ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶುಭದಾ ಎಸ್ ರೈ ಅವರ ಮೇಲೆ ಮಾನಹಾನಿಕರವಾದ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದವರ ಮೇಲೆ ಮತ್ತು ಭಿತ್ತಿ ಪತ್ರ ಮತ್ತು ಕರಪತ್ರಗಳ ಮೂಲಕ ಅಪಪ್ರಚಾರ ಮಾಡಿದವರ ಮೇಲೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಲೂಕು ಪಂಚಾಯತ್ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ತಾ.ಪಂ.ಅಧ್ಯಕ್ಷ ಚನಿಯ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಜನ ಪ್ರತಿನಿಧಿಯ ಮೇಲೆ ಈ ರೀತಿ ಮಾಡಿದವರ ವಿರುದ್ಧ ಸೈಬರ್ ದಾಳಿ ಮತ್ತು ಭಿತ್ತಿ ಪತ್ರ ಹರಡಿದವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಈ ಕುರಿತು ಚರ್ಚೆ ನಡೆದು ಒಂದು ವಾರದಲ್ಲಿ ತನಿಖೆಯ ಪ್ರಗತಿಯ ವರದಿಯನ್ನು ತಾ.ಪಂ.ಅಧ್ಯಕ್ಷರಿಗೆ ಸಲ್ಲಿಸಲು ಮತ್ತು ಅಪಪ್ರಚಾರ ಹರಡಿದವರ ಮೇಲೆ ಸೂಕ್ತ ಕ್ರಮಕ್ಕೆ ಸಭೆ ಸೂಚಿಸಿತು. ಈ ವಿಷಯವನ್ನು ಪ್ರಕರಣದ ತನಿಖೆ ನಡೆಸುವ ಅಧಿಕಾರಿಯ ಗಮನಕ್ಕೆ ತರುವುದಾಗಿ ಸುಳ್ಯ ಎಸ್.ಐ ಸಭೆಗೆ ತಿಳಿಸಿದರು.
ವಿವಿಧ ಸಮಸ್ಯೆಗಳ ಬಗ್ಗೆ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಾ.ಪಂ.ಸಹಾಯಕ ನಿರ್ದೇಶಕ ಭವಾನಿಶಂಕರ, ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.