ತಾಯಿಯ ಮಡಿಲು…..

Advertisement
#  ಸಹ್ಯಾದ್ರಿ ರೋಹಿತ್ , ಕಡಬ
    ಅಮ್ಮ, ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ ? ಅಳುವ ಕಂದನ ಮುದ್ದು ಮುದ್ದಾದ ತೊದಲ
ನುಡಿಯಿಂದ.  “ಅಮ್ಮ” ಅನ್ನೋ ಎರಡಕ್ಷರದಲ್ಲಿ ಸಕಲ ಜೀವರಾಶಿಗಳ ಉಸಿರು ಅಡಗಿದೆ . ಅಪ್ಪ
ಹೇಗೆ ಜನ್ಮದಾತನೂ ಹಾಗೆ ಅಮ್ಮ ಜನ್ಮವನ್ನಿತ್ತು  ಸಲಹುವವಳು . ಒಂದು ಮಗುವಿಗೆ ಅಪ್ಪ ಇಲ್ಲ ಅನ್ನೋದಕ್ಕಿಂತ ಆ ಮಗುವಿಗೆ ಅಮ್ಮ ಇಲ್ಲ ಅನ್ನೋ ಮಾತು ಎಲ್ಲರ ಕರುಳು
ಹಿಂಡುತ್ತದೆ .ಆ ಮಗು ಏನು ಅರಿಯದ ಸಣ್ಣ ಮಗುವಾಗಿದ್ದರಂತೂ ಪ್ರತಿಯೊಬ್ಬರ ಮನಸ್ಸು ಅದರ ಹಣೆಬರಹಕ್ಕಾಗಿ ಕೊರಗುತ್ತದೆ .
    ಅಮ್ಮಂದಿರ ದಿನವನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಂದು
ಆಚರಿಸುತ್ತಾರೆ . ಇದು ಒಂದು ಕುಟುಂಬದಲ್ಲಿನ ತಾಯಿ, ಅವಳ ತಾಯ್ತನ, ತಾಯಿಯ ಬಂಧಗಳು ಮತ್ತು ಸಮಾಜದಲ್ಲಿ ತಾಯಂದಿರ ಪ್ರಭಾವವನ್ನು ಗೌರವಿಸುವಂತಹ  ಆಚರಣೆಯಾಗಿದೆ.  ಪ್ರಪಂಚದ ಅನೇಕ ಭಾಗಗಳಲ್ಲಿ ವಿವಿಧ ದಿನಗಳಲ್ಲಿ ಅಂದರೆ ಸಾಮಾನ್ಯವಾಗಿ ಮಾರ್ಚ್ ಅಥವಾ ಮೇ ತಿಂಗಳುಗಳಲ್ಲಿ ಆಚರಿಸಲಾಗುತ್ತದೆ. ಇದು ಫಾದರ್ಸ್ ಡೇ, ಒಡಹುಟ್ಟಿದವರ ದಿನ, ಮತ್ತು ಗ್ರಾಂಡ್ ಪೇರೆಂಟ್ಸ್ ಡೇ ಮುಂತಾದ ಕುಟುಂಬ ಸದಸ್ಯರನ್ನು ಗೌರವಿಸುವ ಇದೇ ರೀತಿಯಾದಂತಹ ಆಚರಣೆಗಳಲ್ಲಿ ಒಂದಾಗಿದೆ.
 ನಗರದಲ್ಲಿ ಇತ್ತೀಚಿಗೆ ಅದೆಷ್ಟೋ ಹೆಂಗಸರು ಸಣ್ಣ ಕಂದಮ್ಮಗಳನ್ನು ಎತ್ತಿಕೊಂಡು
ಒಂದು ಹೊತ್ತಿನ ಕೂಳಿಗಾಗಿ ಭಿಕ್ಷೆ ಬೇಡುತ್ತಿರುವುದನ್ನು ನೋಡುತ್ತಿರುತ್ತೇವೆ .
ಹಾಗೆಯೇ ಒಂದು ಬುದ್ದಿಮಾಂದ್ಯ ಮಗುವನ್ನು ಗಾಡಿಯಲ್ಲಿ ಕುಳ್ಳಿರಿಸಿ, ಉಸಿರಾಡಲು ಸಂಕಟ ಪಡುತ್ತಿರುವ ಆ  ಮಗುವಿಗೆ ನೀರುಣಿಸುತ್ತಿರುವ ತಾಯನ್ನು ಕಂಡಾಗ ಮರುಗದೆ ಇರುವ ಹೃದಯಗಳು ವಿರಳ .ಅವಳ ಉದ್ದೇಶಗಳು ಏನೇ ಇರಬಹುದು. ಮಗು ಅವಳದ್ದು ಅಲ್ಲದೇ ಇರಬಹುದು. ಅಂತಹ ಮಗುವನ್ನು ಕರೆದುಕೊಂಡು ಬಂದು ಹಣ ಮಾಡುವ ಉದ್ದೇಶವಿರಬಹುದು,ಇಲ್ಲವೇ ಅದರ ಚಿಕಿತ್ಸೆಗಾಗಿ ಇರಬಹುದು.  ಆದರೆ ಅದನ್ನು ಕಂಡಾಗ ಪ್ರತಿಯೊಬ್ಬರ ಮನದಲ್ಲಿನ ತಾಯಿ ಹೃದಯ ಅಯ್ಯೋ ಪಾಪ ಎಂದು ಮರುಗುವುದಂತೂ ಸಹಜ .
    ಕೆಲವು ಸಂದರ್ಭದಲ್ಲಿ ಅಮ್ಮನ ಅನುಪಸ್ಥಿತಿಯಲ್ಲಿ ಅಪ್ಪನೂ ಅಮ್ಮನಾಗಬಲ್ಲ .
ಅಜ್ಜಿಯೂ ತನ್ನ ಮೊಮ್ಮಗುವನ್ನು ತಾಯಿಯಂತೆ  ಪ್ರೀತಿಸಬಲ್ಲಳು.  ಪಕ್ಷಿ ,ಪ್ರಾಣಿಗಳು
ಕೂಡಾ ತನ್ನ ಮರಿಗಳಿಗೆ ತೋರಿಸುವ ಅಕ್ಕರೆ ,ಮಮತೆ ಇವುಗಳನ್ನೆಲ್ಲಾ ಬರೆಯ ಮಾತಿನಲ್ಲಿ ಅಂದಾಜಿಸಲಾಗದು.
      ಹೇಗೆಂದು ಬಣ್ಣಿಸಲಿ ಅಮ್ಮನ ಬಗ್ಗೆ ? . ನೋವಾದಾಗ ಮೊದಲು ನೆನಪಾಗುವವಳು ಅಮ್ಮ. ಶಾಲೆಗೆ ಹೊರಡುವ ಸಮಯದಲ್ಲೂ, ಅಮ್ಮ ನನ್ನ ಬ್ಯಾಗ್ ಎಲ್ಲಿ ?ಅಮ್ಮ ನನ್ನ ಕರ್ಚಿಫ್ ಎಲ್ಲಿ ?ಎಂಬ ಹುಡುಕಾಟದಲ್ಲೂ ಅಮ್ಮನೇ ಬೇಕು. ತನ್ನ ಎದೆ ಚಿಪ್ಪಿನಲ್ಲಿ ಜೋಪಾನವಾಗಿ, ತನ್ನ ಮಗುವಿಗೆ ತಾನು ಸಾಯುವವರೆಗೆ ಯಾವುದೇ ನೋವು , ಕಷ್ಟಗಳು ಬರಬಾರದು, ಒಳ್ಳೆಯ ಜೀವನ ಅದಕ್ಕೆ ಸಿಗಬೇಕು ಎಂದು ಕಾತರಿಸಿ ಕಾಯುವವಳು ಅಮ್ಮ. ಅಪ್ಪ ಮನೆಗೆ ಏನೇ ತಿಂಡಿ ತಂದರು ತಾನು ತಿನ್ನದೇ ತನ್ನ ಮಕ್ಕಳಿಗಾಗಿ ಎತ್ತಿಡುವವಳು ಅಮ್ಮ , ಮಕ್ಕಳಿಬ್ಬರು ಯಾವುದಾದರೊಂದು ವಿಷಯಗಳಿಗೆ ಜಗಳವಾಡುತ್ತಿದ್ದರೆ ,ಇಬ್ಬರಿಗೂ ಸರಿ ಸಮಾನವಾದ ನ್ಯಾಯ
ಒದಗಿಸುವ ನ್ಯಾಯಾಧೀಶೆ ಅಮ್ಮ , ತಪ್ಪಿದ್ದರೆ ನಾಲಕ್ಕು ಪೆಟ್ಟು ಕೊಟ್ಟು ,ತಿದ್ದಿ
ಬುದ್ದಿ ಹೇಳುವವಳು ಅಮ್ಮ , ತನ್ನ ಮಗಳು ಮದುವೆಯಾಗಿ ಗಂಡನ ಮನೆಗೆ ಹೊರಡುವಾಗ ಅಪ್ಪನಾದವನು ಮನಸ್ಸಲ್ಲೇ ಕೊರಗಿದರೆ, ಅಮ್ಮನಾದವಳು ಎರಡು ಬುದ್ದಿ ಮಾತು ಹೇಳಿ ಕಣ್ಣಂಚಲ್ಲಿ ಕಂಬನಿ ಮಿಡಿದು ಕಳಿಸುವಳು . ಅಪ್ಪನ ಜವಾಬ್ದಾರಿಯ ಪ್ರತಿಯೊಂದನ್ನೂ ಸಮದೂಗಿಸಿ ಸಂಸಾರದ ಹೆಜ್ಜೆಗೆ ಪ್ರತಿಹೆಜ್ಜೆ ಆಗುವವಳು ಅಮ್ಮ. ಯಾರಾದರೂ ಹಸಿವಾಗಿದೆ ಊಟ ಹಾಕಮ್ಮ ಎಂದರೆ  ಕರಗಿ ನೀರಾಗುವವಳು ಅಮ್ಮ. ತನ್ನ ಮಗು ಬಿದ್ದು ಗಾಯ ಮಾಡಿಕೊಂಡಿತೆಂದರೆ ಅಯ್ಯೋ ಎಂದು ತನಗೆ ನೋವಾದಂತೆ ಮರುಗುವವಳು ಅಮ್ಮ . ಹೊರಗೆ ಹೋದ ತನ್ನ ಮಗು ಮನೆಗೆ ಬರುವುದು ಸ್ವಲ್ಪ ತಡವಾದರೂ ಚಿಂತಿತಳಾಗುವವಳು ಅಮ್ಮ. ತನ್ನ ಕಂದ ಊಟ
ಮಾಡದಿದ್ದಾಗ ಚುಕ್ಕಿ ಚಂದ್ರಮರನ್ನು ತೋರಿಸಿ ತುತ್ತು ನೀಡುವವಳು ಅಮ್ಮ . ರಚ್ಚೆ
ಹಿಡಿದ ಮಗುವನ್ನು ಸಮಾಧಾನ ಪಡಿಸಲು ಗೊಗ್ಗಯ್ಯ ಬಂದ ಎಂದು ಹೆದರಿಸಿ ,ಸುಮ್ಮನಾಗಿಸಿ ತನ್ನ ಸೆರಗಲ್ಲಿ ಬಚ್ಚಿಡುವವಳು ಅಮ್ಮ.
ಹೇಗೆಂದು ಬಣ್ಣಿಸಲಿ ಅಮ್ಮನನ್ನು? ಅಮ್ಮನಿಗೆ ಅಮ್ಮನೇ ಸಾಟಿ.
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ತಾಯಿಯ ಮಡಿಲು….."

Leave a comment

Your email address will not be published.


*