ಪುತ್ತೂರು: ಕೇಂದ್ರ ಸರಕಾರದ ಪರಿಶಿಷ್ಠ ಜಾತಿ ಉಪಯೋಜನೆಯಡಿಯಲ್ಲಿ ಕೊಡಮಾಡುವ ಸವಲತ್ತುಗಳನ್ನು ಪುತ್ತೂರಿನ ಮೊಟ್ಟೆತ್ತಡ್ಕದ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಫಲಾನುಭವಿಗಳಿಗೆ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರವರು ವಿತರಿಸಿದರು.
ಈ ಸಂದರ್ಭ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪರಿಶಿಷ್ಟ ಜಾತಿಯವರು ಸಮಾಜದಲ್ಲಿ ಆತ್ಮಗೌರವದಿಂದ ಬಾಳಲು ಕೇಂದ್ರ ಸರ್ಕಾರ ಸಾಕಷ್ಟು ನೆರವನ್ನು ಕೊಡುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಅವರು ಆಯ್ದ ರೈತರಿಗೆ ತೋಟಗಳಿಗೆ ಔಷಧಿ ಸಿಂಪಡಣಾ ಯಂತ್ರಗಳನ್ನು ಮತ್ತು ಮರವೇರುವ ಅಲ್ಯುಮಿನಿಯಂನ ಏಣಿಗಳನ್ನು ವಿತರಿಸಿದರು.
ಅತಿಥಿಗಳನ್ನು ಹಾಗೂ ಫಲಾನುಭವಿಗಳನ್ನು ಸ್ವಾಗತಿಸಿದ ಸಂಸ್ಥೆಯ ನಿರ್ದೇಶಕ ಡಾ. ಯಂ. ಗಂಗಾಧರ ನಾಯಕ್ ಸಂಸ್ಥೆಯಲ್ಲಿ ಕಳೆದ ಕೆಲವು ವರ್ಷದಿಂದ ನಡೆಯುತ್ತಿರುವ ಈ ಉಪಯೋಜನೆಗಳ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಮುಂದಿನ ವರ್ಷದಲ್ಲಿ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನಾಂಗದವರಿಗೆ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿಯಲ್ಲಿ ಬಹಳಷ್ಟು ಧನ ಸಹಾಯ ಕೇಂದ್ರದಿಂದ ಬಂದಿದ್ದು ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆಯೆಂದರು. ಗೇರು ಅಥವಾ ಇತರ ಕೃಷಿ ತೋಟಗಳ ನಿರ್ಮಾಣ, ನಿರ್ವಹಣೆ, ಬೇಕಾದ ಸಲಕರಣೆಗಳು, ಯಂತ್ರ ಉಪಕರಣಗಳು, ಕೋಳಿ, ಆಡು ಸಾಕಾಣಿಕೆ, ಹೈನುಗಾರಿಕೆ, ಜೇನು ಸಾಕಾಣೆ, ವೃತ್ತಿ ತರಬೇತಿ, ಟೈಲರಿಂಗ್ ಮುಂತಾದ ಕಸುಬು ಮಾಡುವವರಿಗೆ ಈ ಯೋಜನೆಗಳು ಜೀವನವನ್ನು ಸುಧಾರಿಸುವಲ್ಲಿ ಹೆಚ್ಚು ಸಹಾಯವಾಗಲಿದೆಯೆಂದರು.
ಕಾರ್ಯಕ್ರಮವನ್ನು ಡಾ. ಈ. ಈರದಾಸಪ್ಪ ನಿರೂಪಿಸಿದರು.