ಸುಳ್ಯ: ಗ್ರಾಮಗಳಲ್ಲಿ ಜನರು ನೂರಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಧಿಕಾರಿಗಳು ಗ್ರಾಮಗಳಿಗೆ ತೆರಳಿ, ಸಾಧ್ಯವಾದರೆ ಗ್ರಾಮಗಳಲ್ಲಿ ಒಂದು ದಿನ ವಾಸ್ತವ್ಯ ಮಾಡಿ. ಜನರ ಜ್ವಲಂತ ಸಮಸ್ಯೆಗಳನ್ನು ಅರಿತು ಅದರ ಪರಿಹಾರಕ್ಕೆ ಪ್ರಯತ್ನಿಸಿ. ಹೀಗೊಂದು ಮನವಿಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ತಹಶೀಲ್ದಾರ್ ರಿಗೆ ಸಲ್ಲಿಸಲಾಗಿದೆ.
ಸುಳ್ಯ ತಾಲೂಕಿನ ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಪ್ರತಿ ಗ್ರಾಮ ಗ್ರಾಮಗಳಿಗೆ ತೆರಳಿ ವಾಸ್ತವ್ಯ ಮಾಡಿ ಅಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಬೇಕು ಮತ್ತು ಇಲಾಖೆಗಳ ವಿವಿಧ ಸೌಲಭ್ಯದ ಬಗ್ಗೆ ಜನರಿಗೆ ತಿಳಿಸಬೇಕು. ತಹಸೀಲ್ದಾರ್ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ ಹೊಸ ಒಂದು ಪ್ರಯತ್ನ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರಿಗೆ ನೀಡಿದ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಎಂ. ವೆಂಕಪ್ಪ ಗೌಡ , ಧೀರಾ ಕ್ರಾಸ್ತಾ , ಮಾಜಿ ಸದಸ್ಯರಾದ ಕೆ.ಎಂ.ಮುಸ್ತಾಫಾ , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ , ಆನಂದ ಕೆಂಬಾರೆ , ಇಬ್ರಾಹಿಂ ಶಿಲ್ಪಾ , ಲಕ್ಷ್ಮಣ ಶೆಣೈ ಉಪಸ್ಥಿತರಿದ್ದರು.