ಮಂಗಳೂರು: ಕೇಂದ್ರ ಸರಕಾರವು ಇತ್ತೀಚೆಗೆ ತಂದಿದ್ದ, ಬ್ಯಾಂಕ್ ಖಾತೆಗಳಿಂದ ಹಿಂಪಡೆಯುವ ರೂ.1 ಕೋಟಿ ಮೇಲ್ಪಟ್ಟ ಹಣದ ಮೇಲಿನ 2% ಮೂಲತೆರಿಗೆ ಕಡಿತ (ಟಿ.ಡಿ.ಎಸ್.) ನಿಯಮವನ್ನು, ನೂತನವಾಗಿ ಹೊರಡಿಸಿರುವ ಸುತ್ತೋಲೆಯ ಅನುಸಾರ ಸೆ.1 ರಿಂದ ಅನ್ವಯವಾಗುವಂತೆ, ಸಡಿಲಗೊಳಿಸಿ ಆದೇಶ ಹೊರಡಿಸಿದೆ. ಕೃಷಿಕರ ಹಣಕಾಸು ಸಮಸ್ಯೆಗಳನ್ನು ಮನಗಂಡು ಕೇಂದ್ರ ಸರಕಾರವು ಈ ಆದೇಶವನ್ನು ಹೊರಡಿಸಿದ್ದು, ಎ.ಪಿ.ಎಮ್.ಸಿ. ಸದಸ್ಯತ್ವ ಹೊಂದಿ ಕಾರ್ಯಾಚರಿಸುವ ಎಲ್ಲಾ ವ್ಯಾಪಾರಿಗಳು ಮತ್ತು ಕೃಷಿ ಉತ್ಪನ್ನಗಳ ಮಾರಾಟ ಸಂಸ್ಥೆಗಳಿಗೆ ಈ ವಿನಾಯಿತಿ ಅನ್ವಯಿಸುತ್ತದೆ. ಈ ಮೂಲಕ ಸಂಸ್ಥೆಗಳ ಮೇಲಿನ ಟಿ.ಡಿ.ಎಸ್ ಭಾರವನ್ನು ಇಳಿಸಿ ಕೃಷಿಕ ಸಮುದಾಯದ ಸಂಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸರಕಾರದ ಈ ಕ್ರಮಕ್ಕೆ ಕೃಷಿಕ ಸಮುದಾಯದ ಪರವಾಗಿ ಕ್ಯಾಂಪ್ಕೊ ಸಂಸ್ಥೆಯು ಅಭಿನಂದನೆಯನ್ನು ಸಲ್ಲಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಈ ಹಿಂದೆ, 2% ಮೂಲತೆರಿಗೆ ನಿಯಮವನ್ನುಜಾರಿಗೆ ತಂದಿದ್ದ ಸಂದರ್ಭದಲ್ಲಿ, ಸಂಸ್ಥೆಯ ವತಿಯಿಂದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆರಾಜ್ಯ ಸಚಿವರಾದ ಅನುರಾಗ್ ಠಾಕೂರ್ ಅವರಿಗೆ, ಈ ನಿಯಮದಿಂದ ಕೃಷಿಕರಿಗೆ ತಲೆದೋರಬಹುದಾದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ನಿಯಮದ ಸಡಿಲಿಕೆಗಾಗಿ ಮನವಿ ಮಾಡಲಾಗಿತ್ತು. ಇದೀಗ, ಮನವಿಯನ್ನು ಪುರಸ್ಕರಿಸಿ ನಿಯಮದಲ್ಲಿ ಸಡಿಲಿಕೆತಂದಿರುವುದು ಕೃಷಿಕ ಸಮುದಾಯದಲ್ಲಿ ಸಂತಸವನ್ನುಂಟುಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.