ಕೊಟ್ಟಾಯಂ: ಇದೊಂದು ಆಘಾತಕಾರಿ ಚಿಕಿತ್ಸೆ. ಮಹಿಳೆಯೊಬ್ಬರಿಗೆ ಕ್ಯಾನ್ಸರ್ ಇದೆ ಎಂದು ಚಿಕಿತ್ಸೆ ನೀಡಿದ ಬಳಿಕ ಯಾವುದೇ ಕ್ಯಾನ್ಸರ್ ಅಂಶ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ. ಅದಾಗಲೇ ಕಿಮೋಥೆರಪಿ ಚಿಕಿತ್ಸೆ ನಡೆದಿತ್ತು. ಇದೀಗ ಮಹಿಳೆ ಸಂಕಷ್ಟ ಎದುರಿಸುತ್ತಿದ್ದಾರೆ.
ಕೊಟ್ಟಾಯಂನ 38 ವರ್ಷದ ರಜನಿ ಎಂಬ ಮಹಿಳೆಯ ಸ್ತನದಲ್ಲಿ ಗಂಟು ಕಾಣಿಸಿಕೊಂಡಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ ಕ್ಯಾನ್ಸರ್ ಇದೆ ಎಂಬ ವರದಿ ಬಂದಿದೆ. ಈ ವರದಿ ಆಧಾರದ ಮೇಲೆ ಸರಕಾರಿ ಆಸ್ಪತ್ರೆ ವೈದ್ಯರು ಕೀಮೊಥೆರಪಿ ಮಾಡಿದ್ದರಂತೆ. ಮಹಿಳೆಗೆ ಕ್ಯಾನ್ಸರ್ ಇಲ್ಲದಿದ್ದರೂ ವೈದ್ಯರು ಕಿಮೋಥೆರಪಿ ನೀಡಿದ್ದು ಈಗ ಬೆಳಕಿಗೆ ಬಂದಿದೆ. ಚಿಕಿತ್ಸೆಗೆಂದು ಮಹಿಳೆ ಕೊಟ್ಟಾಯಂನ ಸರಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು ಅಲ್ಲಿ ಖಾಸಗಿ ಲ್ಯಾಬ್ ವರದಿ ಆಧರಿಸಿ ಕಿಮೋಥೆರಪಿ ಚಿಕಿತ್ಸೆಯನ್ನೂ ನೀಡಿದ್ದಾರೆ. ಎರಡು ವಾರಗಳ ಕಾಲ ಚಿಕಿತ್ಸೆ ನಡೆದಿದೆ. ನಂತರ ಸರಕಾರಿ ಆಸ್ಪತ್ರೆ ಲ್ಯಾಬ್ ನಲ್ಲಿ ಮಹಿಳೆಗೆ ಕ್ಯಾನ್ಸರ್ ಇಲ್ಲವೆಂದು ವರದಿ ನೀಡಲಾಗಿದೆ. ಹೀಗಾಗಿ ಮಹಿಳೆ ಮತ್ತೆರಡು ಕಡೆ ಪರೀಕ್ಷೆ ನಡೆಸಿದ್ದಾಳೆ. ಅಲ್ಲಿಯೂ ಕ್ಯಾನ್ಸರ್ ಇಲ್ಲವೆಂಬ ವರದಿ ಬಂದಿದೆ. ಈ ಬಗ್ಗೆ ಮಹಿಳೆ ದೂರು ನೀಡಿದ್ದಾಳೆ. ಕೀಮೊಥೆರಪಿ ನಂತರ ಮಹಿಳೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಕುರಿತು ಕೇರಳ ಆರೋಗ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ.
ಇತ್ತೀಚೆಗೆ ಕ್ಯಾನ್ಸರ್ ಬಗ್ಗೆ ವಿಪರೀತ ಚರ್ಚೆ ನಡೆಯುತ್ತಿದೆ. ಅದರ ಚಿಕಿತ್ಸೆ ಬಗ್ಗೆ ಎರಡು ಪಟ್ಟು ಹೆಚ್ಚು ಚರ್ಚೆ ನಡೆಯುತ್ತಿದೆ. ವಿಪರೀತ ಖರ್ಚಾಗುವ ಕ್ಯಾನ್ಸರ್ ಚಿಕಿತ್ಸೆಗೆ ಸರಕಾರದಿಂದ ಸಾಕಷ್ಟು ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಿದ್ದರೂ ರೋಗಿಗಳು ತಕ್ಷಣದ ಚಿಕಿತ್ಸೆಗೆ ಒಳಪಡುವಂತೆ ಮಾಡುವ ಕೆಲವು ದಂಧೆಗಳು ನಡೆಯುತ್ತಿರುವ ಬಗ್ಗೆ ಆರೋಪಗಳು ಇವೆ. ಹೀಗಾಗಿ ಸರಿಯಾದ ಚಿಕಿತ್ಸೆ ಹಾಗೂ ಪರೀಕ್ಷೆಗಳು ಅಗತ್ಯವಾಗಿದೆ ಎಂಬುದಕ್ಕೆ ಕೇರಳದ ಈ ಘಟನೆ ಸಾಕ್ಷಿಯಾಗಿದೆ.