ಎರ್ನಾಕುಲಂ : ಕಳೆದ ವರ್ಷ ಕೇರಳದಲ್ಲಿ ತೀವ್ರವಾಗಿ ಬಾಧಿಸಿದ್ದ ನಿಫಾ ವೈರಸ್ ಈ ಬಾರಿ ಮತ್ತೆ ಕಾಡಿದೆ. ಹೀಗಾಗಿ ಈಗ ಇಡೀ ಕೇರಳದಲ್ಲಿ ಆರೋಗ್ಯ ಇಲಾಖೆ ಹೈಎಲರ್ಟ್ ಆಗಿದ್ದು ಮುಂಜಾಗ್ರತಾ ಕ್ರಮಗಳನ್ನು ಘೋಷಿಸಿದೆ.
ಕೇರಳದಲ್ಲಿ ಮತ್ತೆ ನಿಫಾ ಭಯ ಆರಂಭ ಆಗಿದ್ದು ಎನಾ೯ಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕನಲ್ಲಿ ನಿಫಾ ವೈರಸ್ ಸಂಶಯಗೊಂಡಿದೆ. ಹೀಗಾಗಿ ಪುಣೆ ವೈರಾಲಜಿ ವಿಭಾಗಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ವರದಿ ಬಂದ ಬಳಿಕವೇ ಖಚಿತಗೊಳ್ಳಲಿದೆ.
ಎರ್ನಾಕುಲಂ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಜ್ವರದ ಬಾಧೆ ಕಾಣಿಸಿದ್ದು ಇದೀಗ ನಿಫಾ ವೈರಸ್ ಸಂದೇಹದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಯುವಕನಿಗೆ ಎನಾ೯ಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತೀವ್ರನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಯ ನಿಕಟ ವರ್ತಿಗಳ ಹಾಗೂ ಸುಮಾರು 80 ವಿದ್ಯಾರ್ಥಿಗಳ ಕಡೆಗೂ ನಿಗಾ ಇರಿಸಲಾಗಿದೆ. ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಯಾವುದೇ ಆತಂಕ ಬೇಡವೆಂದು ಆರೋಗ್ಯ ಇಲಾಖೆ ಹೇಳಿದೆ.
ಈ ವೈರಸ್ ಬಾವಲಿ ಅಥವಾ ಹಂದಿಯ ಮೂಲಕ ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳು ತಿಂದ ವಸ್ತುಗಳು, ಹಣ್ಣುಗಳ ಮೂಲಕ ಬೇಗಬೆ ನಿಫಾ ಹರಡುತ್ತದೆ.
ನಿಫಾ ವೈರಸ್ ಬಾಧಿಸಿದ ವ್ಯಕ್ತಿಗಳಿಗೆ ಜ್ವರ, ತಲೆನೋವು, ತಲೆತಿರುಗುವುದು, ಸ್ಮೃತಿ ತಪ್ಪುವುದು , ಕೆಮ್ಮು , ಹೊಟ್ಟೆನೋವು, ವಾಂತಿ , ದೃಷ್ಟಿ ಮಂದವಾಗುವುದು ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸುತ್ತದೆ. ಜ್ವರ ಬಂದ 15 ದಿನಗಳ ನಂತರ ಇದೆಲ್ಲಾ ಲಕ್ಷಣ ಕಾಣಿಸುತ್ತದೆ. ಕೊನೆಗೆ ಕೋಮಾ ಸ್ಥಿತಿಗೂ ಹೋಗಬಹುದಾಗಿದೆ.
ಬಾವಲಿಗಳು ತಿಂದ ಹಣ್ಣು ತಿನ್ನುವುದು ಸೇರಿದಂತೆ ಹಣ್ಣುಗಳನ್ನು ಈಗ ತಿನ್ನುವಾಗ ಕೊಂಚ ಎಚ್ಚರಿಕೆ ವಹಿಸುವುದು ಮೊದಲ ಮುಂಜಾಗ್ರತೆಯಾಗಿದೆ.