ಸುಳ್ಯ: ಗಾಂಧಿ ಚಿಂತನ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಬೆಳ್ಳಾರೆಯಿಂದ ಸುಳ್ಯದವರೆಗೆ ಅ. 2ರಂದು ನಡೆಯಲಿರುವ ಗಾಂಧಿ ನಡಿಗೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಗಾಂಧಿ ಚಿಂತನ ಮಾಹಿತಿ ಕಾರ್ಯಾಗಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ಸಭಾಭವನದಲ್ಲಿ ನಡೆಯಿತು.
ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಡಾ. ಚಲಪತಿ ಆರ್, ಮೈಸೂರಿನ ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಡಳಿತ ಮುಖ್ಯಸ್ಥ ಡಾ. ಎಂ. ಸಿ. ಮನೋಹರ್, ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಡಾ. ಸುಂದರ್ ಕೇನಾಜೆ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ, ಸರಳತೆ, ಸಹಕಾರಿ ತತ್ವ, ಸ್ವಾವಲಂಬನೆ, ಧರ್ಮದರ್ಶಿತ್ವ, ವಿಕೇಂದ್ರೀಕರಣ, ಅಧಿಕಾರ, ಆಧ್ಯಾತ್ಮ ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.
ಉದ್ಘಾಟನೆ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ ಹಾಗು ಪತ್ರಕರ್ತ ಡಾ.ಯು. ಪಿ. ಶಿವಾನಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಡಾ. ಹರಪ್ರಸಾದ್ ತುದಿಯಡ್ಕ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಗಾಂಧಿ ಕುರಿತ ಓದು ಮತ್ತು ಅಧ್ಯಯನ ವ್ಯಾಪಕವಾಗಬೇಕು. ದೇಶದ ಚಿಂತನೆ ಹಚ್ಚುವ ನಾಯಕರು ಮಹಾತ್ಮರಾಗುತ್ತಾರೆ ಎನ್ನುವುದಕ್ಕೆ ಗಾಂಧೀಜಿಯೇ ಉತ್ತಮ ಉದಾಹರಣೆ ಎಂದು ಹೇಳಿದರು.
ಡಾ.ಯು. ಪಿ. ಶಿವಾನಂದ ಮಾತನಾಡಿ ಕತ್ತಲಿನಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ಎನ್ನುವ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸಿದ ಮತ್ತು ಅದರಂತೆ ಬದುಕಿದ ಗಾಂಧೀಜಿಯವರ ಚಿಂತನೆ ಸಾರ್ವಕಾಲಿಕ ಪ್ರಸ್ತುತತೆ ಇರುವಂತದ್ದು ಎಂದು ಅಭಿಪ್ರಾಯಪಟ್ಟರು.
ಗಾಂಧಿ ಚಿಂತನಾ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ.ಎಂ.ಸಿ ಮನೋಹರ್, ಡಾ. ಛಲಪತಿ ಆರ್, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ್ ಪೆರಾಜೆ, ಗಾಂಧಿನಡಿಗೆ ಕಾರ್ಯಕ್ರಮದ ಸಂಚಾಲಕರಾದ ಡಾ. ಸುಂದರ್ ಕೇನಾಜೆ, ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.