ಕೃಷಿ ಪಂಡಿತರ ಮನೆ ಸುತ್ತ ಮನಮೋಹಕ ಹಸಿರ ರಾಶಿ

May 11, 2019
9:00 AM

ಸುಳ್ಯ: ಮನೆಯ ಸುತ್ತಲೂ ಮನಮೋಹಕ ಹಸಿರ ರಾಶಿಯನ್ನು ಹೊದಿಸಿ ಮನೆಯಂಗಳವನ್ನೇ ನಂದನವನವಾಗಿಸಿದ ಕೃಷಿಕರೋರ್ವರು ಮನೆಯ ಪರಿಸರವನ್ನು ಸೊಬಗಿನ ತಾಣವನ್ನಾಗಿಸಿದ್ದಾರೆ.

Advertisement

ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಕೃಷಿಕ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕುರಿಯಾಜೆ ತಿರುಮಲೇಶ್ವರ ಭಟ್ ತಮ್ಮ ಮನೆಯಲ್ಲಿಯೇ ವೃಂದಾವನವನ್ನು ಸೃಷ್ಠಿಸಿದ್ದಾರೆ. ಇವರ ಮನೆಯ ಗೇಟ್‍ನ ಸಮೀಪ ಬರುತ್ತಿದ್ದಂತೆಯೇ ಹಾಸಲಾದ ಹಸಿರು ಹುಲ್ಲಿನ ಹೊದಿಕ ಸ್ವಾಗತಿಸುತ್ತದೆ. ಮನೆಯಂಗಳಕ್ಕೆ ಪ್ರವೇಶಿಸಿದರೆ ಯಾವುದೋ ಸುಂದರ ಪಾರ್ಕ್‍ನ ಒಳಗೆ ಹೊಕ್ಕಂತೆ ಅನುಭವವಾಗುತ್ತದೆ. ಭಿನ್ನ ರೀತಿಯಲ್ಲಿ ಕೃಷಿ ಮಾಡಿ ಕೃಷಿ ಪಂಡಿತ ಪ್ರಶಸ್ತಿ ಪಡೆದ ಇವರು ಮನೆಯ ಸುತ್ತಲೂ ತಮ್ಮ ಹಸಿರ ಪ್ರೇಮವನ್ನು ಪ್ರದರ್ಶಿಸಿ ಮನೆಯನ್ನು ಆಕರ್ಷಣೆಯ ತಾಣವಾಗಿಸಿದ್ದಾರೆ.

 


ವಿವಿಧ ರೀತಿಯ ಅಲಂಕಾರಿಕ ಗಿಡಗಳು, ತಾವರೆಕೊಳ, ಕಾವೇರಿ ದೇವಿಯ ಮೂರ್ತಿ, ವಿವಿಧ ರೀತಿಯ ಮೂರ್ತಿಗಳು, ಆಕರ್ಷಕ ವಿನ್ಯಾಸದಲ್ಲಿ ರೂಪಿಸಿದ ವಿವಿಧ ತಳಿಯ ಅಲಂಕಾರಿಕ ಗಿಡಗಳು, ಕ್ಯಾಕ್ಟಸ್(ಕಳ್ಳಿ ಗಿಡಗಳು) ಇವರ ಹೂದೋಟವನ್ನು ಸುಂದರವಾಗಿಸಿದೆ. ಎಲ್ಲಿ ಹೋದರೂ ಒಂದು ಗಿಡದೊಂದಿಗೆ ಹಿಂತಿರುಗುವ ತಿರುಮಲೇಶ್ವರ ಭಟ್ಟರು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದ ಭಗೀರಥ ಪ್ರಯತ್ನದ ಮೂಲಕ ಮನೆಯಲ್ಲಿ ನಂದನವನವನ್ನು ರೂಪಿಸಿದ್ದಾರೆ. ಕೃಷಿಕರಾದರೂ ಕಲಾವಿದನ ಮನಸ್ಸನ್ನು ಹೊಂದಿರುವ ಭಟ್ಟರು ತನ್ನ ಮನದ ಕಲ್ಪನೆಗನುಸಾರವಾಗಿ ಪ್ರಕೃತಿಯನ್ನೇ ಸುಂದರವಾಗಿ ಚಿತ್ರಿಸಿದ್ದಾರೆ.
ಆಕರ್ಷಕ ತಾವರೆ ಕೊಳ, ಅದರಲ್ಲಿ ಅರಳಿ ನಿಂತಿರುವ ತಾವರೆಗಳು, ಆಶೀರ್ವಾದ ನೀಡುವ ತಾಯಿ ಕಾವೇರಿ, ಸುತ್ತಲೂ, ನವಿಲು, ಗಿಳಿ, ಕೊಕ್ಕರೆ, ಬಾತುಕೊಳಿ, ಆಮೆ, ಮೊಲ, ಜಿಂಕೆ, ಮೀನುಗಳು, ಮೀನು ಹಿಡಿಯುವವರು ಹೀಗೆ ಜೀವಂತಿಕೆ ಮತ್ತು ಲವಲವಿಕೆ ನಲಿದಾಡುವಂತೆ ಭಾಸವಾಗುವ ಹಲವು ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಹಸಿರು ಹುಲ್ಲಿನ ನುಣ್ಣನೆಯ ಹೊದಿಕೆಯ ಮಧ್ಯೆ ಕಲ್ಲುಗಳನ್ನು ಹಾಸಿ ಸುಂದರಗೊಳಿಸಿದ್ದಾರೆ.ಸ್ಟೆಪ್ಪರ್ ಗಿಡಗಳು, ಬೋನ್ಸಾಯಿ ಗಿಡಗಳು, ಗೋಳ್ಡನ್ ಸೈಪ್ರಸ್, ತೂಜಾ, ಲಂಡನ್ ಪೈನ್ ಹೀಗೆ ವಿವಿಧ ತಳಿಯ ಅಲಂಕಾರಿಕ ಗಿಡಗಳು ತಿರುಮಲೇಶ್ವರ ಭಟ್ಟರ ಹೂದೋಟವನ್ನು ಅಲಂಕರಿಸಿದೆ. ಜೊತೆಗೆ ವಿವಿಧ ಜಾತಿಯ ಹೂವಿನ ಗಿಡಗಳೂ ಇವೆ. ಕೇರಳ ಮತ್ತು ರಾಜ್ಯದ ವಿವಿಧ ಕಡೆಗಳಿಂದ ತಿರುಮಲೇಶ್ವರ ಭಟ್ ಅಲಂಕಾರಿಕ ಗಿಡಗಳನ್ನು ತಂದು ತನ್ನ ಹೋದೋಟವನ್ನು ಆಕರ್ಷಕವಾಗಿರಿಸಿದ್ದಾರೆ.

ಕ್ಯಾಕ್ಟಸ್ ಮೋಹ- ಕಲ್ಲುಗಳ ಆಗರ:

ತಿರುಮಲೇಶ್ವರ ಭಟ್ಟರ ಕ್ಯಾಕ್ಟಸ್ ಪ್ರೇಮವೂ ವಿಶೇಷವಾದುದು. ಸುಮಾರು 350 ಕ್ಕೂ ಹೆಚ್ಚು ಕ್ಯಾಕ್ಟಸ್(ಕಳ್ಳಿ)ಗಿಡಗಳನ್ನು ಬೆಳೆದು ಗಮನ ಸೆಳೆದಿದ್ದಾರೆ. ಕಳ್ಳಿ ಗಿಡಗಳೆಂದರೆ ಇವರಿಗೆ ಅಚ್ಚುಮೆಚ್ಚು. ಇದರ ಸಂಗ್ರಹಕ್ಕಾಗಿ ಅವರು ಸಾಹಸವನ್ನೇ ಮೆರೆದಿದ್ದಾರೆ. ಸುಂದರವಾದ ಹೂದಾನಿಗಳಲ್ಲಿ, ಕುಂಡಗಳಲ್ಲಿ ಅವುಗಳನ್ನು ಬೆಳೆಸಿದ್ದಾರೆ. ಕ್ಯಾಕ್ಟಸ್ ಬೆಳೆಸಲು ವಿಶೇಷ ಶ್ರಮವನ್ನೇ ವಹಿಸಬೇಕಾಗಿದೆ. ಮಳೆಯ ನೀರು ತಾಗದಂತೆ ತಾರಸಿಯನ್ನೂ ಮಾಡಬೇಕಾಗುತ್ತದೆ. ಕ್ಯಾಕ್ಟಸ್‍ಗಳು ಅನೇಕ ವರ್ಷಗಳ ಕಾಲ ಉಳಿದು ಸುಂದರವಾಗಿ ಕಾಣುತ್ತದೆ. ಮನೆಯ ಸುತ್ತಲೂ, ವರಾಂಡಾ, ತಾರಸಿಯ ಮೇಲೆ, ದಾರಿಯ ಇಕ್ಕೆಲಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಕ್ಯಾಕ್ಟಸ್ ಸೌಂದರ್ಯವೇ ರಾರಾಜಿಸುತ್ತದೆ. ಕೇರಳ, ಬೆಂಗಳೂರುಗಳಿಂದ ವಿವಿಧ ಜಾತಿಯ ಕ್ಯಾಕ್ಟಸ್‍ಗಳನ್ನು ತರುತ್ತಾರೆ. ಮನಮೋಹಕ ಕಲ್ಲುಗಳ ಸಂಗ್ರಹ ಇವರ ಮತ್ತೊಂದು ವೈಶಿಷ್ಟ್ಯ. ಅದರಲ್ಲೂ ನೀರಿನಲ್ಲಿ ತೇಲುವ ಕಲ್ಲುಗಳು, ಬಿಳಿ ಕಲ್ಲುಗಳು ಗಮನ ಸೆಳೆಯುತ್ತದೆ. ನೇಪಾಳ, ಡಿಂಡಿಗಲ್, ಅಜಂತಾ, ಕೇರಳ ಗಳಿಂದ ಕಲ್ಲುಗಳನ್ನು ತಂದಿದ್ದಾರೆ. ಸ್ಥಳೀಯವಾಗಿ ಹೊಳೆಗಳಿಂದಲೂ ಸುಂದರವಾದ ಕಲ್ಲುಗಳನ್ನು ಹೆಕ್ಕಿ ತಂದು ಸಂಗ್ರಹಿಸಿಟ್ಟಿದ್ದಾರೆ.

 

ಕೃಷಿ ಪಂಡಿತ:
ತನ್ನ ವೈವಿಧ್ಯಮಯ ಕೃಷಿ ಮತ್ತು ಪರಿಸರ ಕಾಳಜಿಯಿಂದ ಜನಮನ್ನಣೆ ಗಳಿಸಿರುವ ತಿರುಮಲೇಶ್ವರ ಭಟ್ಟರಿಗೆ ಇವರ ಸಮಗ್ರ ಕೃಷಿ ಪದ್ದತಿಗೆ 2007 ರಲ್ಲಿ ರಾಜ್ಯ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತನ್ನ ಮನೆ ಮತ್ತು ಪರಿಸರದಂತೆ ತನ್ನ ತೋಟ ಮತ್ತು ಸ್ಥಳವನ್ನೂ ಸ್ವಚ್ಛ ಮತ್ತು ಆಕರ್ಷಕವಾಗಿರಿಸಿದ ತಿರುಮಲೇಶ್ವರ ಭಟ್ಟರ ಕೃಷಿ ಮತ್ತು ಪರಿಸರ ಸುಂದರ ಕಾವ್ಯದದಂತೆ ಆಕರ್ಷಕವಾಗಿದೆ. ಸ್ವಚ್ಛತೆಗೆ, ಸೌಂದರ್ಯಕ್ಕೆ ಮಾದರಿಯನ್ನು ಒದಗಿಸಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ
ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾವು ಮಾರಾಟ | ಅಂಚೆ ಇಲಾಖೆಯಿಂದ 6 ವರ್ಷಗಳಿಂದ ಯಶಸ್ವಿ | ದೆಹಲಿಯವರೆಗೂ ಮಾವಿನಹಣ್ಣು ರವಾನೆ |
April 23, 2025
11:24 AM
by: ದ ರೂರಲ್ ಮಿರರ್.ಕಾಂ
ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ
April 22, 2025
9:35 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror