ಮಂಗಳೂರು: ವಾಣಿಜ್ಯ ತೆರಿಗೆ ಇಲಾಖಾ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಅಡಿಕೆ ಸಾಗಾಟದ ಮೇಲೆ ನಿಗಾ ಇರಿಸಿದ್ದಾರೆ. ಇದೀಗ ಶಿವಮೊಗ್ಗ ಮತ್ತು ಸಾಗರ ದಲ್ಲಿ ಬುಧವಾರ 13 ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 11 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಅನಧಿಕೃತವಾಗಿ ಸಂಗ್ರಹಿಸಿದ್ದನ್ನು ಪತ್ತೆ ಮಾಡಿದ್ದು ಜಿಎಸ್‌ಟಿ ಅಡಿಯಲ್ಲಿ 1.1 ಕೋಟಿ ತೆರಿಗೆ ಮತ್ತು ದಂಡವನ್ನು ವಿಧಿಸಿದ್ದಾರೆ.
ಕಳೆದ ವಾರ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಐದು ಗೋದಾಮುಗಳಲ್ಲಿ 3.1 ಕೋಟಿ ಮೌಲ್ಯದ ಅಡಿಕೆಯನ್ನು ಪತ್ತೆ ಮಾಡಿ 31 ಲಕ್ಷ ತೆರಿಗೆ ವಿಧಿಸಿದ್ದರು. ಅದಕ್ಕೂ ಮೊದಲು ಮಂಗಳೂರು ಸೇರಿದಂತೆ ವಿವಿದೆಡೆ ದಾಳಿ ನಡೆಸಿದ ತೆರಿಗೆ ಇಲಾಖಾ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಅಡಿಕೆಯನ್ನು ಸೂಕ್ತವಾದ ದಾಖಲೆಗಳಿಲ್ಲ ಸಾಗಾಟ ಮಾಡುವುದು ಹಾಗೂ ಸಂಗ್ರಹ ಮಾಡಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಶಿವಮೊಗ್ಗ , ಸಾಗರದಲ್ಲಿಯೂ ಕೂಡಾ ದೊಡ್ಡ ಪ್ರಮಾಣದಲ್ಲಿ ಅಡಿಕೆ ದಾಸ್ತಾನು ಇರುವುದರ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬುಧವಾರ ಮುಂಜಾನೆ ಶಿವಮೊಗ್ಗದ ಒಂಬತ್ತು ಸ್ಥಳಗಳಲ್ಲಿ ಮತ್ತು ಸಾಗರದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ತೆರಿಗೆ ತಪ್ಪಿಸಿ ಅಡಿಕೆ ಸಾಗಾಟ ಮಾಡುವ ಹಾಗೂ ಅಡಿಕೆ ಗ್ರೇಡ್ ಗಳಲ್ಲಿ ವಂಚನೆ ಬಗ್ಗೆಯೂ ತೆರಿಗೆ ಇಲಾಖೆಯ ಅಧಿಕಾರಿಗಳು ನಿಗಾ ಇರಿಸಿದ್ದಾರೆ ಎಂದು ತಿಳಿದುಬಂದಿದೆ.