ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಜೀವನದಿ ಬರಿದಾಗುತ್ತಿದೆ, ಬರಿದಾಗಿದೆ.
ಎರಡು ವರ್ಷಗಳಿಂದ ಈ ಎಚ್ಚರಿಕೆಯನ್ನು ಪರಿಸರ ಪ್ರೇಮಿಗಳಿಂದ ತೊಡಗಿ ಎಲ್ಲರೂ ಹೇಳುತ್ತಲೇ ಬಂದಿದ್ದರು. ಈ ಬಾರಿ ವಿಪರೀತ ಬಿಸಿಲಿನ ಕಾರಣದಿಂದ ಬತ್ತಿದೆ. ಮಂಗಳೂರು ನಗರಕ್ಕೆ ರೇಶನ್ ಮಾದರಿ ನೀರು ಸರಬರಾಜು ನಡೆಯುತ್ತಿದೆ. ಪ್ರತೀ ವರ್ಷ ಹೀಗೆಯೇ ಇರುತ್ತದೆ ಅಂತ ಅಲ್ಲ, ಆದರೆ ,ಇನ್ನು ಹೆಚ್ಚಿನ ವರ್ಷ ಹೀಗೆ ಇರುವುದು ನಿಶ್ಚಿತ.
ನಿನ್ನೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭಕ್ತಾದಿಗಳಿಗೆ ಮನವಿ ಮಾಡಿ, “ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ, ಹೀಗಾಗಿ ಭಕ್ತಾದಿಗಳಲ್ಲಿ ಪ್ರವಾಸ ಮುಂದೂಡಿ” ಎಂದು ಪ್ರಕಟಣೆ ನೀಡಿದ್ದರು. ಕ್ಷಣ ಮಾತ್ರದಲ್ಲಿ ಜಿಲ್ಲೆಯ, ರಾಜ್ಯದ ಎಲ್ಲಾ ಕಡೆಗಳಿಗೂ ಈ ಸುದ್ದಿ ತಲಪಿತು. ನೀರಿನ ಕೊರತೆ ಧರ್ಮಸ್ಥಳ, ನೇತ್ರಾವತಿಯಲ್ಲೂ ಇರುವುದು ತಿಳಿಯಿತು. ಇದೊಂದೇ ಅಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ಕುಮಾರಧಾರಾ , ಪಯಸ್ವಿನಿ ನದಿಯೂ ಬತ್ತಿದೆ. ಪಯಸ್ವಿನಿ ನದಿಯ ಪರಿಸ್ಥಿತಿ ಇನ್ನೂ ಭೀಕರ ಇದೆ. ಕಳೆದ ಬಾರಿ ಕೊಡಗಿನ ದುರಂತದ ನಂತರ ಇಡೀ ಮಣ್ಣು ರಾಶಿ ರಾಶಿ ಬಂದು ಹೂಳಾಗಿ ನದಿಯಲ್ಲಿ ತುಂಬಿದೆ. ಈಗ ನೀರಿನ ಹರಿವು ಬತ್ತಿದೆ. ಸಮಸ್ಯೆ ಆರಂಭವಾಗಿದೆ. ಕುಮಾರಧಾರಾ ನದಿಯಲ್ಲೂ ನೀರಿನ ಹರಿವು ಕಡಿಮೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳು ಬತ್ತುತ್ತಿರುವ ಬಗ್ಗೆ ಈಗಲ್ಲ, ಎರಡು ವರ್ಷದ ಹಿಂದಿನಿಂದಲೇ ಎಚ್ಚರಿಸಲಾಗಿತ್ತು. ಪರಿಸರ ಪ್ರೇಮಿಗಳು, ಪರಿಸರ ವಾದಿಗಳು, ಪರಿಸರದ ಬಗ್ಗೆ ಅಲ್ಪ ಸ್ವಲ್ಪ ತಿಳಿದ ಎಲ್ಲರೂ ಹೇಳಿದ್ದರು. ನೀರಿನ ಸಮಸ್ಯೆ ದಕ್ಷಿಣ ಕನ್ನಡದಲ್ಲಿ ಕಾಣಲಿದೆ, ಇದಕ್ಕೆ ಪ್ರಮುಖ ಕಾರಣ ನದಿ ತಿರುಗಿಸುವ ಯೋಜನೆ, ಅರಣ್ಯ ನಾಶ ಸೇರಿದಂತೆ ಹತ್ತು ಹಲವು ಕಾರಣವನ್ನೂ ಕೊಟ್ಟಿದ್ದರು. ಆದರೆ ಆಗ ಯಾರೊಬ್ಬರೂ ಮಾತನಾಡಿಲ್ಲ. ಸುಮಾರು 5 ವರ್ಷದ ಹಿಂದೆ ನೇತ್ರಾವತಿ ನದಿ ತಿರುವು ಯೋಜನೆ, ಪರಿಸರ ರಕ್ಷಣೆಯ ಬಗ್ಗೆ ಪುತ್ತೂರಿನ ಕಾಲೇಜಿನ ವಿದ್ಯಾರ್ಥಿಗಳು ಇಡೀ ಜಿಲ್ಲೆಯಲ್ಲಿ ಉಪನ್ಯಾಸಕರೊಬ್ಬರ ನೇತೃತ್ವದಲ್ಲಿ ಅಭಿಯಾನ ಮಾಡಿದ್ದರು. ಈ ಅಭಿಯಾನದ ವಿರುದ್ಧ ಕೆಲ ರಾಜಕಾರಣಿಗಳು ಕತ್ತಿ ಮಸೆದಿದ್ದರು. ಅದಾದ ಬಳಿಕ ನೇತ್ರಾವತಿ ನದಿ ತಿರುವು ಬದಲಾಗಿ ಬೇರೊಂದು ಹೆಸರಿನಲ್ಲಿ ಯೋಜನೆ ಬಂದಿದೆ, ಜಾರಿಯಾಗಿದೆ ಕೋಟಿ ಕೋಟಿ ಖರ್ಚಾಗುತ್ತಿದೆ. ಅನೇಕ ಮರಗಳು ಧರೆಗೆ ಉರುಳಿದೆ. ಮಳೆ ನಾಡಲ್ಲೂ ಮಳೆ ಕಡಿಮೆಯಾಗುತ್ತಿದೆ. ನೀರೆಲ್ಲಾ ಬತ್ತುತ್ತಿದೆ….!. ಈಗ ಹವಾಮಾನ ವೈಪರೀತ್ಯದ ಕಾರಣದಿಂದ ಎಲ್ಲಿ ಮಳೆ ಬೀಳಬೇಕೋ ಅಲ್ಲಿ ಬೀಳದೆ, ನಗರದಲ್ಲೋ, ಎಲ್ಲೆಲ್ಲೋ ಮಳೆಯಾಗುತ್ತದೆ.
ಈಗ ಟ್ವಿಟ್ಟರ್ ಅಭಿಯಾನ ಶುರುವಾಗಿದೆ. ನೀರಿನ ಸಮಸ್ಯೆ ಇರುವ ಮಂದಿ ಮಾತ್ರವಲ್ಲ ಕಾಳಜಿ ಇರುವ ಮಂದಿಯೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಮುಖ್ಯಮಂತ್ರಿಗಳಿಗೆ ಟ್ವೀಟ್ ಮಾಡಲು ಮುಂದಾಗಿದ್ದಾರೆ. ಈ ಜಾಗೃತಿ ಕಾರ್ಯದ ಬಗ್ಗೆ ಎರಡು ಮಾತಿಲ್ಲ. ಇಂದು ಅಗತ್ಯವೇ ಆಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಾದರೂ ಮಳೆ ಬರಿಸಲು, ದಕ್ಷಿಣ ಕನ್ನಡ ಸಹಿತ ಯಾವುದೇ ಜೀವನದಿಯನ್ನು ಹೇಗೆ ಮರುಸೃಷ್ಠಿ ಮಾಡಲು ಸಾಧ್ಯ ?. ಇಷ್ಟೂ ವರ್ಷ ಜಿಲ್ಲೆಯಲ್ಲಿದ್ದ ಜನಪ್ರತಿನಿಧಿಗಳು, ಸಂಸದರು, ಶಾಸಕರು ಸಚಿವರುಗಳು ಮೌನವಾಗಿದ್ದು ಈಗ ಪ್ರಧಾನಿ ನರೇಂದ್ರ ಮೋದಿ ಅವರು , ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏನು ಮಾಡಲು ಸಾಧ್ಯ.
ಆಗಬೇಕಿರುವುದು ಪ್ರಧಾನಿ, ಮುಖ್ಯಮಂತ್ರಿಗಳಿಂದ ಅಲ್ಲ ಸ್ಥಳೀಯ ಜನನಾಯಕರಿಂದ ದಕ್ಷಿಣ ಕನ್ನಡ ಸೇರಿದಂತೆ ಆಯಾ ಜಿಲ್ಲೆಯ ಜನರಿಂದ. ಆಗ ಮಳೆ ಬರಬಹುದು, ಬೆಳೆಯೂ ಬೆಳೆಯಬಹುದು. ನೀರು ಹರಿಯಬಹುದು. ಈ ಪ್ರಯತ್ನ ಆಗಲಿ. ಭವಿಷ್ಯದ ದೃಷ್ಠಿಯಿಂದ ಇದಕ್ಕೇನು ಮಾಡಬಹುದು ಎಂಬ ಚಿಂತನೆ ಶುರುವಾಗಲಿ. ಆ ಹೆಜ್ಜೆ ಇಡೋಣ ಜೊತೆಯಾಗಿ….

ಕೃಷಿಕ, ಪತ್ರಕರ್ತ
Be the first to comment on "ಜೀವನದಿ ಬರಿದಾದ ಮೇಲೆ ನರೇಂದ್ರ ಮೋದಿಜೀ ಏನು ಮಾಡಲು ಸಾಧ್ಯ ?"