ಸಂಪಾಜೆ: “ದೇವರೆಲ್ಲಿದ್ದಾನೆ ಅನ್ನುವ ಪ್ರಶ್ನೆ ಬಂದಾಗ ನಾವೆಲ್ಲ ಸುಲಭದಲ್ಲಿ ದೇವಸ್ಥಾನದ ಗರ್ಭಗುಡಿಯ ಕಡೆಗೆ ಬೊಟ್ಟು ಮಾಡಿ ತೋರಿಸುತ್ತೇವೆ. ಆದರೆ ದೇವರು ಕೇವಲ ಗರ್ಭಗುಡಿಯಲ್ಲಿ ಕುಳಿತಿಲ್ಲ, ಆತ ನಮ್ಮೊಳಗೆ ಶಕ್ತಿ ರೂಪದಲ್ಲಿ ತುಂಬಿಕೊಂಡಿದ್ದಾನೆ. ಗರ್ಭಗುಡಿಯ ಭಗವಂತನನ್ನು ನಮ್ಮೆದೆಯಲ್ಲೂ ಕಂಡುಕೊಳ್ಳಬೇಕು, ನಮ್ಮೆದೆಯಲ್ಲಿರುವ ಭಗವಂತನನ್ನು ಸಕಲ ಜೀವರಾಶಿಗಳಲ್ಲಿ, ಚರಾಚರ ವಸ್ತುಗಳಲ್ಲೂ ಕಾಣುವಂತಹ ಮಟ್ಟಕ್ಕೆ ನಾವು ಬೆಳೆಯಬೇಕು. ಆಗ ಮಾತ್ರವೇ ಸತ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಆಗಲೇ ಭಗವಂತನ ಸಾಕ್ಷಾತ್ಕಾರ ಸಾಧ್ಯ” ಎಂದು ಸಿರಿಗನ್ನಡ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷರಾದ ಉದಯಭಾಸ್ಕರ್ ಸುಳ್ಯ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶ್ರೀದೇವತಾರಾಧನಾ ಸಮಿತಿ ಸಂಪಾಜೆ ಇದರ ವತಿಯಿಂದ ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ 25 ನೇ ವರ್ಷದ ಗೌರೀ ಗಣೇಶೋತ್ಸವದ ವೇದಿಕೆಯಲ್ಲಿ ಧಾರ್ಮಿಕ ಉಪನ್ಯಾಸ ನಡೆಸಿಕೊಟ್ಟ ಅವರು, “ಗಣೇಶನನ್ನು ಪ್ರತಿಷ್ಠಾಪಿಸಲ್ಪಟ್ಟ ವೇದಿಕೆಯಲ್ಲಿ ಸಾತ್ವಿಕ ಚಿಂತನೆಗಳು ನಡೆಯಬೇಕು, ಭಗವಂತನ ನಾಮಸ್ಮರಣೆ ನಡೆಯಬೇಕು, ಅದಿಲ್ಲದೇ ಅನ್ಯ ಚಿಂತನೆಯಲ್ಲಿ ಮುಳುಗಿದರೆ ಗಣೇಶನ ಕೃಪೆಯ ಬದಲಿಗೆ ಅವಕೃಪೆಯಾಗುವ ಸಾಧ್ಯತೆಗಳೇ ಹೆಚ್ಚು. ಊರಿನಲ್ಲೊಂದು ಹೊಸದಾದ ಭಜನಾ ತಂಡ ತಲೆಯೆತ್ತಲ್ಪಟ್ಟಿದೆ ಅಂದರೆ ಆ ಊರಿನ ಸಂಸ್ಕಾರ ಕೇಂದ್ರಗಳು ಜಾಗೃತಗೊಳ್ಳುತ್ತಿವೆ ಎಂದರ್ಥ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಎನ್.ಎಸ್, ದೇವತಾರಾಧನಾ ಸಮಿತಿಯ ಗೌರವಾಧ್ಯಕ್ಷರಾದ ಬಿ.ಆರ್.ಶಿವರಾಮ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ ಚಿದ್ಕಾರು, ಮಡಿಕೇರಿ ಎ.ಪಿ.ಎಂ.ಸಿ ಸದಸ್ಯರಾದ ದೇವಪ್ಪ ಕೆ.ಕೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಇದರ ಒಕ್ಕೂಟ ಅಧ್ಯಕ್ಷೆಯಾದ ಶ್ರೀಮತಿ ವಾಣಿ ಜಗದೀಶ್ ಕೆದಂಬಾಡಿ, ಓ.ಆರ್. ಮಾಯಿಲಪ್ಪ, ಬಿ.ಆರ್.ಸುಂದರ ಮತ್ತಿತರ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.