ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಶಾಂತವಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಹರಿವು ತಗ್ಗಿದೆ. ಮುಂದಿನ 5 ದಿನಗಳವರೆಗೆ ಜಿಲ್ಲೆಯಾದ್ಯಂತ ಸಾಮಾನ್ಯ ಮಳೆಯಾಗಲಿದೆ ಮತ್ತು ಒಳನಾಡು ಪ್ರದೇಶಗಳ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದ ಮತ್ತು ಕೆಲವು ಪ್ರದೇಶಗಳಲ್ಲಿ ಆದ ಭೂಕುಸಿತದಿಂದ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರದಿಂದಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಮತ್ತೊಂದೆಡೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಮತ್ತು ಕೆಲವು ಶಾಲೆಗಳಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆದಿರುವುದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಆ.13 ಮತ್ತು 14ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ರಸ್ತೆಗಳು ಬಂದ್ :
ಜಿಲ್ಲೆಯಲ್ಲಿ ಉಂಟಾದ ಪ್ರವಾಹ- ಭೂಕುಸಿತದಿಂದಾಗಿ ಬಂದ್ ಆಗಿದ್ದ ಕೆಲವು ರಸ್ತೆಗಳು ಸೋಮವಾರದಿಂದ ಸಂಚಾರಕ್ಕೆ ಮುಕ್ತವಾಗಿವೆಯಾದರೂ ಮತ್ತೆ ಕೆಲವು ರಸ್ತೆಗಳು ಇನ್ನೂ ಬಂದ್ ಆಗಿವೆ.
ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯ ಬೇತ್ರಿ ಸೇತುವೆಗೆ ಪ್ರವಾಹದ ಸಂದರ್ಭ ಮರ ಬಡಿದ ಪರಿಣಾಮ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದಾಗಿ ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಸ್ ಸೇರಿದಂತೆ ಇತರ ವಾಹನಗಳು ಮಡಿಕೇರಿ-ಹಾಕತ್ತೂರು-ಮೂರ್ನಾಡು-ಕೊಂಡಂಗೇರಿ-ಹಾಲುಗುಂದ ಮಾರ್ಗವಾಗಿ ವೀರಾಜಪೇಟೆಗೆ ಸಂಚರಿಸಬಹುದಾಗಿದೆ.
ಸಿದ್ದಾಪುರ-ಕರಡಿಗೋಡು ರಸ್ತೆಯೂ ಸಂಚಾರಕ್ಕೆ ಮುಕ್ತವಾಗಿಲ್ಲ. ಸಿದ್ದಾಪುರದಿಂದ ಕರಡಿಗೋಡುವಿಗೆ ತೆರಳುವವರು ಮೈಸೂರು ರಸ್ತೆ, ಆರೆಂಜ್ ಕೌಂಟಿ ಮಾರ್ಗವಾಗಿ ಕರಡಿಗೋಡುವಿಗೆ ತೆರಳಬಹುದಾಗಿದೆ.
ಮೂರ್ನಾಡುವಿನಿಂದ ನಾಪೋಕ್ಲುವಿಗೆ ತೆರಳುವವರು ಹೊದ್ದೂರು, ಬಲಮುರಿ, ಪಾರಾಣೆ ಮೂಲಕ ನಾಪೋಕ್ಲುವಿಗೆ ಸಂಚರಿಸಬಹುದಾಗಿದ್ದು, ಸಿದ್ದಾಪರ-ಕೊಂಡಂಗೇರಿ ಮಾರ್ಗವಾಗಿ ತೆರಳಬೇಕಾದವರು ಒಂಟಿಯಂಗಡಿ, ದೇವಣಗೇರಿ ಹಾಲುಗುಂದ ಮಾರ್ಗವಾಗಿ ಕೊಂಡಂಗೇರಿಗೆ ಸಂಚರಿಸಬಹುದಾಗಿದೆ. ಗಾಳಿಬೀಡು-ಪಾಟಿ-ಕಾಲೂರು ಮಾರ್ಗವೂ ಬಂದ್ ಆಗಿರುವುದರಿಂದ ಕಾಲೂರಿಗೆ ತೆರಳುವವರು ಕೆ.ನಿಡುಗಣೆ, ಹೆಬ್ಬೆಟ್ಟಗೇರಿ-ದೇವಸ್ತೂರು ಮಾರ್ಗವಾಗಿ ಕಾಲೂರಿಗೆ ಸಂಚರಿಸಬಹುದಾಗಿದೆ.
ಮಡಿಕೇರಿ-ವೀರಾಜಪೇಟೆ-ಮಾಕುಟ್ಟಕ್ಕೆ ತೆರಳುವವರು ಮಡಿಕೇರಿ-ಹಾಕತ್ತೂರು- ಮೂರ್ನಾಡು- ಕೊಂಡಂಗೇರಿ-ಹಾಲುಗುಂದ-ವೀರಾಜಪೇಟೆ-ಗೋಣಿಕೊಪ್ಪ, ಪೊನ್ನಂಪೇಟೆ ಕುಟ್ಟ ಮಾರ್ಗವಾಗಿ ಕೇರಳದ ಮೂಲಕ ಮಾಕುಟ್ಟ ತಲುಪಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.