ಸುಳ್ಯ: ಸುಳ್ಯದಲ್ಲಿ ನಡೆಯುವ ದಸರಾ ಮೂಲಕ ಜನರಿಗೆ ಸಂಸ್ಕಾರ ತುಂಬುವ, ಸಂಸ್ಕೃತಿ ಪಸರಿಸುವ ಕೆಲಸ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಸುಳ್ಯ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಹಾಗೂ ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇವುಗಳ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಶಾರದಾಂಬ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಳ್ಯದಲ್ಲಿ ನಡೆಯುವ ದಸರಾ ಕಾರ್ಯಕ್ರಮವು ಜಿಲ್ಲೆಯ ಎರಡನೇ ಅತಿದೊಡ್ಡ ನಾಡಹಬ್ಬವಾಗಿದೆ. ಸುಳ್ಯದಲ್ಲಿ ನೀವು ನಿರಂತರ 47 ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಶಾರದೆಗೆ ಶಕ್ತಿ ಪ್ರಾಪ್ತಿಯಾಗಿದೆ. ಅವಳು ಭಕ್ತರ ದುರಿತಗಳನ್ನು ದೂರಮಾಡುತ್ತಾಳೆ ಮತ್ತು ನಿಮ್ಮ ಆರಾಧನೆಗೆ ಅವಳು ಒಲಿಯುತ್ತಾಳೆ. 50 ನೇ ವರ್ಷದ ದಸರಾ ಕಾರ್ಯಕ್ರಮಕ್ಕೆ ಇಡೀ ಜಿಲ್ಲೆಯ ಜನ ಬಂದು ಸೇರುವಂತಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ ತಾಲೂಕಿನ ಪ್ರತಿಭೆಗಳಾದ ತುಷಾರ್ ಗೌಡ, ಅನುಶ್ರೀ ಕೇಕಡ್ಕ, ಶುಭದಾ ಆರ್.ಪ್ರಕಾಶ್, ನಿತಿನ್ ಡಿ.ಆರ್. ದೇಂಗೋಡಿ ಮತ್ತು ಮೋನಿಷಾ ಆಲಂಕಳ್ಯ ರವರನ್ನು ಸಂಸದ ಕಟೀಲ್ ಸನ್ಮಾನಿಸಿದರು.
ಗರೋಡಿ ಸ್ಟೀಲ್ಸ್ ನ ವ್ಯವಸ್ಥಾಪಕ ಚೇತನ್ ಅತಿಥಿಯಾಗಿದ್ದರು. ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲದಾಸ್ ಸ್ವಾಗತಿಸಿದರು. ಅಧ್ಯಕ್ಷ ನಾರಾಯಣ ಕೇಕಡ್ಕ ಪ್ರಾಸ್ತಾವಿಕ ಭಾಷಣಗೈದರು. ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ವಂದಿಸಿದರು. ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಕೆ.ರಾಜು ಪಂಡಿತ್, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀದೇವಿ ನಾಗರಾಜ ಭಟ್ ಮತ್ತು ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.