ಗುತ್ತಿಗಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮ ಮಟ್ಟದಲ್ಲಿ ಬಡವರ ಬಂಧುವಾಗಿದೆ.ಜನರ ಜೀವನದಲ್ಲಿ ಆರ್ಥಿಕವಾಗಿ ಮೇಲ್ಮಟ್ಟಕ್ಕೆ ಏರಿಸುವಲ್ಲಿ ಯೋಜನೆ ಪಾತ್ರ ಬಹಳಷ್ಠಿದೆ. ಗ್ರಾಮೀಣ ಜನರ ಅಭ್ಯುದಯದಲ್ಲಿ ಸ್ವಸಹಾಯ ಸಂಘಗಳು ಬಹುಮುಖ್ಯ ಪಾತ್ರವಹಿಸಿದೆ ಎಂದು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ಮತ್ತು ಸುಬ್ರಹ್ಮಣ್ಯ ವಲಯದ ಒಕ್ಕೂಟ ಪದಾಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ಅವರ ಕಾರ್ಯ ಕೌಶಲ್ಯ ಹೆಚ್ಚಿಸಲು ವಿಫುಲ ಅವಕಾಶ ಲಭ್ಯವಾಗುತ್ತದೆ ಆದುದರಿಂದ ತರಬೇತಿಗಳು ಅತ್ಯವಶ್ಯಕ.ತರಬೇತಿಗಳು ಕೌಶಲ್ಯ ವೃದ್ಧಿಗೆ ಮಾರ್ಗದರ್ಶಕವಾಗಿದೆ.ಆದುದರಿಂದ ಹೆಚ್ಚು ಹೆಚ್ಚು ತರಬೇತಿ ಕಾರ್ಯಾಗಾರಗಳು ನಡೆಯುವುದು ಅತ್ಯವಶ್ಯಕ ಎಂದರು.
ಗುತ್ತಿಗಾರು ಗ್ರಾ.ಪಂ.ಅಧ್ಯಕ್ಷ ಅಚ್ಚುತ್ತ ಗುತ್ತಿಗಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್, ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಸೀತಾರಾಮ್, ಆಂತರಿಕ ಲೆಕ್ಕ ಪರಿಶೋಧಕ ಉಮೇಶ್, ಸೇವಾ ಪ್ರತಿನಿಧಿಗಳಾದ ಲೋಕೇಶ್, ತಿಮ್ಮಪ್ಪ, ಹರಿಶ್ಚಂದ್ರ, ಸವಿತಾ, ಉಷಾ ವೇದಿಕೆಯಲ್ಲಿದ್ದರು.