ಮೊನ್ನೆ ಪೇಸ್ ಬುಕ್ ನೋಡ್ತಾ ಇದ್ದೆ….ಅದರಲ್ಲಿ ಕೆಲವು ಪೋಸ್ಟ್ ಗಳನ್ನು ನೋಡುತ್ತಾ ಮನಸ್ಸಿಗೆ ಬಹಳ ಖುಷಿ ಅನ್ನಿಸಿತು.
ವಿಷಯ ಇಷ್ಟೇ…
ಪೋಸ್ಟ್ ನಂ 1 : “ಸಿಟಿಯಾಗೆ ಆರು ಲಕ್ಷದ ಕಾರಿಟ್ಕೊಂಡು ಅದ್ರ ಮುಂದ್ನಿಂತು ಸೆಲ್ಪಿ ಹೊಡ್ದು ಪೋಸ್ ಕೊಡ್ತಾರೆ..ಹಳ್ಳಿ ಮಂದಿ ಹದಿನೈದು ಲಕ್ಷದ ಟ್ರಾಕ್ಟರ್ ಇಟ್ಕೊತಾರೆ ಅದೂ ಬರೀ ಮೇವು ತರೋಕೆ….ಸೆಲ್ಪಿನೂ ಇಲ್ಲಾ ಏನೂ ಇಲ್ಲ..”
ಪೋಸ್ಟ್ ನಂ 2 : ಒಂದು ಮದುವೆ ಆಮಂತ್ರಣ… ಅದರಲ್ಲಿ ತನ್ನ ಹೆಸರಿನ ಮುಂದೆ” ರೈತ ” ಅಂತ ಮುದ್ರಣ ಮಾಡಿಸಿದ್ದಾರೆ.
ಪೋಸ್ಟ್ ನಂ 3…ನಮ್ಮೂರ ಯುವಕ.. “ನಾನೊಬ್ಬ ಕೃಷಿಕ ಎಂದು ಹೇಳೋದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತೇನೆ.”ಎಂದು ತನ್ನ ಕೃಷಿ ಜಮೀನಿನ ಮುಂದೆ ನಿಂತು ಪೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ.
ಯಸ್ ,
ನಾನಿಲ್ಲಿ ಹೇಳೋಕೆ ಹೊರಟದ್ದು ಇಷ್ಟೇ…. ಹಳ್ಳೀ ಯುವಕರು, ಜನಗಳು, ಕೃಷಿಕರು ತಮ್ಮ ಕೃಷಿ ಉದ್ಯೋಗದ ಬಗ್ಗೆ ಹೆಮ್ಮೆ ಪಟ್ಕೊಳ್ಬೇಕಿದೆ,ಆತ್ಮ ಗೌರವ ಬೆಳೆಸಿಕೊಳ್ಳಬೇಕಿದೆ….ಅಲ್ವಾ……ನಾವೇ ನಮ್ಮತನವನ್ನು ಬೆಳೆಸಿಕೊಳ್ಳಬೇಕಿದೆ ಅಲ್ವಾ…. ಇನ್ಯಾರೋ ನಮ್ಮನ್ನು ಗೌರವಿಸಿಯಾರು ಎಂದು ಅಪೇಕ್ಷಿಸುವ ಮೊದಲು ನಮ್ಮ ಕಾಯಕದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳೋಣ.
ಹೌದು,
ಹಾಗೆ ನೋಡಿದರೆ ಕೃಷಿಕ ಒಬ್ಬಂಟಿಯೇ ಸರಿ, ಆದರೆ ಆತನೂ ಸಾವಿರಾರು ಹಸಿದ ಹೊಟ್ಟೆ ಗಳಿಗೆ ಕೈತುತ್ತು ನೀಡಬಲ್ಲ…ಉದ್ಯೋಗ ನೀಡಬಲ್ಲ,ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಬಲ್ಲ. ಸಮಸ್ತ ಸಮಾಜದಲ್ಲಿ ಯಾರಿಗೂ ಕಡಿಮೆಯಲ್ಲ ಕೃಷಿಕ.ಹೀಗಿದ್ದೂ ನಾನು ಕೃಷಿಕ ಅನ್ನೋದಕ್ಕೆ ಹಿಂಜರಿಕೆ ಏಕೇ……
ಇಲ್ಲಿ ಮುಖ್ಯವಾಗಿ ನಾವು ದೊಡ್ಡ , ಸಣ್ಣ , ಪ್ರಗತಿಪರ ಮುಂತಾಗಿ ಆಲೋಚಿಸಬೇಕಾಗಿಲ್ಲ. ಯಾವ ರೀತಿ ಪ್ರತೀ ವ್ಯಾಪಾರಿಗಳೂ,ಅಧ್ಯಾಪಕರೂ,ವೈದ್ಯರೂ ,ವಕೀಲರೂ, ಬ್ಯಾಂಕ್ ನೌಕರರೂ ಇತ್ಯಾದಿ ಇತ್ಯಾದಿಯಾಗಿ ಹಲವಾರು ತರದ ಉದ್ಯೋಗಸ್ಥರು, ಸೇರಿ ಒಂದೊಂದು ಸಮೂಹವೋ ಹಾಗೇ ಕೃಷಿಕರೆಲ್ಲ ಒಂದು ಸಮೂಹ,ಕೃಷಿಕರೂ ಸಮಾಜಕ್ಕೆ ಕೊಡುಗೆ ಕೊಡುವವರೇ. ಪಟ್ಟಣದ ಜನ ಜೀವನದಲ್ಲೂ ಏರುಪೇರು,ದೊಡ್ಡ ಸಣ್ಣಗಳೆಂಬ ಸ್ಥರಗಳಿವೆ,ಅಂತೆಯೇ ಕೃಷಿಯಲ್ಲೂ . ಇಲ್ಲಿ ವ್ಯತ್ಯಾಸ ಇರುವುದೇನೆಂದರೆ ಕೃಷಿಕ ಸಮೂಹ ತಾನು ಮಾಡುತ್ತಿರುವ ಕಸುಬನ್ನು ಫ್ರೊಫೆಷನಲ್ ಆಗಿ ಮಾಡುತ್ತಿಲ್ಲ.ಇದೇ ಮುಖ್ಯ ಕೊರತೆ…..ನಮ್ಮ ಕೆಲಸದ ಬಗ್ಗೆ ನಮಗೇ ಕೀಳರಿಮೆ.ಇತ್ತೀಚಿನ ದಿನಗಳಲ್ಲಿ ಕೃಷಿಕರು ಒಂದೆಡೆ ಸೇರಿದಾಗ ನಾವು ನಮ್ಮ ಕಸುಬಿನ ಬಗ್ಗೆ ಮಾತನಾಡದೆ,ಬೆಂಗಳೂರು, ಅಮೇರಿಕಾ ಇನ್ನೆನೋ ನಮಗೆ ಅನಗತ್ಯ ವಿಚಾರಗಳ ಬಗ್ಗೆ ಹರಟುತ್ತೆವೆಯೇ ಹೊರತು ಕೃಷಿ ಜೀವನದ ಒಳ ಹೊರಗಿನ ಬಗ್ಗೆ ಚಿಂತನೆ ಕಡಿಮೆಯಾಗಿದೆ. ಕೃಷಿಯಲ್ಲಿ ಇರುವ ಕೊರತೆಗಳ ಪಟ್ಟಿಯನ್ನೇ ದೊಡ್ಡದಾಗಿಸುತ್ತೇವೆ. ಕೆಲಸದವರಿಲ್ಲ,ನೀರಿಲ್ಲ,ವಿದ್ಯುತ್ ಇಲ್ಲ, ಬೆಲೆ ಇಲ್ಲ… ಇತ್ಯಾದಿಯಾಗಿ….ಈ ಸಮಸ್ಯೆ ಪಟ್ಟಣದಲ್ಲೂ ಸಾಮಾನ್ಯ ಅಲ್ಲವೇ….ಪಟ್ಟಣಿಗರೆಲ್ಲಾ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿಲ್ಲ ,ಅಲ್ಲೂ ವ್ಯಾಪಾರವಿಲ್ಲದ ಅಂಗಡಿಗಳಿವೆ, ಜನಗಳೇ ಬಾರದ ವಕೀಲ, ಇಂಜಿನಿಯರ್, ವೈದ್ಯರಿದ್ದಾರೆ, ಅಲ್ಲವೇ,ಹಾಗೆಯೇ ಕೃಷಿ ಬದುಕಲ್ಲೂ ಏರುಪೇರುಗಳು ಸಹಜ,ಅದಕ್ಕಾಗಿ ನಾವೇ ನಮ್ಮ ಬಗ್ಗೆ ಋಣಾತ್ಮಕ ನಿಲುವು ತಾಳಿದರೆ ಯಾರು ತಾನೇ ಕಾಪಾಡಿಯಾರೂ…ನಮ್ಮ ಕೃಷಿ ಜೀವನದ ಬಗ್ಗೆ ನಮಗೇ ಹೆಮ್ಮೆ ಇಲ್ಲದಿರುವುದರಿಂದ ಕೃಷಿ ಸಮೂಹ ಅನಾದರಕ್ಕೆ ಒಳಪಡುತ್ತದೆ.ಕೃಷಿಕರಾದ ನಾವೂ ಧನಾತ್ಮಕವಾಗಿ ಆಲೋಚಿಸಬೇಕಿದೆ…ಕೃಷಿ ಯಶೋಗಾಥೆಗಳ ಬಗ್ಗೆ ತಿಳಿದು ಸ್ವತಃ ಅನುಸರಿಸೋಣ,ಅಲ್ಲವೇ..
ಹಾಗಾದರೆ, ಫ್ರೊಪೆಷನಲ್ ಆಗಿ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದೆಂದರೆ ಹೇಗೇ….(ಯಾವ ರೀತಿ ಪಟ್ಟಣದ ವ್ಯಾಪಾರಿ,ಬ್ಯಾಂಕ್, ವೈದ್ಯ, ವಕೀಲ,ಇತ್ಯಾದಿಯಾಗಿ ಸಮಯಕ್ಕೆ ಸರಿಯಾಗಿ ತಮ್ಮ ಕ್ಷೇತ್ರದಲ್ಲಿ ಇರುತ್ತಾರೋ ಅದೇ ರೀತಿ ನಾವೂ ಇರೋಣ) ಅಂದರೆ…
1. ಯಾವುದೇ ಹಿಂಜರಿಕೆ ಇಲ್ಲದೆ ನಮ್ಮ ಕೆಲಸಗಳಲ್ಲಿ “ಸ್ವತಃ” ತೊಡಗಿಸಿಕೊಳ್ಳುವುದು.
2.ನಮ್ಮ ಕೆಲಸಗಳಿಗೆ ಸಮಯ ನಿಗದಿ ಪಡಿಸಿ….ಸರಿಯಾದ ಸಮಯಕ್ಕೆ ಮುಗಿಸಬೇಕು.
3.ಸಾಧ್ಯಾ ಸಾಧ್ಯತೆಗಳ ಬಗ್ಗೆ ಚಿಂತನೆ ಮಾಡಬೇಕು….ಬಜೆಟ್ ಇತ್ಯಾದಿ..
4.ಯಾವುದೇ ಕೆಲಸಗಳಲ್ಲಿ ಅಸಡ್ಡೆ ಮಾಡಬಾರದು.ಯಾರೇ ಆಗಲಿ ಕೆಲಸ ನಾಳೆಗಿಟ್ಟವ ಕೆಟ್ಟ.
ಸರಿ,ಇರಲಿ….ಒಂದು ದಿನ ರೈತ ಬತ್ತ ಬೆಳೆಯದಿದ್ದರೆ ಹಾಲು ಪೂರೈಸದಿದ್ದರೆ,ತರಕಾರಿ ಬೆಳೆಯದಿದ್ದರೆ, ಏನಾದೀತೂ….? ಅಲೋಚಿಸಲೇ ಸಾಧ್ಯವಿಲ್ಲ ಅಲ್ಲವೇ….
ಸಮಾಜಶಾಸ್ತ್ರ ಪಠ್ಯದಲ್ಲಿ ..” ಸಮಾಜವೆಂದರೆ ಒಬ್ಬರಿಗೊಬ್ಬರು ಪೂರಕವಾಗಿ ಹೆಣೆದುಕೊಂಡ ಸಾಮಾಜಿಕ ಸಂಬಂಧಗಳ ಬಲೆ”ಎಂದು ಓದಿದ ನೆನಪು….ಅಂತೆಯೇ ಕೃಷಿಕನೂ ಸಮಾಜದಿಂದ ಹೊರತಾಗಿಲ್ಲ…ಅಲ್ಲವೇ…ಆದ್ದರಿಂದ ನಮ್ಮ ಕೆಲಸಗಳನ್ನು ನಾವು ಪ್ರೀತಿಯಿಂದ ಬದ್ದತೆಯಿಂದ ಮಾಡಿದಾಗ ಖಂಡಿತಾ ಗೌರವ ಬಂದೇ ಬರುತ್ತದೆ. ಈ ನಿಟ್ಟಿನಲ್ಲಿ ಮೇಲೆ ನಾನು ಹೇಳಿದ ಪೋಸ್ಟ್ ಗಳು ಆಶಾದಾಯಕವಾಗಿದೆ ಅನಿಸೋದಿಲ್ಲವೇ…ಎಷ್ಟೋ ಯುವಕರು ಪೇಟೆ ಜೀವನದ ಕ್ಷಣಿಕ ಥಳಕಿನ ,ಕೃತ್ರಿಮ ಬಣ್ಣದ ದೀಪಗಳ ಆಕರ್ಷಣೆಯನ್ನು ಬಿಟ್ಟು ತಮ್ಮೂರಿಗೆ ಬಂದು ವೈಜ್ಞಾನಿಕ ಕೃಷಿಪದ್ದತಿ ಅನುಸರಿಸಿ ಯಶಸ್ಸು ಗಳಿಸಿಲ್ಲವೇ .ಜಂಜಾಟದ,ಜನದಟ್ಟಣೆಯ, ಮಾಲಿನ್ಯದ ಕೂಪಗಳಾಗುತ್ತಿರುವ ಪಟ್ಟಣಗಳಿಂದ ನಮ್ಮೂರ ಹಳ್ಳಿಗಳೇ ಮೇಲಲ್ಲವೇ……..ಹಿರಿಯರು ಸಾರಿ ಸಾರಿ ಹೇಳಿದ…ದೂರದ ಬೆಟ್ಟ ನುಣ್ಣಗೆ…..ಎಂಬ ಮಾತನ್ನು ಅಲೋಚಿಸಬೇಕಿದೆಯಲ್ಲವೇ…