ಸಂಪಾಜೆ : ಮೊಣ್ಣಂಗೇರಿಯ ಆ ಸರಕಾರಿ ಶಾಲೆಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು, ಮಳೆಗೆ ಒದ್ದೆಯಾಗಿ ಬಂದು ಸಂಭ್ರಮಿಸುತ್ತಿದ್ದ ಮಕ್ಕಳ ಮನೆ ಪಕ್ಕದ ಪ್ರಾಥಮಿಕ ಶಾಲೆಗೆ ಬೀಗ ಬಿದ್ದು ವರ್ಷ ಕಳೆದಿದೆ.
ಮೊಣ್ಣಂಗೇರಿಯ ಪ್ರದೇಶದ ಜನರು ಆಗಸ್ಟ್ ತಿಂಗಳು, ಮಳೆಗಾಲ ಎಂದಾಗ ಈಗಲೂ ಕರಾಳ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅದರಲ್ಲಿ ಒಂದು ಭಾಗ ಮಕ್ಕಳ ವಿದ್ಯಾಭ್ಯಾಸ. ಜಲಪ್ರಳಯದ ಕಾರಣದಿಂದ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮವಾಯಿತು. ಇಡೀ ಗ್ರಾಮದ ಕಿರೀಟದಂತಿದ್ದ ಶಾಲೆ ಕಳೆದ ಆಗಸ್ಟ್ ನಂತರ ಇಂದಿನವರೆಗೂ ತೆರಯಲಿಲ್ಲ..!
ಎರಡನೇ ಮೊಣ್ಣಂಗೇರಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇತ್ತು. ಸುಮಾರು 25 ರಿಂದ 30 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದರು. ಅಂಗನವಾಡಿಯೂ ಇಲ್ಲೇ ಹತ್ತಿರದಲ್ಲಿ ಇತ್ತು. ಸದಾ ಮಕ್ಕಳ ಕಲರವ, ಲವಲವಿಕೆ ನಲಿದಾಡುತ್ತಿದ್ದ ಮೊಣ್ಣಂಗೇರಿಯ ಈ ಕಿರಿಯ ಪ್ರಾಥಮಿಕ ಶಾಲೆ ಪ್ರಳಯದ ನಂತರ ತೆರೆಯಲೇ ಇಲ್ಲ. ಹಲವು ತಿಂಗಳುಗಳ ಕಾಲ ಮನೆಗಳ ಬಾಗಿಲು ಮುಚ್ಚಿದ್ದ ಕಾರಣ ಮಕ್ಕಳು ಶಾಲೆಗೆ ಬಾರದಂತಾದರು. ಬಳಿಕ ಇಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಪೋಷಕರು ಸಂಬಂಧಿಕರಲ್ಲಿಂದ ಹಾಸ್ಟೆಲ್ ಗಳಿಂದ ಹಾಗೂ ಮತ್ತಿತರ ಕಡೆ ಶಾಲೆಗಳಿಗೆ ಸೇರಿಸಿದರು. ಪ್ರಳಯದ ನೋವಿನ ಜೊತೆಗೆ ಮಕ್ಕಳಿಂದಲೂ ದೂರ ಉಳಿಯಬೇಕಾದ ಮಾನಸಿಕ ಸ್ಥಿತಿ ಇಲ್ಲಿನ ಜನರದ್ದಾಯಿತು.
ಕಳೆದ ಆಗಸ್ಟ್ ನಂತರ ಈ ಶಾಲೆಗೆ ಮಕ್ಕಳನ್ನು ಕಳಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಮೊಣ್ಣಂಗೇರಿಯ ಸುನಿತಾ.
ನಮ್ಮ ಬದುಕು ಹಾಗಾಯಿತು. ಆದರೆ ಮಕ್ಕಳ ಶಿಕ್ಷಣವೂ ಕುಂಠಿತವಾಗುವುದು ಬೇಡವೆಂದು ದೂರದ ಶಾಲೆಗೆ ಹಾಕಿದ್ದೇವೆ. ಈ ವರ್ಷವೂ ಕುಸಿತವಾದರೆ ಮಕ್ಕಳ ಬದುಕು ಹೇಗೆ ಎಂಬ ಚಿಂತೆಯಲ್ಲಿದ್ದಾರೆ ಮೊಣ್ಣಂಗೇರಿಯ ವನಿತಾ.
ಇದ್ದುದರಲ್ಲಿ ಒಳ್ಳೆಯದಿತ್ತು ಮೊಣ್ಣಂಗೇರಿಯ ಶಾಲೆ, ಆದರೆ ಏನು ಮಾಡೋಣ, ಜಲಪ್ರಳಯದ ಕಾರಣದಿಂದ ಎಲ್ಲಾ ವ್ಯವಸ್ಥೆಯೂ ಬದಲಾಗಬೇಕಾಯಿತು. ಹೇಗೋ ಬದುಕು ಸಾಗಿಸುತ್ತೇವೆ. ನಮಗೆ ಕಷ್ಟವಾದರೂ ಚಿಂತೆ ಇಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎನ್ನುವುದು ಸುಂದರ ನಾಯ್ಕ್ ಅವರ ಅಭಿಪ್ರಾಯ.
ಇಂದಿಗೂ ಮೊಣ್ಣಂಗೇರಿಯ ಶಾಲೆ ಸುಂದರವಾದ ಕಟ್ಟಡಿಂದ ಕಂಗೊಳಿಸುತ್ತಿದೆ, ಮೇಲಿನ ಪ್ರದೇಶದ ಗುಡ್ಡ ಬಾಯಿ ತೆರೆದು ನಿಂತಿದೆ. ಈ ಮಳೆಗಾಲ ಏನಾಗುತ್ತೋ ಎಂಬ ಅವ್ಯಕ್ತ ಭಯ ಆ ಪ್ರದೇಶದ ಜನರಲ್ಲಿ ಕಾಣುತ್ತಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಜಲಪ್ರಳಯವು ಮೊಣ್ಣಂಗೇರಿಯ ವಿದ್ಯಾ ದೇಗುಲವನ್ನು ನುಂಗಿತು….!"