ಬೆಳ್ಳಾರೆ : ಕೊಡಿಯಾಲದ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ಎರಡು ತಿಂಗಳಿನಿಂದ ತೆರೆದಿಲ್ಲ. 15 ದಿನಕ್ಕೊಮ್ಮೆ ಬಂದು ಹೋಗುವ ಗ್ರಾಮ ಲೆಕ್ಕಾಧಿಕಾರಿಯನ್ನು ಬದಲಾಯಿಸದಿದ್ದಲ್ಲಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ಕೊಡಿಯಾಲ ಗ್ರಾಮ ಸಭೆಯಲ್ಲಿ ಎಚ್ಚರಿಸಿದರು.
ಕೊಡಿಯಾಲ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಸಭೆಯ ನೋಡೆಲ್ ಅಧಿಕಾರಿ ಅರಬಣ್ಣ ಪೂಜೇರಿ ತೋಟಗಾರಿಕಾ ಇಲಾಖಾ ಮಾಹಿತಿ ನೀಡಲು ಮುಂದಾದಾಗ ಗ್ರಾಮಸ್ಥ ಇಸಾಕ್ , ಕೊಳೆರೋಗದ ನೋಂದಣಿಗೆ ಗ್ರಾಮ ಲೆಕ್ಕಾ ಧಿಕಾರಿ ಕಚೇರಿಗೆ ಹೋಗಬೇಕು ಆದರೆ ಕೊಡಿಯಾಲದಲ್ಲಿ ಗ್ರಾಮ ಲೆಕ್ಕಾಧಿಕಾರಿಯೇ ಇಲ್ಲ. ಎರಡು ತಿಂಗಳಲ್ಲಿ ಎರಡು ಬಾರಿ ಕಚೇರಿ ತೆರೆದಿದೆ. ಇಂತಹ ಅಧಿಕಾರಿ ನಮಗೆ ಬೇಡ ಬದಲಾಯಿಸಿ ಎಂದು ಒತ್ತಾಯಿಸಿದರು.
ಗ್ರಾಮಸ್ಥ ಕರುಣಾಕರ ರೈ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿ ಗ್ರಾಮ ಸಭೆಗೂ ಬರದೆ ತಪ್ಪಿಸುತ್ತಿದ್ದಾರೆ. ಕೊಡಿಯಾಲದ ಸ್ಮಶಾನದ ಜಾಗ ಗುರುತು ಮಾಡಲು ಹೇಳಿ ಎಷ್ಟೋ ವರ್ಷವಾಯಿತು ಆದರೂ ಮಾಡಿಲ್ಲ. ಇನ್ನು ಗ್ರಾಮದಲ್ಲಿ ಯಾರಾದರೂ ಸತ್ತರೆ ಹೆಣವನ್ನು ಪಂಚಾಯತ್ ಎದುರು ಇಟ್ಟು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ಕೊಳೆರೋಗ ನೋಂದಣಿ, ಜಾಗದ ದಾಖಲೆ, ಮಕ್ಕಳ ದಾಖಲಾತಿಗೆ ಬೇಕಾದ ದಾಖಲೆಗಳಿಗೆ ಗ್ರಾಮ ಲೆಕ್ಕಾಧಿಕಾರಿ ಬೇಕು. ಆದರೆ 15 ದಿನಕ್ಕೋಮ್ಮೆ ಬರುವ ಅಧಿಕಾರಿಯನ್ನು ಬದಲಾಯಿಸಬೇಕು ಇದೇ ಅಧಿಕಾರಿ ಮತ್ತೆ ಬಂದು ಬಾಗಿಲು ತೆಗೆದರೆ ಬೀಗ ಹಾಕಿ ಪ್ರತಿಭಟಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಗ್ರಾಮ ಲೆಕ್ಕಾಧಿಕಾರಿಯನ್ನು ಬದಲಾಯಿಸುವಂತೆ ಗ್ರಾಮಸ್ಥರ ಒತ್ತಾಯನ್ನು ನಿರ್ಣಯ ಮಾಡಿ ತಹಶೀಲ್ದಾರರಿಗೆ ಕಳುಹಿಸಲು ನಿರ್ಧರಿಸಲಾಯಿತು.
ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳ ಗೈರು: ಆಕ್ರೋಶ
ಗ್ರಾಮ ಸಭೆಗೆ ತಾ.ಪಂ. ಸದಸ್ಯರು, ಜಿ.ಪಂ.ಸದಸ್ಯರು, ಒಬ್ಬರು ಗ್ರಾಮ ಪಂಚಾಯತ್ ಸದಸ್ಯೆ ಸೇರಿದಂತೆ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದಾರೆ. ಅವರು ಬರದಿದ್ದರೆ ಗ್ರಾಮ ಸಭೆ ನಡೆಸುವುದು ಯಾಕೆ? ಎಂದು ಸಭೆಯ ಆರಂಭದಲ್ಲಿ ಇಸಾಕ್ ಮಾಲೆಂಗ್ರಿ ಮತ್ತು ಆನಂದ ನಾಯಕ್ ಪ್ರಶ್ನಿಸಿದರು. ಸಭೆಗೆ ಬರಬೇಕೆಂದು ಎಲ್ಲರಿಗೂ ನೋಟೀಸು ಕಳುಹಿಸಿದ್ದೇವೆ. ಗ್ರಾಮಸ್ಥರ ಯಾವುದೇ ಬೇಡಿಕೆಗಳಿದ್ದರೂ ನಿರ್ಣಯ ಮಾಡಿ ಅವರಿಗೆ ಕಳುಹಿಸಲಾಗುವುದು ಎಂದು ಅಧ್ಯಕ್ಷ ಮೋಹನ ಸಾಲಿಯಾನ್ ಹೇಳಿದರು.
ಕಾಣಿಯೂರು- ಬಾಚೋಡಿ ರಸ್ತೆ, ಮೂವಪ್ಪೆ-ಕಾಣಿಯೂರು ರಸ್ತೆ ದುರಸ್ತಿಗೆ ಗ್ರಾಮಸ್ಥರು ಸಭೆಯಲ್ಲಿ ಮನವಿ ಮಾಡಿದರು. ಅಜೃಂಗಲ-ಮರಿಕೇಯಿ ರಸ್ತೆಯನ್ನು ಎನ್.ಆರ್.ಇ.ಜಿಗೆ ಸೇರಿಸಿ ಎಂದು ಜಯರಾಮ ಶೆಟ್ಟಿ ಮನವಿ ಮಾಡಿದರು. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕನ್ನಡ ಬರುವ ಸಿಬಂದಿಗಳನ್ನು ನೇಮಿಸಿ ಎಂದು ಇಸಾಕ್ ಮನವಿ ಮಾಡಿದರು.
ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೂವಪ್ಪ ಗೌಡ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.