ಬೆಳ್ಳಾರೆ: ಕಳೆದ 3 ವರ್ಷಗಳಿಂದ ಈ ಪ್ರಯಾಣಿಕರ ಬಸ್ ತಂಗುದಾಣಕ್ಕೆ ಮರದ ಕಂಬವೇ ಆಧಾರವಾಗಿದೆ. ಶೀಘ್ರವೇ ಈ ತಂಗುದಾಣಕ್ಕೆ ಬೇಕಿದೆ ಕಾಯಕಲ್ಪ.
ಬೆಳ್ಳಾರೆ- ಸುಳ್ಯ ರಸ್ತೆಯ ಕಾವಿನಮೂಲೆಯಲ್ಲಿ ಇರುವ ಪ್ರಯಾಣಿಕರ ಬಸ್ ತಂಗುದಾಣವನ್ನು ಕಳೆದ ಮೂರು ವರ್ಷಗಳಿಂದ ಮರದ ಕಂಬವೇ ಆಧರಿಸಿ ನಿಂತಿದೆ. ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾರೆಯಿಂದ ಸುಳ್ಯಕ್ಕೆ ಸಾಗುವ ಮುಖ್ಯ ರಸ್ತೆಯ ಕೇವಲ ಒಂದು ಕಿ.ಮಿ ದೂರದಲ್ಲಿ ಈ ದುರಾವಸ್ಥೆಯ ಬಸ್‍ತಂಗುದಾಣವಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಶ್ರಯಿಸುವ ತಾಣವಿದು. ಆದರೆ ಈಗ ತಂಗುದಾಣವೇ ಭಯಕ್ಕೆ ಕಾರಣವಾಗಿದೆ.
ಮೂರು ವರ್ಷಗಳ ಹಿಂದೆ ತಂಗುದಾಣದ ಛಾವಣಿಗೆ ಅಳವಡಿಸಿದ್ದ ಮರದ ಪಕ್ಕಾಸು ಶಿಥಿಲಗೊಂಡು ಕುಸಿಯುವ ಭೀತಿಯಲ್ಲಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಛಾವಣಿಗೆ ತಾತ್ಕಾಲಿಕ ಎಂಬಂತೆ ಕಂಬವೊಂದನ್ನು ಆಧಾರವಾಗಿ ಇಟ್ಟಿದ್ದಾರೆ. ಆದರೆ ಅದೇ ಪರ್ಮನೆಂಟಾಗಿ ಈಗ ಶಿಥಿಲಾವಸ್ಥೆಗೆ ತಲಪಿದೆ. ಗಾಳಿ ಮಳೆಗೆ ತಂಗುದಾಣದ ಛಾವಣಿ ಪೂರ್ಣವಾಗಿ ಕುಸಿದು ಬೀಳುವ ಅಪಾಯವಿದ್ದು, ಮೂರು ವರ್ಷಗಳು ಸಂದರೂ ದುರಸ್ಥಿ ಆಗದೇ ಇರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳಿಯರಾದ ಪ್ರವೀಣ್ ಕಾವಿನಮೂಲೆ ಮಾತನಾಡುತ್ತಾ, ” ಮೂರು ವರ್ಷಗಳಿಂದ ದುರಸ್ಥಿಗೊಳಿಸದೆ ಇರುವುದು ಆಡಳಿತ ವರ್ಗದ ನಿರ್ಲಕ್ಷ್ಯ ತೋರಿಸುತ್ತದೆ. ಮಳೆಗಾಲದ ಮೊದಲು ದುರಸ್ಥಿಯಾಗಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬೆಳ್ಳಾರೆ ಗ್ರಾಪಂ ಪಿಡಿಒ ಧನಂಜಯ ಕೆ ಆರ್, ” ತಂಗುದಾಣವನ್ನು ಪರಿಶೀಲಿಸಿ ದುರಸ್ಥಿಯ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗುವುದು. ಬೀಳುವ ಸ್ಥಿತಿಯಲ್ಲಿದ್ದರೆ ತಕ್ಷಣ ಸರಿಪಡಿಸಲಾಗುವುದು.” ಎನ್ನುತ್ತಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕಾವಿನಮೂಲೆ ಬಸ್‍ತಂಗುದಾಣಕ್ಕೆ ಬೇಕಿದೆ ಕಾಯಕಲ್ಪ"