ಸುಳ್ಯ:ಸ್ವಚ್ಛ ಗ್ರಾಮ ಯೋಜನೆಯ ಕಲ್ಪನೆಗಳು ಒಂದು ಗ್ರಾಮ ಪಂಚಾಯತ್ಗಳಿಗೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಸ್ವಚ್ಛತೆಯ ಭಾವನೆಗಳು ಇತರ ಪಂಚಾಯತ್ ಗಳಿಗೆ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಪ್ರೇರಣೆ ಆಗಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.
ಅವರು ಜಿಲ್ಲಾ ಪಂಚಾಯತ್ ಮಂಗಳೂರು ತಾಲೂಕು ಪಂಚಾಯತ್ ಸುಳ್ಯ, ಅಮರಮೂಡ್ನೂರು ಗ್ರಾ.ಪಂ ಹಾಗೂ ಗ್ರಾಮದ ಎಲ್ಲಾ ಶಾಲೆ ಅಂಗನವಾಡಿ, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕುಕ್ಕುಜಡ್ಕ ಸಹಕಾರಿ ಸಂಘದ ಸಭಾಭವನದಲ್ಲಿ ಸಂಜೆ ನಡೆದ ತಾಲೂಕು ಮಟ್ಟದ ಸ್ವಚ್ಚ ಮೇವ ಜಯತೇ ಸ್ವಚ್ಚತಾ ಆಂದೋಲನದ ಸ್ವಚ್ಚತಾ ರಥ ಸಂಚಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ 70 ವರ್ಷ ಕಳೆದರು ಸ್ವಚ್ಛತೆಯ ಜಾಗೃತಿ ಆಗಿಲ್ಲ. ಕಳೆದ ಕೆಲವು ವರ್ಷಗಳಿಂದ ಜನರಲ್ಲಿ ಜಾಗೃತಿಗಳು ಮೂಡತೊಡಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ ಸ್ವಚ್ಛತಾ ಆಂದೋಲನಗಳು ಕೇವಲ ಅಧಿಕಾರದ ಮಟ್ಟದಲ್ಲಿ ನಡೆದರೇ ಸಾಲದು. ತಳಮಟ್ಟದಲ್ಲಿ ಸ್ವಚ್ಚತೆ ಆಂದೋಲನಗಳು ಆದರೆ ಪರಿಸರ ಸ್ವಚ್ಚವಾಗುತ್ತದೆ. ಈ ಮೂಲಕ ದೇಶದ ಅಭಿವೃದ್ದಿಗೆ ಸ್ವಚ್ಛತಾ ಆಂದೋಲನಗಳು ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.
ಹಸಿ ಕಸ ಮತ್ತು ಒಣ ಕಸ ವಿಲೇವಾರಿಗಾಗಿ ಡಸ್ಟ್ ಬಿನ್ ಗಳನ್ನು ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ವಿತರಣೆ ಮಾಡಿ, ನಾವು ಪ್ರಕೃತಿ ವಿರುದ್ಧ ಮಾಡಿದ್ದ ಸ್ವಯಂಕೃತ ಅಪರಾಧಗಳಿಂದ, ಅತಿಯಾದ ಸ್ವಾರ್ಥದಿಂದ ಇಂದು ಪ್ರಕೃತಿಯೇ ಮುನಿದಿದೆ. ಇನ್ನಾದರೂ ಪ್ರಕೃತಿ, ಪರಿಸರ ರಕ್ಷಣೆಯಲ್ಲಿ ನಾವೆಲ್ಲರು ಎಚ್ಚೆತ್ತುಕೊಳ್ಳವ ಅಗತ್ಯತೆ ಇದೆ. ಇದರ ಜತೆಯಲ್ಲಿಯೇ ಸ್ವಚ್ಛ ಗ್ರಾಮ ಯೋಜನೆಯ ಕಲ್ಪನೆಗಳು, ಕಾರ್ಯಗತವಾಗಿ, ಸ್ವಚ್ಛ ಮೇವ ಜಯತೇಯಾಗಬೇಕು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ, ಎಪಿಎಂಸಿ ಸದಸ್ಯೆ ಸುಕನ್ಯಾ ಭಟ್, ಚೊಕ್ಕಾಡಿ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಮೂಕಮಲೆ, ಅರಂತೋಡು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್, ಸ್ವಚ್ಛತಾ ರಥದ ಮೇಲ್ವಿಚಾರಕ ಕೃಷ್ಣಪ್ಪ, ಉಬರಡ್ಕ ಗ್ರಾ,ಪಂ ಪಿಡಿಒ ಸಂದೇಶ್, ಕುಕ್ಕುಜಡ್ಕ ಸೊಸೈಟಿ ಕಾರ್ಯನಿರ್ವಾಹಣಧಿಕಾರಿ ಮೋಹನ ಗೌಡ, ಅಮರಮೂಡ್ನೂರು ಪಂಚಾಯತ್ ಪಿಡಿಒ ಆಕಾಶ್, ಕಾರ್ಯದರ್ಶಿ ದಯಾನಂದ್ ಪತ್ತುಕುಂಜ, ಅಮರಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಸಹಕಾರಿ ಸಂಘದ ನಿರ್ದೇಶಕರು, ಶಾಲಾ ಮುಖ್ಯಶಿಕ್ಷಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.