ಮಡಿಕೇರಿ :ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನಲ್ಲಿ ನಡೆಯುವ ನಾಡ ಉತ್ಸವ ದಸರಾ ಆಚರಣೆಗೆ 30 ಲಕ್ಷ ರೂ. ಅನುದಾನವನ್ನು ಒದಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದ ನಿಯೋಗ ಬುಧವಾರ ಬೆಂಗಳೂರು ಡಾಲರ್ಸ್ ಕಾಲೋನಿಯಲ್ಲಿರುವ ಮನೆಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಗೋಣಿಕೊಪ್ಪಲು ದಸರಾ ಉತ್ಸವದ ಸಾಂಸ್ಕೃತಿಕ ಹಿನ್ನೆಲೆ, ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟರಲ್ಲದೆ, ಲಿಖಿತ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ವರ್ಷ ಕಳೆದ ಸಾಲಿಗಿಂತ 10 ಲಕ್ಷದಷ್ಟು ಹೆಚ್ಚಿನ ಅನುದಾನವನ್ನು ಸರ್ಕಾರ ಒದಗಿಸುತ್ತಿರುವ ಬಗ್ಗೆ ನಿಯೋಗ ಸಂತಸ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿಗಳ ಭೇಟಿಯ ಸಂದರ್ಭ ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ.ಹರೀಶ್, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಉಪಸ್ಥಿತರಿದ್ದರು.