ಸುಳ್ಯ: ಸುಳ್ಯ ನಗರ ಪಂಚಾಯತ್ ಮುಂಭಾಗದ ಕಟ್ಟಡದಲ್ಲಿ ತುಂಬಿಡಲಾಗಿರುವ ಕಸದಿಂದ ಒಂದು ಲೋಡನ್ನು ಕೇರ್ಪಳದ ಹಿಂದೂ ರುದ್ರಭೂಮಿಯಲ್ಲಿ ತಂದು ಸುರಿದಿರುವುದು ವಿವಾದಕ್ಕೆ ಕಾರಣವಾಗಿದೆ.
ಕೇರ್ಪಳದ ಹಿಂದೂ ರುದ್ರಭೂಮಿಯ ಸಮೀಪ ದೊಡ್ಡ ಹೊಂಡ ತೋಡಲಾಗಿದ್ದು ಆ ಹೊಂಡದಲ್ಲಿ ಒಂದು ಲೋಡ್ ಕಸವನ್ನು ತಂದು ಸುರಿಯಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಮಶಾನದ ಬಳಿ ಹೊಂಡ ತೋಡಿ ಕಸ ಹಾಕುವುದನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯತ್ ಸದಸ್ಯ ಸುಧಾಕರ, ಸುನಿಲ್ಕುಮಾರ್ ಕೇರ್ಪಳ, ಕೇಶವ ಪಾರೆಪ್ಪಾಡಿ, ಲಿಂಗಪ್ಪ ಗೌಡ, ಕರುಂಬಯ್ಯ, ನವೀನ್, ಧರ್ಮಪ್ರಕಾಶ್ ಮತ್ತಿತರರು ಸ್ಥಳಕ್ಕೆ ಆಗಮಿಸಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿ ಹಾಕಿರುವ ಕಸವನ್ನು ಕೂಡಲೇ ಹಿಂದಕ್ಕೆ ಕೊಂಡೊಯ್ಯುವಂತೆ ಆಗ್ರಹಿಸಿದ್ದಾರೆ. ಹಿಂದೂ ರುದ್ರಭೂಮಿಯ ಸಮೀಪ ತ್ಯಾಜ್ಯ ಸುರಿದರೆ ದೊಡ್ಡ ಸಮಸ್ಯೆ ಸೃಷ್ಠಿಯಾಗಲಿದೆ. ಅಲ್ಲದೆ ಸಮೀಪದಲ್ಲಿಯೇ ಪಯಸ್ವಿನಿ ನದಿ ಹರಿಯುತ್ತಿದ್ದು ನೀರು ಮಲಿನಗೊಳ್ಳುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಜಯನಗರದ ಹಿಂದೂ ರುದ್ರಭೂಮಿಯ ಬಳಿಯಲ್ಲಿ ಕಸ ಹಾಕಲಾಗಿತ್ತು. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಕಾರಣ ಕಸವನ್ನು ಹಿಂದಕ್ಕೆ ತರಲಾಗಿತ್ತು. ಸುಳ್ಯ ನಗರ ಪಂಚಾಯಿತಿಯ ಮುಂಭಾಗದ ಮತ್ತು ಹಿಂಭಾಗದ ಕಟ್ಟಡದಲ್ಲಿ ಕಸ ತುಂಬಿಸಿಟ್ಟ ಕಾರಣ ಸಮಸ್ಯೆ ಸೃಷ್ಠಿಸಿತ್ತು. ಆದುದರಿಂದ ಇದನ್ನು ತೆರವು ಮಾಡಲು ಕ್ರಮ ಆರಂಭಿಸಲಾಗಿತ್ತು. ಆದರೆ ಸುಮಾರು 20 ಲೋಡ್ ಕಸ ಸಾಗಾಟ ಮಾಡಿದ ನಂತರ ಕಾರ್ಯಚರಣೆ ಸ್ಥಗಿತಗೊಂಡಿದೆ.
ಮನೆ ಮನೆ ಕಸ ಸಂಗ್ರಹ ಸ್ಥಗಿತ: ಸುಳ್ಯ ನಗರದ ಮನೆ ಮನೆಗಳಿಂದ ಕಸ ಸಂಗ್ರಹಿಸಿರುವುದು ಎರಡು ವಾರಗಳಿಂದ ಸ್ಥಗಿತಗೊಂಡಿದೆ. ಕಸ ವಿಲೇವಾರಿಗೆ ಸ್ಥಳವಿಲ್ಲ ಎಂದು ಕಸ ಸಂಗ್ರಹಿಸುವುದೇ ಸ್ಥಗಿತವಾಗಿದೆ. ಇದರಿಂದ ಮನೆ ಮನೆಗಳಲ್ಲಿ ಕಸ ಕೊಳೆಯುತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.