಲ್ ಪಾಸ್ ಆಗುತ್ತಾ ಹೀಗಾದರೆ ? ಜನರಿಂದ ಆಯ್ಕೆಯಾದವರೂ ಇದನ್ನು ನೋಡೋದಿಲ್ವಾ ? ಅಷ್ಟೂ ಅಲ್ಲ, ಇದೆಂತ ಪಂಚ ವಾರ್ಷಿಕ ಯೋಜನೆಯಾ ? ಹೀಗೆಲ್ಲಾ ಪ್ರಶ್ನೆ ಬರುವುದು ಮಡಪ್ಪಾಡಿಯಲ್ಲಿ.
ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಮಡಪ್ಪಾಡಿಯಿಂದ ಹಾಡಿಕಲ್ಲಿಗೆ ಹೋಗುವ ರಸ್ತೆ ಇದು. ಇದರ ಕತೆ ಹೇಳುವಾಗಲೇ ಇಲ್ಲೊಂದು ಸೇತುವೆ ಬರುತ್ತದೆ. ಮಳೆಗಾಲ ಕಷ್ಟವಾಗುತ್ತೆ ಸಾಗಲು ಅಂತ ಸೇತುವೆ ಮಂಜೂರಾಯ್ತು. ಅದು ಬಾಜಿನಡ್ಕ ತೋಡಿಗೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಅದು. ಸರಿ ಸುಮಾರು ಒಂದು ವರ್ಷವಾಗಿರಬಹುದು ನಿರ್ಮಾಣ ಮಾಡಲು ಶುರು ಮಾಡಿ. ಇಂದಿಗೂ ಕಬ್ಬಿಣ ಮೇಲೆ ಕಾಣುತ್ತಿದೆ, ಕಾಂಕ್ರೀಟ್ ಕೆಲಸ ಮುಗಿದಿಲ್ಲ. ಇನ್ನೀಗ ಮಳೆಗಾಲ ಆರಂಭವಾಗುತ್ತದೆ, ಮಳೆ ಆರಂಭವಾದ ಮೇಲೆ ಹೇಗೆ ಕೆಲಸ ಮಾಡುವುದು ಇತ್ಯಾದಿ ಪ್ರಶ್ನೆಗಳೆಲ್ಲಾ ಜನರಿಗೆ ಇದೆ. ಆದರೆ ಇದು ಅಧಿಕಾರಿಗಳಿಗೆ ಈ ಪ್ರಶ್ನೆ ಬರೋದಿಲ್ವಾ ಎಂಬುದು ಪ್ರಶ್ನೆ.
ಇಲ್ಲಿ ಅನುದಾನದ ಕೊರತೆ ಇದೆಯೇ ಅಥವಾ ಗುತ್ತಿಗೆದಾರರಿಗೆ ಬೇರೆ ಕಡೆ ಕೆಲಸ ಇದೆಯೇ ಅದೆಲ್ಲಾ ಎರಡನೆಯದು. ಒಂದು ಕೆಲಸ ಆರಂಭವಾಗುವ ಮುನ್ನವೇ ಅನುದಾನದ ವ್ಯವಸ್ಥೆಯೂ ಆಗದೇ ಇದ್ದರೆ ಎಲ್ಲಾ ಕಾಮಗಾರಿಗಳೂ ಇದೇ ಮಾದರಿಯಾಗಿ ಇದ್ದ ಹಣವೂ ಪೋಲಾಗುವುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಗಮನಹರಿಸಲೇಬೇಕು, ಏಕೆಂದರೆ ಇದು ಜನರ ದುಡ್ಡು. ಇನ್ನೊಂದು ಪ್ರಮುಖ ಅಂಶವೆಂದರೆ ಕಾಂಕ್ರೀಟ್ ಹಾಕಲು ಸಿದ್ಧವಾಗಿರುವ ಕಬ್ಬಿಣದ ರಾಡ್ ಮಳೆಗಾಲದಲ್ಲಿ ತುಕ್ಕು ಹಿಡಿದರೆ ನಂತರ ಕಾಮಗಾರಿ ಗುಣಮಟ್ಟದಿಂದ ಕೂಡಿರಬಹುದೇ ? ಕಬ್ಬಿಣದ ರಾಡ್ ಮುಂದೆ ಅಪಾಯವೂ ತರಬಲ್ಲುದಲ್ಲೇ ? ಹೀಗೆಲ್ಲಾ ಅತ್ಯಂತ ಬೇಸಿಕ್ ಪ್ರಶ್ನೆ ಜನರು ಕೇಳುತ್ತಾರೆ. ಇದೆಲ್ಲಾ ಆ ಇಲಾಖೆಗೆ ತಿಳಿಯುವುದಿಲ್ವೇ ಎಂದು ಜನ ಕೇಳುತ್ತಾರೆ.
ಮಡಪ್ಪಾಡಿಯಿಂದ ಹಾಡಿಕಲ್ಲಿಗೆ ಹೋಗುವ ಬಾಜಿನಡ್ಕ ತೋಡಿಗೆ ನಿರ್ಮಾಣವಾಗುತ್ತಿರುವ ಕೆಲಸ ಸೇತುವೆ ಬೇಗನೆ ಮುಗಿಯಬೇಕು ಎನ್ನುತ್ತಾರೆ ಸ್ಥಳೀಯರಾದ ಜಯಂತ್ ದೇವಸ್ಯ.